ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಅಮಾನತು | ಬಿಜೆಪಿಯಿಂದ ಪ್ರಜಾಪ್ರಭುತ್ವ ವಿರೋಧಿ ನೀತಿ: ಕಾಂಗ್ರೆಸ್‌ ಆರೋಪ

Published 23 ಡಿಸೆಂಬರ್ 2023, 6:41 IST
Last Updated 23 ಡಿಸೆಂಬರ್ 2023, 6:41 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಮೇಲೆ ಮಾಡುತ್ತಿರುವ ಆಕ್ರಮಣ ಹಾಗೂ ಉಭಯ ಸದನಗಳ ವಿರೋಧ ಪಕ್ಷದ ಸಂಸತ್ ಸದಸ್ಯರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಮೈಲಾರ ಮಹದೇವ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜೆ.ಪಿ.ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿತು. ನಂತರ ಕಾಂಗ್ರೆಸ್ ಕಾರ್ಯಕರ್ತರು ಕೆಲಹೊತ್ತು ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಭದ್ರತಾ ಲೋಪಕ್ಕೆ ಸ್ಪಷ್ಟೀಕರಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರೆ, ರಾಜ್ಯಸಭೆ ಹಾಗೂ ಲೋಕಸಭೆ ಸಂಸದರನ್ನು ಅಮಾನತು ಮಾಡಿದ್ದಾರೆ. ವಿಪಕ್ಷಗಳನ್ನು ಹೊರಗಿಟ್ಟು ಸಂಸತ್‍ನಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ದೂರಿದರು.

ಕಾಂಗ್ರೆಸ್ ಪಕ್ಷ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ತಮ್ಮ ನಿಲುವು ಬದಲಾಯಿಸಬೇಕು. ಸಂಸತ್ ಭವನ ಆವರಣದಲ್ಲಿ ನಡೆದ ಘಟನೆ ಬಗ್ಗೆ ವಿಚಾರ ತಿಳಿಸಬೇಕು. ಅದನ್ನು ಬಿಟ್ಟು ವಿರೋಧ ಪಕ್ಷಕ್ಕೆ ಇರುವ ಪ್ರಶ್ನಿಸುವ ಹಕ್ಕನ್ನು ಮೊಟಕು ಗೊಳಿಸುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದರು.

ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಸಂಸತ್ ಭವನದಲ್ಲಿ ಇತ್ತೀಚೆಗೆ ನಡೆದ ಬಣ್ಣದ ಅನಿಲ ಹೊಗೆ ಸಿಂಪಡಿಸಿದ ಘಟನೆ ಭದ್ರತಾ ವೈಫಲ್ಯಕ್ಕೆ ಕಾರಣವಾಗಿದ್ದು, ಇದು ಬಿಜೆಪಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಾಸ್ ದುರ್ಬಳಕೆ ಮಾಡಿಕೊಂಡು ಇಂತಹ ಘಟನೆ ನಡೆಸಿರುವುದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ತೋರುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಸವರಾಜ ಬಳ್ಳಾರಿ, ಕೆ.ಎಂ.ಸುಂಕದ, ಪ್ರಭು ಬಿಷ್ಟನಗೌಡ್ರ, ಸಂಜಯಗಾಂಧಿ ಸಂಜೀವಣ್ಣನವರ, ಪ್ರೇಮಾ ಪಾಟೀಲ, ಗಣೇಶ ಬಿಷ್ಟಣ್ಣನವರ, ಎಂ. ಜೆ.ಮುಲ್ಲಾ, ಶಾಂತಕ್ಕ ಶಿವಪೂರ, ಪೀರಸಾಬ್ ಚೋಪದಾರ, ಸುನೀಲ ಜಮಾದಾರ, ಹಜ್ಮತಬಿ ರಿತ್ತಿ, ಪ್ರೇಮಾ, ಮಂಜು ದದ್ದೂರ, ಅತಾವುಲ್ಲಾ ಖಾಜಿ, ರಮೇಶ ಮಡಿವಾಳರ, ಮಲ್ಲೇಶಪ್ಪ ಪಟ್ಟಣಶೆಟ್ಟಿ ಇದ್ದರು.

ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕಾಂಗ್ರೆಸ್ ಕಾರ್ಯಕರ್ತರಿಂದ ಕೆಲಹೊತ್ತು ರಸ್ತೆ ತಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT