ಸೋಮವಾರ, ಜೂನ್ 14, 2021
20 °C
ಕಲಬುರ್ಗಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಪುನರುಚ್ಚಾರ

ಕೋವಿಡ್ ಕೈಮೀರಲು ಕಾಂಗ್ರೆಸ್ಸಿಗರೇ ಕಾರಣ: ನಳಿನ್ ಕುಮಾರ್ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಕಲಬುರ್ಗಿ: 'ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಕಾಂಗ್ರೆಸ್ಸಿಗರ ನೀಚ ರಾಜಕಾರಣವೇ ಕಾರಣ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪುನರುಚ್ಚರಿಸಿದರು.

ಈಚೆಗೆ ಮೃತಪಟ್ಟ ಬಿಜೆಪಿ ವಿಭಾಗೀಯ ಸಂಘಟನಾ  ಕಾರ್ಯದರ್ಶಿ ದತ್ತು ತೂಗಾಂವಕರ್  ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಸಂದರ್ಭ, ನಗರದ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

'ದೇಶದ ಲಸಿಕೆ ಬಗ್ಗೆ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡಿದರು. ಈ ಲಸಿಕೆ  ಪರಿಣಾಮಕಾರಿ ಇಲ್ಲ, ಇದರಿಂದ ಪುರುಷತ್ವ ಕಡಿಮೆ ಆಗುತ್ತದೆ ಎಂದೆಲ್ಲ ಸುಳ್ಳು ಸುದ್ದಿ ಹರಡಿದರು. ಇದರಿಂದ ಲಸಿಕೆ ಪಡೆಯಲು ಹಲವರು ಹಿಂಜರಿದರು. ಅದರ ಪರಿಣಾಮವೇ ಈಗ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿದೆ' ಎಂದೂ ದೂರಿದರು.

'ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಸತ್ಯದಿಂದ ಕೂಡಿದೆ. ವ್ಯಾಕ್ಸಿನ್ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡಿದೆ' ಎಂದೂ ಕಟೀಲ್ ಆರೋಪಿಸಿದರು.

'ಫೆಬ್ರುವರಿಯಲ್ಲಿ ಸ್ವತಃ ಪ್ರಧಾನಿ ಮೋದಿ ಅವರೇ ಲಸಿಕೆ ತಗೊಂಡು ಜನರಿಗೆ ಪ್ರೇರಣೆ ನೀಡಿದರು. ಆದರೂ ಜನ ಮೇ ವರೆಗೂ ಲಸಿಕೆಗಾಗಿ ಮುಂದೆ ಬರಲಿಲ್ಲ. ಈಗ ಅದೇ ಕಾಂಗ್ರೆಸ್ಸಿಗರು ಲಸಿಕೆ ಇಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ' ಎಂದರು.

'ಸಿದ್ದರಾಮಯ್ಯ ಕೂಡ ಇದಕ್ಕೆ ಹೊರತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತದೋ ಸಿದ್ದರಾಮಯ್ಯ ಸಹ ಅದನ್ನೇ ಮಾಡುತ್ತಾರೆ. ಅಧಿಕಾರಕ್ಕೆ ಈ ರೀತಿಯ ವರ್ತನೆಯನ್ನು ಜನ ಸಹಿಸುವುದಿಲ್ಲ. ಅದಕ್ಕಾಗಿಯೇ ಜನ ಅವರನ್ನು ವರುಣಾ ಕ್ಷೇತ್ರದಿಂದ ಓಡಿಸಿದ್ದಾರೆ. ಇದೇ ರೀತಿ ಮಾಡಿದರೆ ಬಾದಾಮಿಯಿಂದಲೂ ಓಡಿಸುತ್ತಾರೆ' ಎಂದೂ ಕಟೀಲ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು