ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭ

ಲೋಕಸಭಾ ಚುನಾವಣಾ ಮಾದರಿ ನೀತಿಸಂಹಿತೆ ಜಾರಿ: ಜಿಲ್ಲಾಡಳಿತ ಸಕಲ ಸಿದ್ಧತೆ– ಡಿಸಿ
Published 16 ಮಾರ್ಚ್ 2024, 15:49 IST
Last Updated 16 ಮಾರ್ಚ್ 2024, 15:49 IST
ಅಕ್ಷರ ಗಾತ್ರ

ಹಾವೇರಿ: ಹದಿನೆಂಟನೆಯ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಇಂದಿನಿಂದಲೇ (ಮಾರ್ಚ್ 16ರ ಸಂಜೆಯಿಂದ) ಮಾದರಿ ನೀತಿಸಂಹಿತೆ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ (ಜಿಲ್ಲೆಯಾದ್ಯಂತ) ಜಾರಿಗೆ ಬಂದಿದೆ. ಹಾವೇರಿಯ 5 ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರ ಒಳಗೊಂಡ ಹಾವೇರಿ–ಗದಗ ಲೋಕಸಭಾ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಹಾವೇರಿ ಲೋಕಸಭಾ ಚುನಾವಣೆ 3ನೇ ಹಂತದಲ್ಲಿ ನಡೆಯಲಿದೆ. ಏಪ್ರಿಲ್‌ 12ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿ ನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

ಮೇ 7ರಂದು ಮತದಾನ: ಏ.19ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ನಡೆಯಲಿದೆ. ಜೂನ್‌ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಜೂನ್‌ 6ರೊಳಗಾಗಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

ಹಾವೇರಿ ಜಿಲ್ಲಾಧಿಕಾರಿಗಳು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿದ್ದು, ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಬೇಕು ಎಂದು ತಿಳಿಸಿದರು.

ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 17,77,877 ಮತದಾರಿದ್ದಾರೆ. ಈ ಪೈಕಿ 85 ವರ್ಷ ಮೇಲ್ಪಟ್ಟ 15,521 ಮತದಾರರು, 27,434 ಅಂಗವಿಕಲ ಮತದಾರರು, 1,607 ಸೇವಾ ಮತದಾರರು ಹಾಗೂ 18ರಿಂದ 19 ವರ್ಷದ 50,658 ಮತದಾರರಿದ್ದಾರೆ.

ಮತಯಂತ್ರ ವಿವರ: 3,746 ಬ್ಯಾಲೆಟ್ ಯುನಿಟ್, 2497 ಕಂಟ್ರೋಲ್ ಯುನಿಟ್ ಹಾಗೂ 2,630 ವಿವಿಪ್ಯಾಟ್ ಯಂತ್ರಗಳ ಲಭ್ಯವಿದೆ. ಮೊದಲ ಹಂತದ ತಪಾಸಣೆ ಕಾರ್ಯ ನಡೆಸಲಾಗಿದೆ. ಕ್ಷೇತ್ರವಾರು ಮೊದಲ ಹಂತದ ರ‍್ಯಾಂಡಮೈಜೇಷನ್ ಮಾಡಲಾಗಿದೆ.

ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ( ಹಾವೇರಿ-ಗದಗ ಜಿಲ್ಲೆ) 1371, ಸ್ಥಳಗಳಲ್ಲಿ 1982 ಮತಗಟ್ಟೆಗಳನ್ನು ತೆರೆಯಲಾಗುವುದು. 39 ದುರ್ಬಲ ಹಾಗೂ 370 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ವಿದ್ಯುತ್‌ ದೀಪ, ಶೌಚಾಲಯ, ಪೀಠೋಪಕರಣ, ಇಳಿಜಾರು ಸೌಲಭ್ಯ (ರ‍್ಯಾಂಪ್‌), ನಿರೀಕ್ಷಣಾ ಕೊಠಡಿ ಕಲ್ಪಿಸಲಾಗುವುದು ಎಂದರು. 

ಅಧಿಕಾರಿಗಳ ವಿವರ: ಹಾವೇರಿ ಜಿಲ್ಲಾ ಚುನಾವಣಾಧಿಕಾಯಾಗಿ ಹಾವೇರಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ (94484 84413) ಹಾಗೂ ಗದಗ ಚುನಾವಣಾಧಿಕಾರಿಯಾಗಿ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ (63611 86356) ಅವರು ಕಾರ್ಯನಿರ್ವಹಿಸುತ್ತಾರೆ. ಹಾವೇರಿ ಜಿಲ್ಲಾ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸಲಿದ್ದಾರೆ.

ಹಾವೇರಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ (86187 42288) ಹಾಗೂ ಗದಗ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ (99643 23899) ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳಿದ್ದಾರೆ.

ಹಿಂದಿನ ಚುನಾವಣೆ ಫಲಿತಾಂಶ: ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ 8,71,250 ಪುರುಷರು, 8,35,586 ಮಹಿಳೆಯರು ಹಾಗೂ 73 ಇತರರು ಸೇರಿದಂತೆ 17,06,917 ಮತದಾರರ ಪೈಕಿ 6,61,382 ಪುರುಷ ಹಾಗೂ 6,01,824 ಮಹಿಳಾ ಮತದಾರರು ಸೇರಿ 13,63,206 (ಶೇ 74.01)ಮತದಾರರು ಮತದಾನ ಮಾಡಿದ್ದರು.

ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಇದ್ದರು. 

ಚುನಾವಣಾ ದೂರು ನಿರ್ವಹಣೆಗೆ ಉಚಿತ ಸಹಾಯವಾಣಿ 1950 ಸ್ಥಾಪಿಸಲಾಗಿದೆ. ಗದಗ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ 08372-239177 ಸ್ಥಾಪಿಸಲಾಗಿದೆ
ರಘುನಂದನ ಮೂರ್ತಿ ಜಿಲ್ಲಾ ಚುನಾವಣಾ ಅಧಿಕಾರಿ

ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 15521 ಮತದಾರರು ಹಾಗೂ 27434 ಅಂಗವಿಕಲ ಮತದಾರರು ಒಳಗೊಂಡಂತೆ ಒಟ್ಟು 42955 ಮತದಾರರಿದ್ದು ಅವರು ಬಯಸಿದರೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಮೊದಲೇ ಅವರಿಗೆ ಮತದಾನದ ಕೋರಿಕೆ ಪತ್ರ ನೀಡಲಾಗುವುದು. ಮನೆಯಲ್ಲೇ ಮತದಾನ ಮಾಡಲು ಬಯಸಿ ನಮೂನೆಯನ್ನು ಭರ್ತಿ ಮಾಡಿ ಸಹಿ ಮಾಡಿಕೊಟ್ಟರೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು. 

ಹಾವೇರಿ ಜಿಲ್ಲೆಯಲ್ಲಿ 18 ಹಾಗೂ ಗದಗ ಜಿಲ್ಲೆಯಲ್ಲಿ 10 ಸೇರಿ ಒಟ್ಟು 28 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಲಿದೆ. ಪ್ರತಿ ಚೆಕ್ ಪೋಸ್ಟ್‌ನಲ್ಲಿ ವೆಬ್‍ಕ್ಯಾಮರಾ ಅಳವಡಿಸಿದ್ದು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಗದಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ತಲಾ ಮೂರರಂತೆ ಹಾಗೂ ಹಾವೇರಿ ಕ್ಷೇತ್ರದ ಐದು ಕ್ಷೇತ್ರಗಳಿಗೆ ತಲಾ ಎರಡರಂತೆ 19 ವಿಡಿಯೊ ಕಣ್ಗಾವಲು ತಂಡ (ವಿ.ಎಸ್‍.ಟಿ) ತಲಾ ಒಂದರಂತೆ 8 ವಿಡಿಯೊ ವೀಕ್ಷಣಾ ತಂಡ (ವಿ.ವಿ.ಟಿ) 11 ಲೆಕ್ಕ ಪರಿಶೋಧಕರ ತಂಡ (ಎ.ಟಿ) 24 ಕ್ಷಿಪ್ರ ಪಡೆ (ಫ್ಲೈಯಿಂಗ್‌ ಸ್ಕ್ವಾಡ್‌) 8 ಸಹಾಯಕ ಖರ್ಚು–ವೆಚ್ಚ ತಂಡ ಹಾಗೂ 191 ಸೆಕ್ಟರ್ ಅಧಿಕಾರಿಗಳು (ಎಸ್‍.ಒ)ಗಳನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT