ಬುಧವಾರ, ಮಾರ್ಚ್ 3, 2021
18 °C
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ 14,447 ಮಂದಿಗೆ ನ್ಯಾಯ ಒದಗಿಸಲು ಮನವಿ

ಅತಿಥಿ ಉಪನ್ಯಾಸಕರನ್ನು ಮುಂದುವರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 14,447 ಅತಿಥಿ ಉಪನ್ಯಾಸಕರನ್ನು 2020–21ನೇ ಶೈಕ್ಷಣಿಕ ಸಾಲಿಗೂ ಮುಂದುವರಿಸಿ, ನೇಮಕಾತಿ ಆದೇಶ ಮಾಡಬೇಕು’ ಎಂದು ರಾಜ್ಯ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಿ.ಕೆ.ಪಾಟೀಲ ಒತ್ತಾಯಿಸಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ನಾತಕೋತ್ತರ ಪದವಿ, ಎಂ.ಫಿಲ್‌, ಪಿಎಚ್‌.ಡಿ, ನೆಟ್‌ ಮತ್ತು ಸ್ಲೆಟ್‌ಗಳಂತಹ ಉನ್ನತ ಪದವಿಗಳೊಂದಿಗೆ ಮೂರು ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಕೆಲವರು ನಿವೃತ್ತಿ ಅಂಚಿಗೆ ತಲುಪಿರುವುದು ವಿಷಾದನೀಯ ಎಂದರು. 

ಕಾಲೇಜು ಶಿಕ್ಷಣ ಇಲಾಖೆ ಮಾನವೀಯ ಆಧಾರಿತ ಕನಿಷ್ಠ ಸೇವಾ ಸೌಲಭ್ಯಗಳಾದ ಇಎಸ್‌ಐ, ಪಿ.ಎಫ್‌, ರಜಾ ಸೌಲಭ್ಯ, ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ, ಯು.ಜಿ.ಸಿ. ನಿರ್ದೇಶಿತ ನಿರ್ದಿಷ್ಟ ಮತ್ತು ಸಕಾಲಿಕ ಗೌರವಧನ ಪಾವತಿ ಮುಂತಾದ ಅವಕಾಶಗಳನ್ನು ನೀಡದೆ ಸ್ಪಷ್ಟವಾಗಿ ನಿರಾಕರಿಸಿದೆ ಎಂದು ಹೇಳಿದರು. 

24 ಮಂದಿ ಮೃತ:

ಕಳೆದ ವರ್ಷ 24 ಅತಿಥಿ ಉಪನ್ಯಾಸಕರು ತೀವ್ರ ಬಡತನದ ಒತ್ತಡದಿಂದ ಮೃತಪಟ್ಟಿದ್ದಾರೆ. ನೂರಾರು ಜನರು ತೀವ್ರ ಸ್ವರೂಪದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಶೇ 30ರಷ್ಟು ಕಾಯಂ ಉಪನ್ಯಾಸಕರು ಹಾಗೂ ಶೇ 70ರಷ್ಟು ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಕರ್ತವ್ಯಕ್ಕೆ ಹಾಜರಾಗಲು ಆದೇಶ ಮಾಡದ ಪರಿಣಾಮ ಲಕ್ಷಾಂತರ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಜಾರಿಗೆ ಮೀನ–ಮೇಷ:

ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್‌ಕುಮಾರ್‌ ಬೆನ್ನೂರು ಮಾತನಾಡಿ, ‘2019–20ನೇ ಶೈಕ್ಷಣಿಕ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಿ, ನೇಮಕಾತಿ ಮಾಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು  ಆದೇಶಿಸಿದ್ದರೂ ಕೂಡಾ ಅದು ಜಾರಿಯಾಗಿರುವುದಿಲ್ಲ. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಜೆ.ಓ.ಸಿ. ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸಿದಂತೆಯೇ ಸರ್ಕಾರಿ ಪ್ರೈಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಕ್ರಮ ಕೈಗೊಂಡು, ಮೂರು ದಶಕಗಳ ಸುದೀರ್ಘ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ಬಸನಗೌಡ ಪಾಟೀಲ, ಹನುಮಂತಪ್ಪ ಸಿ.ಬಿ., ವಸಂತಗೌಡ ಪಾಟೀಲ, ಡಾ.ಸುರೇಶ ವಾಲ್ಮೀಕಿ ಮುಂತಾದವರು ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು