ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪೋಷಕರೇ ನಿಶ್ಚಿಂತರಾಗಿರಿ; ಮಕ್ಕಳೇ ಖುಷಿಯಿಂದ ಪರೀಕ್ಷೆ ಬರೆಯಿರಿ'

ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕಿ ಅಮಿತಾ ಯರಗೋಳಕರ ಅವರೊಂದಿಗೆ ಫೋನ್ ಇನ್
Last Updated 16 ಜುಲೈ 2021, 15:39 IST
ಅಕ್ಷರ ಗಾತ್ರ

ಕಲಬುರ್ಗಿ: ಇದೇ 19 ಹಾಗೂ 22ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಏರ್ಪಡಿಸಿದ್ದು, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪೋಷಕರೇ ಯಾವ ಚಿಂತೆಯನ್ನೂ ಮಾಡದೇ ಮಕ್ಕಳನ್ನು ಶಾಲೆಗೆ ಕಳುಹಿಸಿ, ಮಕ್ಕಳೇ ಖುಷಿಯಿಂದ ಪರೀಕ್ಷೆ ಬರೆಯಿರಿ ಎಂದು ಇಲಾಖೆಯು ಕಲಬುರ್ಗಿ ಹೆಚ್ಚುವರಿ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕಿ (ಪರೀಕ್ಷೆ) ಅಮಿತಾ ಯರಗೋಳಕರ ಕರೆ ನೀಡಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನೇರ ಫೋನ್ ಇನ್ ಹಾಗೂ ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಪೋಷಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಬಹುತೇಕ ಪೋಷಕರು ಪರೀಕ್ಷೆಯ ಸಿದ್ಧತೆ, ಬದಲಾದ ಪ್ರಶ್ನೆ ಪತ್ರಿಕೆ, ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತೆ, ಸಾರಿಗೆ ವ್ಯವಸ್ಥೆ, ಪರೀಕ್ಷೆ ಕುರಿತು ಮಕ್ಕಳಲ್ಲಿ ಪೂರ್ವಸಿದ್ಧತೆ ವಿಚಾರಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಅಮಿತಾ ಹಾಗೂ ಎಸ್ಸೆಸ್ಸೆಲ್ಸಿ ಕಲಬುರ್ಗಿ ಜಿಲ್ಲಾ ನೋಡಲ್ ಅಧಿಕಾರಿ ರಮೇಶ ಜಾನಕರ ಉತ್ತರ ನೀಡಿದರು.

ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೆಂಗಳೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪೋಷಕರು ಕರೆ ಮಾಡಿ ಮಾಹಿತಿ ಪಡೆದುಕೊಂಡರು.

ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅಮಿತಾ ಯರಗೋಳಕರ, ‘ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೋಷಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಪರೀಕ್ಷೆ ನಡೆಯುವ ಮುನ್ನ, ನಂತರ ಕೊಠಡಿಗೆ ಸ್ಯಾನಿಟೈಸರ್ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಲಾಗುತ್ತದೆ. ಪ್ರತಿ ಕೇಂದ್ರಕ್ಕೆ ತಲಾ ಇಬ್ಬರು ಆರೋಗ್ಯ ಸಿಬ್ಬಂದಿಯ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ. ಅವರು ಪರಸ್ಪರ ಅಂತರ ಕಾಪಾಡಲು ನೆರವಾಗುತ್ತಾರೆ. ಸೂಕ್ಷ್ಮ, ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗಳು, ನಕಲು ನಡೆಯದಂತೆ ತಡೆಯಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

‌ಫೋನ್ ಇನ್‌ನಲ್ಲಿ ಕೇಳಲಾದ ಆಯ್ದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಲಾದ ಉತ್ತರಗಳು ಇಲ್ಲಿವೆ.

* ಬೆಳಿಗ್ಗೆ 10.30ರಿಂದ ಪರೀಕ್ಷೆ ಆರಂಭವಾಗುತ್ತದೆ. 8.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಹೇಳಲಾಗಿದೆ ಏಕೆ?

–ವಿದ್ಯಾರ್ಥಿಗಳು ಬೇಗ ಕೇಂದ್ರಕ್ಕೆ ಬಂದರೆ ಅವರ ಆರೋಗ್ಯ ತಪಾಸಣೆ ಮಾಡಲು, ಥರ್ಮಲ್ ಸ್ಕ್ರೀನಿಂಗ್‌ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ, ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಬಹುದು. ಪರಸ್ಪರ ಅಂತರ ಕಾಪಾಡಬಹುದು. ಆದರೆ, ಎಲ್ಲರೂ ಕಡ್ಡಾಯವಾಗಿ 8.30ಕ್ಕೇ ಬರಬೇಕು ಎಂದೇನಿಲ್ಲ.

* ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಸರಿಯಾಗಿ ನಡೆದಿಲ್ಲ. ನಗರ ಭಾಗದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಕ್ಕಿದೆ. ಹೀಗಾಗಿ ಫಲಿತಾಂಶದಲ್ಲಿ ತಾರತಮ್ಯ ಆಗುತ್ತದೆ. ಇದನ್ನು ಹೇಗೆ ಸರಿಪಡಿಸುತ್ತೀರಿ

–ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸದ ವಿದ್ಯಾರ್ಥಿಗಳ ಮನೆಗೆ ಹೋಗಿ ಶಿಕ್ಷಕರು ಮಾರ್ಗದರ್ಶನ ಮಾಡಿದ್ದಾರೆ. ವಿದ್ಯಾಗಮ, ಸಂವೇದ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಿದ್ದಾರೆ. ಅಲ್ಲದೇ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಇದರಿಂದಾಗಿ ಮಕ್ಕಳು ವಿಶ್ವಾಸದಿಂದ ಇದ್ದಾರೆ.

* ಪ್ರಶ್ನೆ ಪತ್ರಿಕೆ ಮಾದರಿ ಈ ಬಾರಿ ಹೇಗಿರುತ್ತದೆ?

ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಇರಲಿದೆ. ಒಂದು ಪ್ರಶ್ನೆ ಪತ್ರಿಕೆ, ಮೂರು ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ. ಮೊದಲ ದಿನ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಕ್ಕೆ 40 ಅಂಕಗಳನ್ನು ನಿಗದಿ ಮಾಡಲಾಗುತ್ತದೆ. 120 ಪ್ರಶ್ನೆಗಳು ಇರಲಿವೆ. ಒಂದರಿಂದ 40 ವಿಷಯಗಳು ಗಣಿತ ವಿಷಯಕ್ಕೆ, 41–80 ವಿಜ್ಞಾನ ಮತ್ತು 81ರಿಂದ 120 ಪ್ರಶ್ನೆಗಳು ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿರುತ್ತವೆ. ಗಣಿತ ವಿಷಯಕ್ಕೆ ಗುಲಾಬಿ ಬಣ್ಣ, ವಿಜ್ಞಾನ ವಿಷಯಕ್ಕೆ ಕಿತ್ತಳೆ ಬಣ್ಣ ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ. ಪ್ರಥಮ ಭಾಷೆಗೆ–ಗುಲಾಬಿ, ದ್ವಿತೀಯ –ಹಳದಿ, ತೃತಿಯ ಭಾಷೆಗೆ ಹಸಿರು ಬಣ್ಣದ ಒಎಂಆರ್ ಶೀಟ್ ನೀಡಲಾಗುತ್ತದೆ.

* ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆಯೇ?

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಸಾರಿಗೆ ಬಸ್‌ಗಳಲ್ಲಿ ತಮ್ಮ ಹಾಲ್‌ ಟಿಕೆಟ್‌ಗಳನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷೆಯ ದಿನಗಳಂದು ವಿದ್ಯಾರ್ಥಿಗಳನ್ನು ಆದ್ಯತೆಯ ಮೇಲೆ ಹತ್ತಿಸಿಕೊಂಡು ಪರೀಕ್ಷಾ ಕೇಂದ್ರ ಇರುವ ಊರು, ಪಟ್ಟಣಗಳಿಗೆ ಕರೆತರುವಂತೆ ಸಾರಿಗೆ ಸಂಸ್ಥೆಗೆ ಮನವಿ ಮಾಡಲಾಗಿದೆ.

ಆದಾಗ್ಯೂ, ಈ ಬಾರಿ ಗರಿಷ್ಠ 10 ಕಿ.ಮೀ. ವ್ಯಾಪ್ತಿಯಲ್ಲಿಯೇ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದರಿಂದಾಗಿ ಹೆಚ್ಚು ಪ್ರಯಾಣ ಮಾಡುವ ಅವಶ್ಯಕತೆ ಬರುವುದಿಲ್ಲ.

‘ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಸತಿ ನಿಲಯ’

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಉಳಿಯಲು ಅವಕಾಶ ನೀಡಲಾಗುತ್ತದೆ. ದೂರದ ಊರಿನಿಂದ ಹಿಂದಿನ ದಿನವೇ ಪರೀಕ್ಷಾ ಕೇಂದ್ರ ಇರುವ ಊರಿಗೆ ಬಂದರೆ ಅಲ್ಲಿನ ವಸತಿ ನಿಲಯಗಳಲ್ಲಿ ಉಳಿಯಲು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಲಿದೆ ಎಂದು ಕಲಬುರ್ಗಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ರಮೇಶ ಜಾನಕರ ತಿಳಿಸಿದರು.

‘ವಿದ್ಯಾರ್ಥಿಗಳಿಗೆ ಪರೀಕ್ಷೆಯ ಹಿಂದಿನ ಹಾಗೂ ಪರೀಕ್ಷೆಯ ದಿನ ಉಳಿದುಕೊಳ್ಳಲು ಹಾಗೂ ಅವರಿಗೆ ಊಟದ ವ್ಯವಸ್ಥೆ ಮಾಡುವಂತೆ ಬಿಸಿಎಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹೀಗಾಗಿ, ಮನೆಯಿಂದ ದೂರ ಇರುವವರು ಈ ಸೌಲಭ್ಯ ಬಳಸಿಕೊಳ್ಳಬಹುದು’ ಎಂದರು.

ಕೋವಿಡ್‌ ಪೀಡಿತ ವಿದ್ಯಾರ್ಥಿಗಳಿಗೂ ಅವಕಾಶ

ಪರೀಕ್ಷೆ ಬರೆಯಲು ಕೆಲ ದಿನಗಳು ಇರುವಂತೆಯೇ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟರೆ ಅಂಥ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಕೇಂದ್ರದಲ್ಲಿ ಪರೀಕ್ಷೆ ಬರೆಸಲಾಗುವುದು. ಆ ವಿದ್ಯಾರ್ಥಿಗೆ ಅಗತ್ಯ ಬಿದ್ದರೆ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಅಮಿತಾ ಯರಗೋಳಕರ ಮಾಹಿತಿ ನೀಡಿದರು.

ಕಲಬುರ್ಗಿ ಜಿಲ್ಲೆಯ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಹಾರಾಷ್ಟ್ರದ ಗಡಿಯ ಗ್ರಾಮಗಳಲ್ಲಿದ್ದರೆ ಅವರಿಗೆ ಚೆಕ್‌ಪೋಸ್ಟ್‌ಗಳಲ್ಲಿ ಸುಲಲಿತವಾಗಿ ಪ್ರವೇಶ ನೀಡಲೂ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದರು.

ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆಪತ್ರಿಕೆ

ಸಾರ್ವಜನಿಕ ಶಿಕ್ಷಣ ಇಲಾಖೆಯ sslc.karnataka.gov.in ವೆಬ್‌ಸೈಟ್‌ನಲ್ಲಿ ಈ ಬಾರಿ ನಡೆಯಲಿರುವ ಪರೀಕ್ಷೆಯ ಬಹುಆಯ್ಕೆಯ ವಿಧಾನದ ಮಾದರಿ ಪ್ರಶ್ನೆಪತ್ರಿಕೆಗಳಿರುತ್ತವೆ. ಇವುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಅಧ್ಯಯನ ನಡೆಸಬಹುದು.

ಪೋಷಕರಿಗೆ ಸಲಹೆಗಳು..

* ಪರೀಕ್ಷೆ ಸಮೀಪಿಸುತ್ತಿದೆ ಎಂದು ಭಯಪಡುವ ಅಗತ್ಯ ಇಲ್ಲ. ಪೋಷಕರು ಮಕ್ಕಳಲ್ಲಿನ ಭಯ, ಆತಂಕ ಹೋಗಲಾಡಿಸಬೇಕು. ಆತ್ಮವಿಶ್ವಾಸ ತುಂಬಬೇಕು.
* ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪರೀಕ್ಷೆಗೂ ಮುನ್ನ ಮತ್ತು ಪರೀಕ್ಷೆ ಸಂದರ್ಭದಲ್ಲಿ ಗುಣಮಟ್ಟದ ಆಹಾರ ನೀಡಬೇಕು.
* ಪರೀಕ್ಷೆ ಕುರಿತು ಯಾವುದೇ ಸಂದೇಹಗಳಿದ್ದರೆ ಆಯಾ ಶಾಲೆಯ ಮುಖ್ಯಶಿಕ್ಷಕರನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಬೇಕು.

1,63,218
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ

86,194
ಪರೀಕ್ಷೆ ಬರೆಯಲಿರುವ ಬಾಲಕರು

77,024
ಪರೀಕ್ಷೆ ಬರೆಯಲಿರುವ ಬಾಲಕಿಯರು

974
ಪರೀಕ್ಷಾ ಕೇಂದ್ರಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT