ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ರೈಲು ನಿಲ್ದಾಣದಲ್ಲಿ ಮರಾಠಿ ಹೇರಿಕೆ

Last Updated 23 ಫೆಬ್ರುವರಿ 2023, 9:40 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಲಬುರಗಿ ರೈಲು ನಿಲ್ದಾಣದಲ್ಲಿ ಹಾಕಲಾಗಿರುವ ಸೂಚನಾ ಫಲಕಗಳಲ್ಲಿ ಮರಾಠಿ ಭಾಷೆಗೆ ಆದ್ಯತೆ ನೀಡಿ, ಕನ್ನಡ ಭಾಷೆ ಕಡೆಗಣಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಕಲಬುರಗಿ ರೈಲು ನಿಲ್ದಾಣವು ಕೇಂದ್ರ ರೈಲ್ವೆ ವಲಯದ ಮಹಾರಾಷ್ಟ್ರದ ರಾಜ್ಯದ ಸೋಲಾಪುರ ವಿಭಾಗದ ವ್ಯಾಪ್ತಿಗೆ ಬರುತ್ತದೆ. ರೈಲು ಪ್ರಯಾಣಿಕರ ಸುರಕ್ಷತೆ, ಲಿಫ್ಟ್‌ ಬಳಕೆ ಬಗೆಗಿನ ಸೂಚನೆ ಸೇರಿ ಇತರೆ ಮಾಹಿತಿಯನ್ನು ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಹಾಕಲಾಗಿದೆ. ಇದು ಬೇಸರ ಮೂಡಿಸಿದೆ ಎಂದು ಸಂಘಸಂಸ್ಥೆಗಳ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸೋಲಾಪುರ ವಿಭಾಗದ ರೈಲ್ವೆ ಅಧಿಕಾರಿಗಳು ‘ಭಾರತೀಯ ರೈಲ್ವೇಸ್ ವರ್ಕ್ಸ್ ಮ್ಯಾನುಯಲ್’ ನಿಯಮ ಉಲ್ಲಂಘಿಸಿದ್ದಾರೆ. ಕ್ರೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿ ವ್ಯಾಪ್ತಿಯಲ್ಲಿ ತ್ರಿಭಾಷ ಸೂತ್ರ(ಉರ್ದು ಸೇರ್ಪಡೆ) ಅಳವಡಿಸಿಕೊಂಡು, ಸ್ಥಳೀಯ ಭಾಷೆಯೊಂದಿಗೆ ಸೂಚನಾ ಫಲಕಗಳು ಅಳವಡಿಸಿಲ್ಲ. ಮರಾಠಿ ಭಾಷೆ ಬಳಸಲಾಗಿದೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಆರೋಪಿಸಿದರು.

‘ಕನ್ನಡ ನೆಲದ ರೈಲ್ವೆ ನಿಲ್ದಾಣದಲ್ಲಿ ಮರಾಠಿ ಭಾಷೆ ಬಳಸಿದ್ದು ತಪ್ಪು. ಸೊಲಾಪುರ ವಿಭಾಗದ ಇಂತಹ ಧೋರಣೆ ಖಂಡನೀಯ. ತಪ್ಪಾಗಿ ಬರೆದ ಕನ್ನಡ ಪದಗಳನ್ನು ಸರಿಪಡಿಸಬೇಕು. ಮರಾಠಿ ಸೂಚನಾ ಫಲಕಗಳನ್ನು ತೆರವುಗೊಳಿಸಬೇಕು. ಸೋಲಾಪುರ ವಿಭಾಗದ ಮರಾಠಿ ಪ್ರೇಮದ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕನ್ನಡ ನೆಲದಲ್ಲಿ ಮರಾಠಿ ಹೇರುತ್ತಿದ್ದಾರೆ’ ಎಂದರು.

ನಿಯಮ ಉಲ್ಲಂಘನೆ: ಇಂಡಿಯನ್‌ ರೈಲ್ವೇಸ್‌ ಮ್ಯಾನುಯಲ್‌ನ ಪ್ಯಾರಾಗ್ರಾಫ್‌ 425ರ ನಿಯಮ 5ರ ಅನ್ವಯ ಪ್ರತಿಯೊಂದು ಸೂಚನಾ ಫಲಕವು ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಇರಬೇಕು. 424ರ ನಿಯಮ 1ರ ಪ್ರಕಾರ ವಿವಿಧ ಭಾಷೆಗಳಲ್ಲಿನ ಹೆಸರು ಮತ್ತು ಅವುಗಳ ಕಾಗುಣಿತ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದಿರಬೇಕು ಎಂದಿದೆ. ಆದರೆ, ನಿಲ್ದಾಣದಲ್ಲಿ ಈ ನಿಯಮಾವಳಿಗಳ ಪಾಲನೆ ಆಗುತ್ತಿಲ್ಲ.

ಪ್ಯಾರಾಗ್ರಾಫ್‌ 424ರ ನಿಯಮ 2ರ ಅನ್ವಯ ತಮಿಳುನಾಡು ಹೊರತುಪಡಿಸಿ ನಿಲ್ದಾಣದ ಹೆಸರುಗಳನ್ನು ಹಿಂದಿ ಮತ್ತು ಇಂಗ್ಲಿಷ್‌ ಜೊತೆಗೆ ಪ್ರಾದೇಶಿಕ ಭಾಷೆಯಲ್ಲಿ ಹಾಕಬೇಕು. ಆಯ್ದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಉರ್ದು ಭಾಷೆಗೆ ಅವಕಾಶವಿದೆ.

ತಪ್ಪು, ತಪ್ಪಾಗಿ ಕನ್ನಡ ಬಳಕೆ

ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿನ ಟಿಕೆಟ್ ಕೇಂದ್ರ, ಪ್ಲಾಟ್‌ಫಾರ್ಮ್‌, ಮೇಲ್ಸೇತುವೆ ಸೇರಿ ಹಲವೆಡೆ ಅಳವಡಿಸಿದ ಸೂಚನಾ ಫಲಕಗಳಲ್ಲಿ ಕನ್ನಡ ತಪ್ಪು, ತಪ್ಪಾಗಿ ಹಾಗೂ ಹಿಂದಿ, ಇಂಗ್ಲಿಷ್‌ ಪದಗಳನ್ನು ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ.

ನಿಲ್ದಾಣದಲ್ಲಿ ‘ಪರ್ಯವೇಕ್ಷಕ’, ‘ಅಸ್ಥಿ’, ‘ಖಿಡಕಿ’, ‘ರಕಮು’, ಖರತಾ(ಖತರ್ನಾಕ್) ಹಿಂದಿ ಪದಗಳನ್ನು ಬರೆಯಲಾಗಿದೆ. ‘ಗ್ರೂಪ’(ಗ್ರೂಪ್‌), ವಾರೆಂಟ್ಸ್‌(ವಾರಂಟ್ಸ), ‘ಪಾರ್ಕೀಂಗ’(ಪಾರ್ಕಿಂಗ್), ‘ವಿಕೃತ ವಿಕಲಾಂಗ’(ಆರ್ಥೋ ಅಂಗವಿಕಲ), ‘ತಪಾಸಿರಿ’(ತಪಾಸಣೆ), ‘ಆರ.ಪಿ.ಎಫ ಠಾಣಾ’(ಆರ್‌ಪಿಎಫ್‌ ಠಾಣೆ), ‘ಪಾದಚಾರಿ ಮೇಲೆ ಸೇತುವೆ’(ಮೇಲ್ಸೇತುವೆ), ‘ಬಸವರದು’(ಬಳಸಬಾರದು) ಎಂದು ಹಲವು ಪದಗಳನ್ನು ತಪ್ಪಾಗಿ ಬರೆಯಲಾಗಿದೆ.

ಸೋಲಾಪುರ ವಿಭಾಗ ಕಚೇರಿಯಲ್ಲಿ ಸೂಚನಾ ಫಲಕಗಳನ್ನು ತಯಾರಾಗಿದ್ದು, ಕನ್ನಡ ಭಾಷೆಯಲ್ಲಿ ಸೂಚನಾ ಫಲಕಗಳನ್ನು ಮಾಡುವಂತೆ ತಿಳಿಸುತ್ತೇವೆ.

-ಸತ್ಯನಾರಾಯಣ ದೇಸಾಯಿ, ಕಲಬುರಗಿ ರೈಲು ನಿಲ್ದಾಣದ ವ್ಯವಸ್ಥಾಪಕ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ನೆಲದಲ್ಲಿ ಮರಾಠಿ ಭಾಷೆ ಬರೆಯುವ ಅವಶ್ಯಕತೆ ಇಲ್ಲ. ಆಗಿರುವ ಪ್ರಮಾದ ಸರಿಪಡಿಸುವಂತೆ ರೈಲ್ವೆ ಸಚಿವರು, ವಲಯದ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ.

-ಮಹೇಶ ಜೋಶಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT