ಹಾವೇರಿ: ವಿಘ್ನ ನಿವಾರಕ ಗಣಪತಿ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಜಿಲ್ಲೆಯ ಹಲವು ಕಲಾವಿದರು ಕುಟುಂಬ ಸಮೇತರಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದಾರೆ. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಹಾಗೂ ಹಲವು ಕಡೆಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಇರಿಸಲಾಗಿದ್ದು, ಸ್ಥಳಕ್ಕೆ ಬರುತ್ತಿರುವ ಜನರು ಮುಂಗಡವಾಗಿ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ.
ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಎಲ್ಲ ಕಡೆಯೂ ಗಣಪತಿ ಹಬ್ಬದ ಸಡಗರ ಮನೆ ಮಾಡುತ್ತದೆ. ಈ ವರ್ಷ ಶ್ರಾವಣ ಮಾಸದ ಕೊನೆ ವಾರದಲ್ಲಿಯೇ ಜನರು, ಗಣಪತಿ ಹಬ್ಬಕ್ಕೆ ತಯಾರಿ ಶುರು ಮಾಡಿದ್ದಾರೆ. ಗಣಪತಿ ಮೂರ್ತಿಗಳು ಇರುವ ಸ್ಥಳಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಿರುವ ಜನರು, ತಮ್ಮಿಷ್ಟದ ಮೂರ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಪರಿಸರ ರಕ್ಷಣೆ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ತಯಾರಿ ಹಾಗೂ ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ನಡುವೆಯೇ ಕೆಲವರು, ಪಿಒಪಿ ಮೂರ್ತಿಗಳನ್ನು ತೆರೆಮರೆಯಲ್ಲಿ ಮಾರುತ್ತಿದ್ದಾರೆ. ಅವರನ್ನು ಪತ್ತೆ ಮಾಡಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಪಿಒಪಿ ಮೂರ್ತಿಗಳ ಭರಾಟೆಯ ನಡುವೆಯೂ ಹಲವು ಕಲಾವಿದರ ಕುಟುಂಬಗಳು, ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ. ದೇವಗಿರಿ ಸೇರಿದಂತೆ ಹಲವು ಗ್ರಾಮಗಳಲ್ಲಿರುವ ಹಲವು ಕುಟುಂಬಗಳು, ದಶಕಗಳಿಂದ ಮೂರ್ತಿ ತಯಾರಿಸುತ್ತಿದ್ದಾರೆ. ಇವರು ತಯಾರಿಸುವ ಮಣ್ಣಿನ ಮೂರ್ತಿಗಳಿಗೆ ಜಿಲ್ಲೆಯ ಜನರಿಂದ ಉತ್ತಮ ಬೇಡಿಕೆಯಿದೆ.
ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣಪತಿ ಮೂರ್ತಿಗಳನ್ನು ಹೊಂದಿಸಿಡಲಾಗಿದೆ. ಜಿಲ್ಲೆಯ ಹಾವೇರಿ, ಹಾನಗಲ್, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ಇತರೆ ತಾಲ್ಲೂಕಿನ ಜನರು ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಮ್ಮಿಷ್ಟದ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಮುಂಗಡವಾಗಿ ಜನರು ಕಾಯ್ದಿರಿಸುವ ಮೂರ್ತಿಗಳಿಗೆ, ನಂಬರ್‌ಗಳನ್ನು ಹಾಕಿಡಲಾಗುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವ ಗಣಪತಿ ಮೂರ್ತಿಗಳನ್ನೂ ದೇವಸ್ಥಾನದಲ್ಲಿ ಇರಿಸಲಾಗಿದೆ. 2 ಅಡಿಯಿಂದ 6 ಅಡಿಯಷ್ಟು ಎತ್ತರದ ದೊಡ್ಡ ಗಣಪತಿ ಮೂರ್ತಿಗಳು ಸಹ ದೇವಸ್ಥಾನದಲ್ಲಿವೆ. ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ಹೋಲುವ ರೀತಿಯಲ್ಲಿ ಗಣಪತಿ ಮೂರ್ತಿ ತಯಾರಿಸಲಾಗಿದ್ದು, ಹನುಮಂತನ ಮೂರ್ತಿ ಸಹ ರಚಿಸಲಾಗಿದೆ. ಈ ಮೂರ್ತಿ ನೋಡುಗರ ಗಮನ ಸೆಳೆಯುತ್ತಿದ್ದು, ಯಾವ ಪ್ರದೇಶದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
ಕೆರೆ ಮಣ್ಣು ಬಳಕೆ: ‘ಯುಗಾದಿ ಹಬ್ಬದಿಂದಲೇ ಗಣಪತಿ ಮೂರ್ತಿ ತಯಾರಿಕೆ ಆರಂಭವಾಗುತ್ತದೆ. ಹುಬ್ಬಳ್ಳಿ ಉಣಕಲ್ ಕೆರೆ ಹಾಗೂ ಇತರೆ ಕೆರೆಯ ಮಣ್ಣು ಬಳಸಿಕೊಂಡು ಮೂರ್ತಿ ತಯಾರಿಸಲಾಗಿದ್ದು, ಜನರಿಂದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ದೇವಗಿರಿಯ ಪುಷ್ಪಾ ಚಕ್ರಸಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆರೆ ಮಣ್ಣಿನ ಜೊತೆಯಲ್ಲಿ ಹತ್ತಿ ಹಾಗೂ ನಾರು ಬೆರೆಸಿ, ಹದ ಮಾಡಿ ಮೂರ್ತಿ ತಯಾರಿಕೆ ಮಾಡುತ್ತೇವೆ. ಇಂಥ ಮಣ್ಣಿನಿಂದ ತಯಾರಿಸುವ ಮೂರ್ತಿ, ಬೇಗನೇ ಬಿರುಕು ಬಿಡುವುದಿಲ್ಲ. ಈ ವರ್ಷ ನಾವು 300ಕ್ಕೂ ಹೆಚ್ಚು ಗಣಪತಿ ತಯಾರಿಸಿದ್ದೇವೆ. ಈ ಪೈಕಿ 200 ಗಣಪತಿ ಮೂರ್ತಿಗಳು ಈಗಾಗಲೇ ಬುಕ್ಕಿಂಗ್ ಆಗಿದೆ’ ಎಂದರು.
‘12 ವರ್ಷದಿಂದ ಮಗ ನಿಂಗರಾಜು ಹಾಗೂ ನಾನು, ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದೇವೆ. ನಮ್ಮ ಮೂರ್ತಿ ಖರೀದಿಸಲು ಕಾಯಂ ಗ್ರಾಹಕರಿದ್ದಾರೆ. ಹಾವೇರಿ ಮಾತ್ರವಲ್ಲದೇ ಸುತ್ತಮುತ್ತಲಿನ ಊರಿನ ಜನರು ನಮ್ಮ ಬಳಿ ಬಂದು ಮೂರ್ತಿ ಕಾಯ್ದಿರಿಸುತ್ತಿದ್ದಾರೆ’ ಎಂದು ಹೇಳಿದರು.
ಮೂರ್ತಿ ಕಾಯ್ದಿರಿಸಿದ ಖಾಸಗಿ ನೌಕರ ಕೃಷ್ಣ, ‘ಪ್ರತಿ ವರ್ಷವೂ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಈ ವರ್ಷವೂ ಮಣ್ಣಿನ ಗಣಪತಿ ಕಾಯ್ದಿರಿಸಲಾಗಿದೆ. ಕೆಲವರು ಪಿಒಪಿ ಮಾರುತ್ತಿದ್ದಾರೆ. ಅಂಥವರನ್ನು ಅಧಿಕಾರಿಗಳು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು. ಪರಿಸರ ರಕ್ಷಣೆ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.