ಗುರುವಾರ , ಮೇ 19, 2022
20 °C
ರಸ್ತೆ ಹದಗೆಟ್ಟ ಪರಿಣಾಮ ಬಸ್‌ ಸಂಚಾರ ರದ್ದು: ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು

ಹಾವೇರಿ: ಗೌಳಿದಡ್ಡಿ ನಿವಾಸಿಗಳ ‘ಅರಣ್ಯ ರೋದನ’

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ದುಂಡಶಿ ಅರಣ್ಯ ವಲಯದಲ್ಲಿ ಜಾನುವಾರುಗಳೊಂದಿಗೆ ಬದುಕು ಕಟ್ಟಿಕೊಂಡಿರುವ ಶಿಗ್ಗಾವಿ ತಾಲ್ಲೂಕಿನ ‘ಗೌಳಿದಡ್ಡಿ’ ನಿವಾಸಿಗಳ ಕೂಗು ಅಕ್ಷರಶಃ ಅರಣ್ಯ ರೋದನವಾಗಿದೆ. ಮೂಲಸೌಕರ್ಯಗಳಿಂದ ವಂಚಿತರಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. 

ತಾಲ್ಲೂಕು ಕೇಂದ್ರ ಶಿಗ್ಗಾವಿಯಿಂದ 18 ಕಿ.ಮೀ. ದೂರದಲ್ಲಿರುವ ಗೌಳಿದಡ್ಡಿ, ಮುಂಡಗೋಡ ಪಟ್ಟಣಕ್ಕೆ 5 ಕಿ.ಮೀ. ಸನಿಹದಲ್ಲಿದೆ. ಹೀಗಾಗಿ ಇವರ ಬದುಕು ಮತ್ತು ವ್ಯವಹಾರ ಮುಂಡಗೋಡದೊಂದಿಗೆ ಬೆಸೆದುಕೊಂಡಿದೆ. ಶಿಗ್ಗಾವಿಯಿಂದ ಹೊಸೂರು–ಅರಟಾಳ ಮಾರ್ಗವಾಗಿ ಗೌಳಿದಡ್ಡಿಗೆ ಹೋಗುವವರು, ಕಾಡಿನಲ್ಲಿ 5 ಕಿ.ಮೀ. ದುರ್ಗಮ ಹಾದಿಯನ್ನು ಸವೆಸಬೇಕು. ಕೆಸರು ಮತ್ತು ಜಲ್ಲಿಕಲ್ಲುಗಳಿಂದ ಕೂಡಿದ ಈ ಹದಗೆಟ್ಟ ರಸ್ತೆಯಲ್ಲಿ ಬೈಕ್‌ ಸವಾರಿ ಕೂಡ ದುಬಾರಿ.  


ಎಮ್ಮೆಗಳನ್ನು ಮೇಯಿಸಲು ಕರೆದೊಯ್ಯುತ್ತಿರುವ ಗೌಳಿ

ಬಸ್‌ ಸಂಚಾರ ಸ್ಥಗಿತ: ಶಿಗ್ಗಾವಿಯಿಂದ ಗೌಳಿದಡ್ಡಿ ಮಾರ್ಗವಾಗಿ ಮುಂಡಗೋಡಕ್ಕೆ ಹೋಗುತ್ತಿದ್ದ ಬಸ್‌ ಸಂಚಾರ ಸ್ಥಗಿತಗೊಂಡು ಬರೋಬ್ಬರಿ 9 ವರ್ಷಗಳಾಗಿವೆ. ಕಾರಣ, ಈ ಕಚ್ಚಾ ರಸ್ತೆಯಲ್ಲಿ ಬಸ್‌ ಓಡಿಸುವ ಧೈರ್ಯವನ್ನು ಯಾವ ಚಾಲಕರೂ ತೋರುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಕಾಲ್ನಡಿಗೆಯನ್ನೇ ನೆಚ್ಚಿಕೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ಬೈಕ್‌ ಸವಾರರೇ ಇವರ ಪಾಲಿಗೆ ಆಪತ್ಬಾಂಧವರು. ‘ಅಧಿಕಾರಿಗಳು ಇಲ್ಲಿಗೆ ಬರುವುದು ಅಪರೂಪ. ಜನಪ್ರತಿನಿಧಿಗಳ ಭೇಟಿ ಚುನಾವಣೆ ಬಂದಾಗ ಮಾತ್ರ’ ಎಂಬುದು ನಿವಾಸಿಗಳ ಬೇಸರದ ನುಡಿ. 

ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಗೌಳಿದಡ್ಡಿಯಲ್ಲಿ ಹಿಂದೂ ದನಗರ್‌ ಗೌಳಿ ಮರಾಠ ಸಮುದಾಯದವರು ಸುಮಾರು 60 ವರ್ಷದಿಂದ ನೆಲೆಸಿದ್ದಾರೆ. ‘ಗೌಟಿ’ ತಳಿಯ ಎಮ್ಮೆಗಳ ಸಾಕಣೆಯೇ ಇವರ ಮುಖ್ಯ ಕಸುಬು. ಹೈನುಗಾರಿಕೆಯೇ ಜೀವನಾಧಾರ. ಮುಂಡಗೋಡ ಪಟ್ಟಣದಲ್ಲಿ ಮನೆ–ಮನೆಗೆ ಹೋಗಿ ಹಾಲು ವಿತರಿಸುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಚರಂಡಿ, ಒಳರಸ್ತೆಗಳಿಲ್ಲದ ಕಾರಣ ಮಳೆಗಾಲದಲ್ಲಿ ದಡ್ಡಿ ತುಂಬಾ ಕೊಳಚೆ ನೀರು ನಿಂತು ದುರ್ನಾತ ಬೀರುತ್ತಿದೆ. ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.    

ಶಾಲೆಗೆ ಗುಡ್‌ಬೈ: ಈ ಗೌಳಿದಡ್ಡಿಯಲ್ಲಿ ಅಂಗನವಾಡಿ ಕೇಂದ್ರವಿದ್ದು, 3ರಿಂದ 6 ವರ್ಷದೊಳಗಿನ 27 ಮಕ್ಕಳು ಅಕ್ಷರ ಕಲಿಯುತ್ತಿದ್ದಾರೆ. ಆದರೆ, ಪ್ರಾಥಮಿಕ ಶಿಕ್ಷಣಕ್ಕೆ 3 ಕಿ.ಮೀ. ದೂರದ ನ್ಯಾಸರ್ಗಿಗೆ ಮತ್ತು ಪ್ರೌಢಶಾಲೆಗೆ ಮುಂಡಗೋಡಕ್ಕೆ ಹೋಗಬೇಕು. ಮಳೆಗಾಲದಲ್ಲಿ ಕಾಡು ಹಾದಿಯಲ್ಲಿ ಹೋಗುವುದೇ ಮಕ್ಕಳಿಗೆ ದೊಡ್ಡ ಸವಾಲು. ಹೀಗಾಗಿ ಇಲ್ಲಿನ ಬಹುತೇಕ ಮಕ್ಕಳು 6, 7ನೇ ತರಗತಿಗೆ ಶಾಲೆಯನ್ನು ಬಿಟ್ಟಿದ್ದಾರೆ. ಅದಕ್ಕೆ ಬಡತನವೂ ಕಾರಣ ಎನ್ನಲಾಗುತ್ತಿದೆ. ಈ ದಡ್ಡಿಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರು ಇಬ್ಬರು ಮಾತ್ರ. 

‘ಎಸ್ಸೆಸ್ಸೆಲ್ಸಿಯಲ್ಲಿ ಶೇ 55 ಅಂಕ ಪಡೆದಿದ್ದೇನೆ. ಆದರೆ, ಬಡತನದ ಕಾರಣದಿಂದ ಕಾಲೇಜಿಗೆ ಹೋಗಿಲ್ಲ. 2 ಎಕರೆ ಗೇಣಿ ಹಿಡಿದು ಕೃಷಿ ಮಾಡುತ್ತಿದ್ದೇವೆ. ಬಿಡುವಿನ ವೇಳೆಯಲ್ಲಿ ಹೊಲದ ಕೆಲಸಕ್ಕೆ ಕೂಲಿಗೆ ಹೋಗುತ್ತೇನೆ. ನನ್ನ ತಂಗಿ ಕೂಡ ಎಸ್ಸೆಸ್ಸೆಲ್ಸಿ ಪಾಸಾಗಿದ್ದು, ಅವಳನ್ನು ಮದುವೆ ಮಾಡಿಕೊಟ್ಟಿದ್ದೇವೆ. ನಮ್ಮ ದಡ್ಡಿಯಲ್ಲೇ ಹಿರಿಯ ಪ್ರಾಥಮಿಕ ಶಾಲೆ ಆರಂಭಿಸಿದರೆ, ಮಕ್ಕಳು ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ನಿವಾಸಿ ಬಾಬು ಬೀರು ಎಡಗಿ. 

ಒಡೆದ ಪೈಪ್‌: ‘ಕುಡಿಯುವ ನೀರು ಪೂರೈಸುವ ವಾಟರ್‌ ಟ್ಯಾಂಕ್‌ ಪೈಪ್‌ ಒಡೆದು 6 ತಿಂಗಳಾಗಿದ್ದು, ನೀರು ಪೋಲಾಗುತ್ತಿದೆ. ಇದರಿಂದ ಗಲೀಜು ನೀರು, ಕುಡಿಯುವ ನೀರಿಗೆ ಸೇರುತ್ತಿದೆ. ಮಕ್ಕಳು, ವಯೋವೃದ್ಧರು ಕಲುಷಿತ ನೀರು ಕುಡಿಯುತ್ತಿರುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಪಿಡಿಒ ಬಂದು ಭೇಟಿ ಕೊಟ್ಟರೂ ಇದುವರೆಗೂ ದುರಸ್ತಿಯಾಗಿಲ್ಲ. ಎಮ್ಮೆಗಳಿಗೂ ನೀರಿನ ಸಮಸ್ಯೆ ಕಾಡುತ್ತಿದೆ’ ಎಂದು ಗಂಗಾರಾಮ್‌ ಜೋರೆ ಸಮಸ್ಯೆ ತೋಡಿಕೊಂಡರು. 


ದಡ್ಡಿಗೆ ಹೋಗಲು ಇರುವ ಕಾಡಿನಲ್ಲಿರುವ ಕಚ್ಚಾದಾರಿ

ಪಡಿತರ ತರಲು ಪಡಿಪಾಟಲು: ಗೌಳಿದಡ್ಡಿ ನಿವಾಸಿಗಳಿಗೆ ಪ್ರತಿ ತಿಂಗಳು ಪಡಿತರ ತರುವುದೇ ದೊಡ್ಡ ಚಿಂತೆ. ಕಾರಣ 10 ಕಿ.ಮೀ. ದೂರದ ಹೊಸೂರಿಗೆ ಹೋಗಿ ಪಡಿತರ ತರಬೇಕೆಂದರೆ ವಾಹನ ಸೌಲಭ್ಯವಿಲ್ಲ. ಕಾಡುಹಾದಿಯಲ್ಲಿ ಕೆಲವರು ಕಾಲ್ನಡಿಗೆಯಲ್ಲಿ ಹೋದರೆ, ಮತ್ತೆ ಕೆಲವರು ಮುಂಡಗೋಡಕ್ಕೆ ಹೋಗಿ ಅಲ್ಲಿಂದ ಬಸ್‌ ಮೂಲಕ ಹೊಸೂರು ತಲುಪುತ್ತಾರೆ. ಇದರಿಂದ 25 ಕಿ.ಮೀ. ಬಳಸು ಹಾದಿಯನ್ನು ಅವರು ಸವೆಸಿ, ಮತ್ತೆ ಅದೇ ಮಾರ್ಗದಲ್ಲಿ ಹಿಂದಿರುಗಬೇಕು.

‘ಪಡಿತರ ತರಲು ಇಡೀ ದಿನ ಮೀಸಲಿಡಬೇಕು. ಇದರಿಂದ ಅಂದಿನ ದಿನಗೂಲಿ ಕೈತಪ್ಪುತ್ತದೆ. ಜತೆಗೆ ನಾವು ಪ್ರಯಾಣಕ್ಕೆ ಮಾಡುವ ಖರ್ಚು ದುಬಾರಿ. ನಮ್ಮೂರಿಗೆ ಅಂಗನವಾಡಿ ಪಡಿತರ ತರುವ ಲಾರಿಯಲ್ಲೆ ನಮಗೆ ಪಡಿತರ ಕಳುಹಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂಬುದು ಎಂಬುದು ನಿವಾಸಿಗಳ ಒಕ್ಕೊರಲ ಮನವಿ. 

ಪ್ರತಿಕ್ರಿಯೆಗಳು: 

ಕರಡಿ ದಾಳಿಯಿಂದ ನಾಲ್ಕೈದು ಮಂದಿಗೆ ಗಾಯಗಳಾಗಿವೆ. ಒಬ್ಬರು ತೀರಿಕೊಂಡಿದ್ದಾರೆ. ರಸ್ತೆ ಸರಿ ಇಲ್ಲದ ಕಾರಣ ನಮ್ಮೂರಿಗೆ ಬಸ್‌, ಆಂಬುಲೆನ್ಸ್‌ ಬರುವುದಿಲ್ಲ.
– ಗಂಗಾರಾಮ್‌ ಜೋರೆ, ಗೌಳಿದಡ್ಡಿ ನಿವಾಸಿ

*
ಬೀದಿದೀಪಗಳು ಕೆಟ್ಟುನಿಂತಿವೆ, ಕುಡಿಯುವ ನೀರು ಕಲುಷಿತಗೊಂಡಿದೆ. ಶಾಲೆಯಿಲ್ಲದ ಕಾರಣ ಮಕ್ಕಳು ಕೂಲಿಗೆ ಹೋಗುತ್ತಿದ್ದಾರೆ. ನಮ್ಮ ಬದುಕು ಮೂರಾಬಟ್ಟೆಯಾಗಿದೆ
– ಬಾಬು ಬೀರು ಎಡಗಿ, ಗೌಳಿದಡ್ಡಿ ನಿವಾಸಿ

*
ಹುಲಿ ದಾಳಿಗೆ 19 ಎಮ್ಮೆಗಳು ಸತ್ತಿವೆ. ಒಂದು ಎಮ್ಮೆ ಗಾಯಗೊಂಡಿದೆ. ಅರಣ್ಯ ಇಲಾಖೆಯಿಂದ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ನಮ್ಮ ಗೋಳು ಯಾರಿಗೂ ಕೇಳಿಸುತ್ತಿಲ್ಲ.
– ಕೊಂಡುಬಾಯಿ ಜೋರೆ, ಗೌಳಿದಡ್ಡಿ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು