ರಟ್ಟೀಹಳ್ಳಿ: ಪಟ್ಟಣದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ಸಂತೆಗೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಸಾಕಷ್ಟು ಜನ ತರಕಾರಿ, ಹಣ್ಣು, ಖರೀದಿಸಲು ಬರುತ್ತಾರೆ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕಳ್ಳರು ಸಂತೆಯಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ. ಇಲ್ಲಿ ಪ್ರತಿವಾರದ ಸಂತೆಯಲ್ಲಿ ಕನಿಷ್ಟ 4 ರಿಂದ 5 ಮೊಬೈಲ್ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಇದು ಕಳೆದ ಎರಡು ವರ್ಷಗಳಿಂದ ಮುಂದುವರಿದಿದೆ. ಯಾವುದೇ ನಿರ್ದಿಷ್ಟ ದಾಖಲೆಗಳನ್ನು ಹೊಂದಿರದ ಜನರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ.
ಸಾಕಷ್ಟು ಸಾರಿ ಸಾರ್ವಜನಿಕರು, ಮೊಬೈಲ್ ಕಳೆದುಕೊಂಡವರು ಪೊಲೀಸರಿಗೆ ಮೌಖಿಕವಾಗಿ ಮಾಹಿತಿ ನೀಡಿರುತ್ತಾರೆ. ಆದಾಗ್ಯೂ ಮೊಬೈಲ್ ಕಳ್ಳತನ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಸುವ್ಯವಸ್ಥಿತವಾದ ಸಂತೆ ಮೈದಾನ ಇರುವುದಿಲ್ಲ. ರಸ್ತೆಯ ಪಕ್ಕದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಾರೆ. ಅಲ್ಲದೆ ಕೆಲವೊಂದು ಸಣ್ಣಪುಟ್ಟ ವ್ಯಾಪಾರಸ್ಥರು ರಸ್ತೆಯ ಮಧ್ಯದಲ್ಲಿಯೇ ತಮ್ಮ ತರಕಾರಿ ಬುಟ್ಟಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಾರೆ. ಸಂತೆ ಜನದಟ್ಟಣಿಯಿಂದ ಕೂಡಿರುತ್ತದೆ. ನೌಕರರು ವಿಶೇಷವಾಗಿ ಸಂಜೆ ಕೆಲಸ ಮುಗಿಸಿ ತರಕಾರಿ ಕೊಳ್ಳಲು ಬಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಖದೀಮರ ತಮ್ಮ ಕೈಚಳಕ ತೋರಿಸುತ್ತಾರೆ.
ರಟ್ಟೀಹಳ್ಳಿ ಪಟ್ಟಣದಲ್ಲಿ ಜರುಗುವ ವಾರದ ಸಂತೆಯ ದಿನದಂದು ಕನಿಷ್ಟ ಐದು ಜನ ₹15 ರಿಂದ ₹20 ಸಾವಿರ ಬೆಲೆಬಾಳುವ ತಮ್ಮ ದುಬಾರಿ ಮೊಬೈಲ್ ಕಳೆದುಕೊಳ್ಳುತ್ತಾರೆ. ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಲ್ಲಿ ಮೊಬೈಲ್ ಖರೀದಿ ಬಿಲ್ ಇತ್ಯಾದಿ ಕಾಗದ ಪತ್ರಗಳನ್ನು ಕೇಳುತ್ತಾರೆ. ‘ಮೊಬೈಲ್ ಖರೀದಿಸಿದ ದಾಖಲೆಗಳನ್ನು ಬಹುತೇಕ ಜನರು ಹೊಂದಿರುವುದಿಲ್ಲ. ಹೀಗಾಗಿ ಪ್ರಕರಣ ದಾಖಲಿಸಲು ಸಾದ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಇಂತಹ ಖದೀಮರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು‘ ಎನ್ನುತ್ತಾರೆ ಮೊಬೈಲ್ ಕಳೆದುಕೊಂಡಿರುವ ತೋಟಗಂಟಿ ಗ್ರಾಮದ ಮಾಲತೇಶ ಈರಣ್ಣನವರ ಅವರು.
‘ಸಂತೆಯಲ್ಲಿ ಮೊಬೈಲ್ ಕಳ್ಳತನವಾಗುತ್ತಿರುವ ಕುರಿತು ಮಾಹಿತಿ ಪಡೆದಿರುತ್ತೇನೆ. ಪ್ರತಿವಾರ ಸಂತೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಮೊಬೈಲ್ ಖದೀಮರನ್ನು ಪತ್ತೆಹಚ್ಚಲಾಗುವುದು‘ ಎಂದು ರಟ್ಟೀಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಜಗದೀಶ ಜಿ. ‘ಪ್ರಜಾವಾಣಿ‘ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.