ಹಾವೇರಿ: ಜಿಲ್ಲೆಯ ಹಲವು ಗ್ರಾಮಗಳಿಗೆ ಇಂದಿಗೂ ಬಸ್ಸಿನ ವ್ಯವಸ್ಥೆಯಿಲ್ಲ. ನಿಗದಿತ ಸ್ಥಳದಲ್ಲಿ ಇಳಿದುಕೊಳ್ಳುವ ಜನರು, ಮೂರು ಚಕ್ರದ ಟಂಟಂ ಸೇರಿದಂತೆ ಖಾಸಗಿ ವಾಹನಗಳನ್ನು ಅವಲಂಬಿಸಿ ತಮ್ಮೂರು ತಲುಪುತ್ತಿದ್ದಾರೆ. ಈ ಸಂಚಾರದ ಸಮಯದಲ್ಲಿ ಟಂಟಂ ವಾಹನದ ಮೇಲೆ ಕುಳಿತು ಹಾಗೂ ಹೊರಗೆ ಕುಳಿತು ಜನರು ಪ್ರಯಾಣಿಸುತ್ತಿದ್ದು, ಅವರ ಜೀವಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಜಿಲ್ಲಾ ಕೇಂದ್ರ ಹಾವೇರಿ ಹಾಗೂ ಹಾನಗಲ್, ರಾಣೆಬೆನ್ನೂರು, ಶಿಗ್ಗಾವಿ, ತಡಸ, ಹಿರೇಕೆರೂರು, ಬ್ಯಾಡಗಿ, ಸವಣೂರು ತಾಲ್ಲೂಕಿನಲ್ಲಿ ಟಂಟಂ ವಾಹನಗಳ ಓಡಾಟ ಹೆಚ್ಚಿದೆ. ನಗರ ಹಾಗೂ ಪಟ್ಟಣಗಳಿಂದ ಗ್ರಾಮಗಳಿಗೆ ನಿತ್ಯವೂ 200ಕ್ಕೂ ಟಂಟಂ ವಾಹನಗಳು ಸಂಚರಿಸುತ್ತಿವೆ. ಪ್ರತಿ ಊರಿನಲ್ಲೂ ಟಂಟಂ ವಾಹನಗಳ ಪ್ರತ್ಯೇಕ ತಂಗುದಾಣಗಳು ಕಣ್ಣಿಗೆ ಕಾಣುತ್ತಿವೆ.

‘ಬರ್ರಿ, ಬರ್ರಿ... ಹಾವೇರಿಗೆ ಕೇವಲ ₹ 10, ₹ 20’ ಎಂದು ಕೂಗುವ ಟಂಟಂ ವಾಹನಗಳ ಚಾಲಕರು–ನಿರ್ವಾಹಕರು, ಜನರನ್ನು ಟಂಟಂನಲ್ಲಿ ಹತ್ತಿಸಿಕೊಳ್ಳುತ್ತಿದ್ದಾರೆ. ಮೂರು ಚಕ್ರದ ಟಂಟಂ ವಾಹನದ ನಿಗದಿತ ಆಸನ ಸಂಖ್ಯೆ ಮೀರಿ, ಹೆಚ್ಚಿನ ಪ್ರಯಾಣಿಕರನ್ನು ಟಂಟಂ ವಾಹನದಲ್ಲಿ ಹತ್ತಿಸಿಕೊಳ್ಳುತ್ತಾರೆ. ಒಳಗಡೆ ಜಾಗ ಸಾಲದಿದ್ದಾಗ, ಪ್ರಯಾಣಿಕರು ಹೊರಗಡೆ ನಿಲ್ಲುತ್ತಿದ್ದಾರೆ. ಕೆಲವರಂತೂ ಟಂಟಂ ವಾಹನದ ಮೇಲೆ ಕುಳಿತು ಸಂಚರಿಸುತ್ತಿದ್ದಾರೆ.

ಜಿಲ್ಲೆಯ ಪ್ರಮುಖ ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟಂಟಂ ವಾಹನಗಳ ಸಂಚಾರದ ದೃಶ್ಯಗಳು ನಿತ್ಯವೂ ಕಾಣಿಸುತ್ತಿವೆ. ಬಹುತೇಕ ಟಂಟಂ ವಾಹನಗಳಲ್ಲಿ ಪ್ರಯಾಣಿಕರು ಅಪಾಯದ ರೀತಿಯಲ್ಲಿ ಸಂಚರಿಸುತ್ತಿದ್ದಾರೆ. ಚಾಲಕ ಸ್ವಲ್ಪ ಎಚ್ಚರ ತಪ್ಪಿದರೂ ಟಂಟಂ ವಾಹನ ಉರುಳಿಬಿದ್ದು ಸಾವು– ನೋವು ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಗ್ರಾಮೀಣ ಭಾಗದ ಜನರು, ವಾರದ ಸಂತೆ ಹಾಗೂ ಇತರೆ ಕೆಲಸಗಳಿಗಾಗಿ ನಗರ ಹಾಗೂ ಪಟ್ಟಣಗಳಿಗೆ ಹೋಗಿ ಬರುತ್ತಿದ್ದಾರೆ. ಇವರ ಅಗತ್ಯತೆಗೆ ತಕ್ಕಂತೆ ಬಸ್ಗಳ ವ್ಯವಸ್ಥೆಯಿಲ್ಲ. ಅಕ್ಕ–ಪಕ್ಕದ ಕೆಲ ಗ್ರಾಮಗಳಿಗೆ ಹೋಗಿ, ಅಲ್ಲಿಂದ ಬಸ್ ಹತ್ತಬೇಕು. ಜನರು ಅನುಭವಿಸುತ್ತಿರುವ ಸಮಸ್ಯೆಯನ್ನು ಮನಕಂಡು ಗ್ರಾಮದ ಕೆಲ ಯುವಕರೇ, ಟಂಟಂ ವಾಹನ ಖರೀದಿಸಿ ಉದ್ಯೋಗ ಕೈಗೊಂಡಿದ್ದಾರೆ.

ಬಸ್ ಇಲ್ಲದಿರುವುದರಿಂದ ತಮ್ಮ ಗ್ರಾಮದ ಜನರಿಗೆ ಅನುಕೂಲವಾಗಲೆಂದು ಪ್ರತಿನಿತ್ಯವೂ ಟಂಟಂ ವಾಹನ ಚಲಾಯಿಸುತ್ತಿದ್ದಾರೆ. ಇಂಥ ಟಂಟಂ ವಾಹನಗಳಲ್ಲಿ ಜನರು ಹೆಚ್ಚಾಗಿ ಸಂಚರಿಸುತ್ತಿದ್ದಾರೆ. ಕೆಲ ಟಂಟಂ ವಾಹನಗಳ ಚಾಲಕರು, ಹೆಚ್ಚಿನ ದುಡಿಮೆಯ ಆಸೆಯಿಂದ ಹೆಚ್ಚುವರಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿಯೇ ಅಪಾಯಗಳು ಸಂಭವಿಸುತ್ತಿವೆ.

ಕೆಲ ಗ್ರಾಮಗಳಿಗೆ ದಿನಕ್ಕೆ ಬೆಳಿಗ್ಗೆ ಹಾಗೂ ಸಂಜೆ ಎರಡು ಅವಧಿಯಲ್ಲಿ ಮಾತ್ರ ಬಸ್ಗಳ ವ್ಯವಸ್ಥೆಯಿದೆ. ನಿಗದಿತ ಸಮಯಕ್ಕೆ ಸರಿಯಾಗಿ ಪ್ರಯಾಣಿಕರು, ನಿಲುಗಡೆಗೆ ಹೋಗಬೇಕು. ಇಲ್ಲದಿದ್ದರೆ, ಬಸ್ ಹೊರಟು ಹೋಗುತ್ತದೆ. ತುರ್ತು ಸಂದರ್ಭಗಳಲ್ಲಿ ಬಸ್ ಸಿಗುವುದಿಲ್ಲ. ಇಂಥ ಗ್ರಾಮಗಳ ಜನರು ಟಂಟಂ ಸೇರಿದಂತೆ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ.

‘ನಮ್ಮೂರು ಹಾನಗಲ್ ತಾಲ್ಲೂಕಿನ ಬ್ಯಾಗವಾದಿ. ತಿಳಿವಳ್ಳಿ ಮೂಲಕ ಬರುವ ಬಸ್ಗಳಿಗೆ ಹತ್ತಲು 2ರಿಂದ 3 ಕಿ.ಮೀ. ನಡೆದುಕೊಂಡು ಹೋಗಿ ವೃತ್ತದಲ್ಲಿ ನಿಲ್ಲಬೇಕು. ಅದು ಸಹ ಒಂದೆರೆಡು ಬಸ್ ಮಾತ್ರ ಇವೆ. ಬಸ್ ತಪ್ಪಿದರೆ ಬೇರೆ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ. ನಡೆದುಕೊಂಡು ಹೋಗುವುದು ಬೇಡವೆಂದು, ಗ್ರಾಮದಿಂದ ಹೊರಡುವ ಟಂಟಂ ವಾಹನಗಳಲ್ಲಿ ಪ್ರಯಾಣಿಸುತ್ತೇವೆ’ ಎಂದು ಗ್ರಾಮದ ನಿವಾಸಿಗಳು ತಿಳಿಸಿದರು.

‘ಸಂಗೂರು, ದಿಡಗೂರು, ಹಾವೇರಿ, ಹಾನಗಲ್ಗೆ ಹೋಗಲು ಟಂಟಂ ವಾಹನಗಳಿವೆ. ಗ್ರಾಮದ ಬಹುತೇಕರು, ಇದೇ ಟಂಟಂ ವಾಹನಗಳಲ್ಲಿ ಸಂಚರಿಸುತ್ತಾರೆ. ಟಂಟಂನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕೆಲವರು, ಟಂಟಂ ವಾಹನದ ಮೇಲೆ ಕುಳಿತುಕೊಳ್ಳುತ್ತಾರೆ. ಕೆಲವರು, ಟಂಟಂ ವಾಹನದ ಹಿಂಭಾಗದಲ್ಲಿ ಜೋತು ನಿಲ್ಲುತ್ತಾರೆ’ ಎಂದು ಹೇಳಿದರು.

‘ಟಂಟಂ ವಾಹನಗಳಲ್ಲಿ ಕಿಕ್ಕಿರಿದು ತುಂಬಿ ಸಂಚರಿಸುವುದು ಅಪಾಯವೆಂಬುದು ಗೊತ್ತಿದೆ. ಆದರೆ, ಟಂಟಂ ವಾಹನ ಬಿಟ್ಟು ಬೇರೆ ಗತಿಯಿಲ್ಲ. ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದೇವೆ. ನಮ್ಮೂರಿನ ಮಾರ್ಗವಾಗಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿದರೆ ಅನುಕೂಲ’ ಎಂದು ಆಗ್ರಹಿಸಿದರು.

ಆಯತಪ್ಪಿ ಬಿದ್ದು ಗಾಯ: ಜಿಲ್ಲೆಯ ಬಹುತೇಕ ತಾಲ್ಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ಟಂಟಂ ವಾಹನಗಳು ಸಂಚರಿಸುತ್ತಿವೆ. ಕೆಲ ಮಾರ್ಗಗಳಲ್ಲಿ ಸಂಚಾರದ ಸಂದರ್ಭದಲ್ಲಿ, ಪ್ರಯಾಣಿಕರು ವಾಹನದಿಂದ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.

ಹಾವೇರಿ ನಗರದ ಬಸ್ ನಿಲ್ದಾಣ, ಗುತ್ತಲ ರಸ್ತೆ, ಹಾನಗಲ್ ರಸ್ತೆಗಳಲ್ಲಿ ಟಂಟಂ ವಾಹನ ಸೇರಿ ಖಾಸಗಿ ವಾಹನಗಳ ನಿಲುಗಡೆ ಸ್ಥಳಗಳಿವೆ. ಇದೇ ಸ್ಥಳದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಟಂಟಂ ವಾಹನಗಳ ಚಾಲಕರು, ಗ್ರಾಮದತ್ತ ಹೊರಡುತ್ತಿದ್ದಾರೆ. ಗ್ರಾಮದಿಂದಲೂ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಂದು ಹಾವೇರಿಯಲ್ಲಿ ಇಳಿಸುತ್ತಿದ್ದಾರೆ. ಈ ಸಂಚಾರದ ಸಂದರ್ಭದಲ್ಲಿ, ವಾಹನ ಭರ್ತಿಯಾಗಿ ವಾಹನದ ಮೇಲೆಯೂ ಜನರು ಕುಳಿತುಕೊಂಡಿರುವ ದೃಶ್ಯಗಳು ಕಾಣಸಿಗುತ್ತಿವೆ.

‘ಹಾವೇರಿಯಿಂದ ಭೂ ವೀರಾಪುರಕ್ಕೆ ಇತ್ತೀಚೆಗೆ ಟಂಟಂ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಅವರು ಇಂದಿಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಟಂಟಂ ವಾಹನ ನಿಧಾನವಾಗಿತ್ತು. ಹೀಗಾಗಿ, ಅವರಿಗೆ ಹೆಚ್ಚು ಪೆಟ್ಟಾಗಿಲ್ಲ. ವೇಗವಾಗಿದ್ದರಿಂದ, ಜೀವಕ್ಕೆ ಕುತ್ತು ಉಂಟಾಗುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ದೇವರ ದರುಶನಕ್ಕೂ ಟಂಟಂ ವಾಹನ: ಜಿಲ್ಲೆಯಲ್ಲಿ ಸುಕ್ಷೇತ್ರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದೇವರಗುಡ್ಡ, ಸಾತೇನಹಳ್ಳಿ, ಕದರಮಂಡಲಗಿ, ಶಿಶುವಿನಹಾಳ, ಕಾರಡಗಿ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳಿವೆ. ಈ ಕ್ಷೇತ್ರಗಳಿಗೂ ನಿತ್ಯವೂ ಟಂಟಂ ವಾಹನಗಳು ಸಂಚರಿಸುತ್ತಿವೆ. ಬಸ್ಗಳ ಲಭ್ಯತೆ ಕಡಿಮೆ ಇರುವುದರಿಂದ, ಜನರು ತಮ್ಮ ಸಮಯಕ್ಕೆ ಸಿಗುವ ಟಂಟಂ ವಾಹನಗಳನ್ನು ಪ್ರಯಾಣಿಸುತ್ತಿದ್ದಾರೆ.

‘ರಾಣೆಬೆನ್ನೂರಿನಿಂದ ದೇವರಗುಡ್ಡ, ಐರಣಿ, ಕಾಕೋಳ, ಮಾಗೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನಿತ್ಯವೂ ಟಂಟಂ ವಾಹನಗಳು ಸಂಚರಿಸುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಟಂಟಂ ವಾಹನಗಳ ಮೇಲೆ ಕುಳಿತು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಿಂದ ಅವಘಡಗಳು ಸಂಭವಿಸಿದ್ದವು. ಇದರಿಂದ ಜನರು ಎಚ್ಚೆತ್ತುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ’ ಎಂದು ಗ್ರಾಮಸ್ಥರು ಹೇಳಿದರು.

ಸವಣೂರಿನಿಂದ ಬಂಕಾಪುರ, ಬಂಕಾಪುರದಿಂದ ಕುಂದೂರು, ನೀರಲಗಿ, ಮಹಾರಾಜಪೇಟೆ, ಹೋತನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೂ ಟಂಟಂ ವಾಹನಗಳು ಸಂಚರಿಸುತ್ತಿವೆ. ಗೂಡ್ಸ್ ವಾಹನಗಳ ರೀತಿಯಲ್ಲಿರುವ ಟಂಟಂ ವಾಹನಗಳಲ್ಲಿ, ಜನರನ್ನು ಸುರಕ್ಷಿತವಾಗಿ ಕೂರಿಸಲಾಗುತ್ತಿದೆ. ಹದಗೆಟ್ಟ ರಸ್ತೆ ಹಾಗೂ ಕೆರೆ ದಡದ ಮೇಲೆ ಟಂಟಂ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿವೆ. ಅಪಘಾತಗಳು ಸಂಭವಿಸಿ, ಟಂಟಂ ವಾಹನಗಳು ಉರುಳಿಬಿದ್ದು ಪ್ರಾಣಾಪಾಯ ಸಂಭವಿಸಿದರೆ ಯಾರು ಹೊಣೆ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

- ವಾರದ ಸಂತೆಗೆ ಹೋಗಿ ಬರಲು ಟಂಟಂ ವಾಹನ ಅವಲಂಬಿಸಿದ್ದೇವೆ. ಸಂತೆ ದಿನ ಪ್ರಯಾಣಿಕರ ಸಂಖ್ಯೆ ಹೆಚ್ಚು. ಕುರಿಗಳ ರೀತಿಯಲ್ಲಿ ಕುಳಿತುಕೊಂಡು ಪ್ರಯಾಣಿಸಬೇಕು
ಶಂಕ್ರಮ್ಮ ಹೊನ್ನೇದ ಹಾವೇರಿ

ಟಂಟಂ ವಾಹನದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನ ಹತ್ತಿಸಿಕೊಳ್ಳಲಾಗುತ್ತಿದೆ. ಏನಾದರೂ ಅನಾಹುತವಾಗಿ ಜೀವ ಹಾನಿಯಾದರೆ ಯಾರು ಹೊಣೆ
ಬಸವಂತಪ್ಪ ರಂಗಣ್ಣನವರ ಬ್ಯಾಡಗಿ

ಜಿಲ್ಲೆಯಲ್ಲಿ ಬಸ್ಗಳ ಕೊರತೆ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (ವಾಕರಸಾಸಂ) ಜಿಲ್ಲೆಯಲ್ಲಿ ಬಸ್ಸಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಸ್ ಸಂಚಾರಕ್ಕೆಂದು 520 ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಈ ಮಾರ್ಗಗಳಲ್ಲಿ ಸದ್ಯದ ಸ್ಥಿತಿಯಲ್ಲಿ 560 ಬಸ್ಗಳು ಸಂಚರಿಸುತ್ತಿವೆ. ಆದರೆ ಜಿಲ್ಲೆಯಲ್ಲಿ 705 ಗ್ರಾಮಗಳಿವೆ. ಪ್ರತಿಯೊಂದು ಗ್ರಾಮಕ್ಕೂ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಈ ಬಗ್ಗೆ ವಾಕರಸಾಸಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ‘ಬಸ್ಗಳ ಕೊರತೆಯಿದೆ. ಹಂತ ಹಂತವಾಗಿ ಎಲ್ಲ ಗ್ರಾಮಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು’ ಎನ್ನುತ್ತಾರೆ. ‘520 ಮಾರ್ಗಗಳಲ್ಲಿ 560 ಬಸ್ಗಳು ಸಂಚರಿಸುತ್ತಿವೆ. ನಿತ್ಯ 2.50 ಲಕ್ಷ ಮಂದಿ ಪ್ರಯಾಣ ಮಾಡುತ್ತಿರುವ ಮಾಹಿತಿ ಇದೆ. ಆದರೆ ಕೆಲ ಗ್ರಾಮಗಳಿಗೆ ಬಸ್ಸಿನ ವ್ಯವಸ್ಥೆಯಿಲ್ಲ. ಅಂಥ ಗ್ರಾಮಗಳ ಜನರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಹೊಸ ಮಾರ್ಗಗಳ ಆರಂಭಕ್ಕೆ ಚಿಂತನೆ ನಡೆಯುತ್ತಿದೆ’ ಎಂದು ವಾಕರಸಾಸಂ ಅಧಿಕಾರಿಯೊಬ್ಬರು ಹೇಳಿದರು.

ಕಂಪನಿ ಉದ್ಯೋಗಿಗಳ ಪ್ರಯಾಣ

ಜಿಲ್ಲೆಯ ಹಲವು ಕಡೆಗಳಲ್ಲಿ ಗಾರ್ಮೇಂಟ್ಸ್ ಮೆಣಸಿನಕಾಯಿ ಕಾರ್ಖಾನೆ ಆಹಾರ ಉತ್ಪನ್ನ ತಯಾರಿ ಸೇರಿದಂತೆ ಹಲವು ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಗೆ ಹೋಗಿ ಬರಲು ಹಲವು ಉದ್ಯೋಗಿಗಳು ಟಂಟಂ ವಾಹನಗಳನ್ನು ಅವಲಂಬಿಸಿದ್ದಾರೆ. ಪ್ರಯಾಣದ ಸಂದರ್ಭದಲ್ಲಿಯೂ ಹೆಚ್ಚುವರಿ ಪ್ರಯಾಣಿಕರನ್ನು ವಾಹನಗಳನ್ನು ಹತ್ತಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವಿದೆ.

‘ಪ್ರಯಾಣ ದರವೂ ಕಡಿಮೆ ಉದ್ರಿ’

ಬಸ್ಸಿನ ಪ್ರಯಾಣ ದರಕ್ಕಿಂತಲೂ ಟಂಟಂ ವಾಹನಗಳ ಚಾಲಕರು ಕಡಿಮೆ ದರ ಪಡೆಯುತ್ತಿದ್ದಾರೆ. ಈ ಕಾರಣಕ್ಕೂ ಹೆಚ್ಚಿನ ಪ್ರಯಾಣಿಕರು ಟಂಟಂ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಎಲ್ಲ ಪ್ರಯಾಣಿಕರಿಗೂ ಒಂದೇ ದರ ಇರುವುದಿಲ್ಲ. ತಮ್ಮೂರಿನ ಪ್ರಯಾಣಿಕರಿಗೆ ಚಾಲಕರು ರಿಯಾಯಿತಿ ನೀಡುತ್ತಾರೆ. ಕೆಲ ಪ್ರಯಾಣಿಕರು ತಮ್ಮ ಬಳಿ ಹಣವಿಲ್ಲದಿದ್ದರೂ ಚಾಲಕರಿಗೆ ಉದ್ರಿ ಹೇಳಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಕೆಲವರಿಗೆ ಟಂಟಂ ವಾಹನಗಳು ಹೆಚ್ಚು ಇಷ್ಟವಾಗುತ್ತಿವೆ. ‘ನಮ್ಮೂರಿನ ಪರಿಚಯಸ್ಥ ಯುವಕನೇ ಟಂಟಂ ವಾಹನ ಚಾಲಕ. ಕೂಲಿ ಕೆಲಸ ಮಾಡುವ ನಾವು ಎಲ್ಲಿಯಾದರೂ ಹೋಗಬೇಕಾದರೆ ಉದ್ರಿ ಹೇಳಿ ಹೋಗಿಬರುತ್ತೇವೆ. ಸಂಬಳ ಬಂದ ಕೂಡಲೇ ಯುವಕರಿಗೆ ಹಣ ಕೊಡುತ್ತೇವೆ. ಗ್ರಾಮದಿಂದ ಎಲ್ಲಿಗಾದರೂ ಹೋಗ ಬೇಕಾದರೆ ಅದೇ ಟಂಟಂ ವಾಹನ ಕಾಯಂ ಆಗಿದೆ’ ಎಂದು ಕುಂದೂರು ಗ್ರಾಮದ ನಿವಾಸಿ ಶಂಕರಪ್ಪ ಹೇಳಿದರು.

ಕಣ್ಮುಚ್ಚಿ ಕುಳಿತ ಆರ್ಟಿಒ–ಪೊಲೀಸರು

ಜಿಲ್ಲೆಯ ಬಹುತೇಕ ಗ್ರಾಮಗಳ ರಸ್ತೆಗಳಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಇವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಆರ್ಟಿಒ ಹಾಗೂ ಪೊಲೀಸರು ಮೌನವಾಗಿದ್ದಾರೆ. ಹಾವೇರಿ ನಗರದಲ್ಲಿ ಪೊಲೀಸರ ಎದುರೇ ಟಂಟಂ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದನ್ನು ನೋಡಿಯೂ ನೋಡದಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಏನಾದರೂ ಅನಾಹುತಗಳಾದರೆ ಯಾರು ಹೊಣೆ? ಎಂಬು ಜನರು ಪ್ರಶ್ನಿಸುತ್ತಿದ್ದಾರೆ.

‘ಟಂಟಂ ವಾಹನಗಳ ಮೇಲೆ ಕುಳಿತು ಹಾಗೂ ಹಿಂಬದಿಯಲ್ಲಿ ಜೋತು ಬಿದ್ದು ಜನರು ಪ್ರಯಾಣಿಸುತ್ತಿದ್ದಾರೆ. ಇಂಥ ವಾಹನಗಳನ್ನು ತಪಾಸಣೆ ನಡೆಸಿ ಕ್ರಮ ಜರುಗಿಸಬೇಕು. ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸುವ ವಾತಾವರಣವನ್ನು ನಿರ್ಮಿಸಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.