ಶನಿವಾರ, ಜನವರಿ 28, 2023
18 °C

ಕಲಬುರಗಿ: ಶುದ್ಧೀಕರಿಸಿದ ನೀರು ಕುಡಿಯಲು ಯೋಗ್ಯವೇ?

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನೀರು ಶುದ್ಧೀಕರಣ ಘಟಕಗಳು ಪೂರೈಸುವ ಕುಡಿಯುವ ನೀರು ಗುಣಮಟ್ಟದಿಂದ ಕೂಡಿದೆಯೇ? ಸಂಸ್ಕರಣೆಯ ವಿಧಾನಗಳು ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್‌) ಮತ್ತು ಭಾರತೀಯ ಗುಣಮಟ್ಟ ಸಂಸ್ಥೆ (ಐಎಸ್‌ಐ) ಮಾನದಂಡಗಳು ಅನುಸರಿಸುತ್ತಿವೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಶುದ್ಧ ನೀರು ಪೂರೈಕೆಗೆ ಸಂಬಂಧಿಸಿದಂತೆ ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಈಚೆಗೆ  ಕಾರ್ಯಾಚರಣೆ ನಡೆಸಿದ ಬಳಿಕ ಸಾರ್ವಜನಿಕರಲ್ಲಿ ಕುಡಿಯುವ ನೀರಿನ ಬಗ್ಗೆ ಹಲವು ಅನುಮಾನ ಕಾಡುತ್ತಿವೆ.

‘ವೈಜ್ಞಾನಿಕ ನೀರು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಿಕೊಳ್ಳದೆ ಬೇಕಾಬಿಟ್ಟಿಯಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹಣ ಗಳಿಕೆಗೆಂದೇ ಇರುವ ಕೆಲ ಅನಧಿಕೃತ ನೀರು ಶುದ್ಧೀಕರಣ ಘಟಕಗಳು ನಿಯಮಗಳನ್ನು ಪಾಲಿಸುತ್ತಿಲ್ಲ’ ಎಂಬ ದೂರುಗಳಿವೆ.

‘ಸುಣ್ಣದ ಕಲ್ಲಿನ ನೆಲಹಾಸು ಹೊಂದಿರುವ ಜಿಲ್ಲೆಯ ಕೆಲ ಭಾಗದಲ್ಲಿ ಕೊಳವೆಬಾವಿ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ. ಈ ನೀರಿನಲ್ಲಿ ಕ್ಯಾಲ್ಸಿಯಂ, ಮೆಗ್ನೇಷಿಯಂ, ಫ್ಲೋರೈಡ್‌ನಂತಹ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಲವಣಗಳು ನಿಗದಿಗಿಂತ ಹೆಚ್ಚಿನ ಮಟ್ಟದಲ್ಲಿವೆ. ಹೀಗಾಗಿ, ವೈಜ್ಞಾನಿಕವಾಗಿ ಶುದ್ಧೀಕರಿಸಿದ ನೀರನ್ನು ಕುಡಿಯುವುದೇ ಉತ್ತಮ’ ಎಂದು  ಭೂಜಲ ವಿಜ್ಞಾನಿಗಳು ತಿಳಿಸಿದರು.

‘ಕೊಳವೆ ಬಾವಿಯಲ್ಲಿ ತಿಳಿಯಾದ ನೀರು ಬರುತ್ತಿವೆ ಎಂಬ ಕಾರಣಕ್ಕೆ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆಯದೇ 10X10 ಜಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಇವುಗಳು ಪೂರೈಸುವ ನೀರು ಶುದ್ಧವೆಂದು ಜನರು ನಂಬಿದ್ದಾರೆ. ಆದರೆ, ಈ ನೀರು ಅರೋಗ್ಯಕ್ಕೆ ಮಾರಕ’ ಎಂದು ವೈದ್ಯರು ತಿಳಿಸಿದರು.

‘ಕುಡಿಯುವ ನೀರು ಘಟಕ ಸ್ಥಾಪನೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ), ಐಎಸ್‌ಐ, ಬಿಐಎಸ್‌, ಕಾರ್ಮಿಕ ಇಲಾಖೆ, ವಾಣಿಜ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು. ಐಎಸ್‌ಐ, ಬಿಐಎಸ್‌ ಅನ್ವಯ ನೀರು ಶುದ್ಧೀಕರಿಸಿ ಆಗಾಗ್ಗೆ ಪರೀಕ್ಷೆಗೆ ಒಳಪಡಿಸಬೇಕು. ಈ ನಿಯಮ ಕೆಲ ಕಡೆ ಪಾಲನೆಯಾಗುತ್ತಿಲ್ಲ’ ಎಂದು ಮಿಸ್ಟ್‌ ನೀರು ಶುದ್ಧೀಕರಣ ಘಟಕದ ಮಾಲೀಕ ಮಂಜುನಾಥ ಜಿ. ಪುಲ್ಸೆ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರು ಶುದ್ಧೀಕರಣದ ವೈಜ್ಞಾನಿಕ ಹಂತಗಳು ಇವು...

ನೀರು ಶುದ್ಧೀಕರಣ ಘಟಕಗಳು ಕೊಳವೆ ಬಾವಿಯ ನೀರನ್ನು ವಿವಿಧ ಹಂತಗಳಲ್ಲಿ ಸಂಸ್ಕರಣೆ ಮಾಡಿ, ವೈಜ್ಞಾನಿಕ ಪದ್ಧತಿ ಪಾಲಿಸಿ ಗ್ರಾಹಕರಿಗೆ ತಲುಪಿಸಬೇಕು.

‘ಮೈಕ್ರಾನ್ ಫಿಲ್ಟರ್‌ ಮೂಲಕ ಹೊರ ಬಂದ ಕೊಳವೆ ಬಾವಿಯ ನೀರನ್ನು ಮರಳು ಮತ್ತು ಕಾರ್ಬನ್ ಸಂಸ್ಕರಣೆಯಲ್ಲಿ ಲವಣಾಂಶ, ವಾಸನೆ ಮತ್ತು ದೂಳಿನ ಕಣಗಳನ್ನು ತೆಗೆಯಲಾಗುತ್ತದೆ. 0.005 ಮೈಕ್ರಾನ್ ಫಿಲ್ಟರ್‌ನಲ್ಲಿ ಶುದ್ಧ ಮಾಡಿ, ಮೆಂಬ್ರೆನ್‌ ಸಂಸ್ಕರಣೆಯಲ್ಲಿ ನೀರಿನ ಗಡಸುತನ ಕರಗಿಸಲಾಗುತ್ತದೆ. ಜೊತೆಗೆ ನೀರಿನ ಮಿತಿ ಮತ್ತು ದೇಹಕ್ಕೆ ಅಗತ್ಯವಾದಷ್ಟು ಕ್ಯಾಲ್ಸಿಯಂ, ಮೆಗ್ನಿಷಿಯಂ, ಜಲಜನಕದ ಸಾಂದ್ರತೆಯನ್ನು(ಪಿ.ಎಚ್‌. ಪ್ರಮಾಣ) 6.5ನಿಂದ 8.5 ಕಾಯ್ದುಕೊಳ್ಳಲಾಗುತ್ತದೆ. ಈ ಬಳಿಕ ಸಾಮಾನ್ಯ ನೀರು ಅತ್ಯುತ್ತಮ ನೀರಾಗಿ ಬದಲಾಗುತ್ತದೆ’ ಎಂದು ಶುದ್ಧ ನೀರಿನ ಘಟಕದ ಮಾಲೀಕರೊಬ್ಬರು ತಿಳಿಸಿದರು.

‘ನೀರಿನಲ್ಲಿನ ಲವಣ ಮತ್ತು ಸೂಕ್ಷ್ಮಾಣು ಜೀವಿಗಳ ಅಧ್ಯಯನಕ್ಕೆ ಘಟಕದಲ್ಲಿ ಎರಡು ಪ್ರತ್ಯೇಕ ಪ್ರಯೋಗಾಲಯ ಮತ್ತು ತಜ್ಞರನ್ನು ಇರುತ್ತಾರೆ. ಅವರ ಸಲಹೆ ಮೇರೆಗೆ ಅಗತ್ಯ ಇದ್ದಲ್ಲಿ ಲವಣಾಂಶಗಳನ್ನು ಬೆರೆಸಲಾಗುವುದು’ ಎಂದರು.

‘ಶುದ್ಧೀಕರಣ ಬಳಿಕವೂ ಬದುಕಿರುವ ಸೂಕ್ಷ್ಮ ಜೀವಿಗಳ ನಾಶಕ್ಕೆ ಅಲ್ಟ್ರಾವೈಲೆಟ್‌ ಲೈಟ್‌ ಮೂಲಕ ನೀರು ಹಾಯಿಸಲಾಗುತ್ತದೆ. ಸೂಕ್ಷ್ಮಜೀವಿಗಳಿಗೆ ಅನಾನುಕೂಲವಾದ 22 ಡಿಗ್ರಿ ಸೆಲ್ಸಿಯಸ್‌ನ ಘಟಕದ ಭರ್ತಿ ಪ್ರದೇಶದಲ್ಲಿ (ಫಿಲಿಂಗ್ ಏರಿಯಾ) ಕ್ಯಾನ್‌ಗಳನ್ನು ತುಂಬಲಾಗುವುದು. ಗ್ರಾಹಕರಿಂದ ತಂದ ಕ್ಯಾನ್‌ಗಳನ್ನು ಘಟಕದಲ್ಲಿ ಹೈಡ್ರೋಜನ್‌ ಥೈರಾಕ್ಸೈಡ್‌(ಎಚ್‌2ಒ2) ರಾಸಾಯನಿಕದಿಂದ ಸ್ವಚ್ಛ ಮಾಡಿ, ಭರ್ತಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಪ್ರತಿಯೊಂದು ಪ್ಯಾಕ್ಡ್‌ ನೀರಿನ ಘಟಕಗಳು ಅಧಿಕೃತ ಪರವಾನಗಿ ಪಡೆದು ಬಿಐಎಸ್‌, ಐಎಸ್‌ಐ ಮಾನದಂಡಗಳ ಅನ್ವಯ ನೀರು ಶುದ್ಧೀಕರಣ ಮಾಡಿ ಪೂರೈಸಬೇಕು.
-ಡಾ.ಅರ್ಚನಾ ಕಮಲಾಪುರಕರ್, ಜಿಲ್ಲಾ ಅಂಕಿತ ಅಧಿಕಾರಿ

ಜಿಲ್ಲೆಯ ಎಲ್ಲ ಭಾಗದಲ್ಲಿ ಸಿಗುವ ಕೊಳವೆ ಬಾವಿಯ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ. ಸುಣ್ಣದ ಕಲ್ಲು ಹೊಂದಿರುವ ಪ್ರದೇಶದ ಕೊಳವೆ ನೀರಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದೆ.
-ಮೋಹನ ಕುಮಾರ್, ಭೂಜಲ ವಿಜ್ಞಾನಿ

ಪರವಾನಗಿ ಪಡೆದ ನೀರಿನ ಘಟಕಗಳು ಕಾನೂನು ಬದ್ಧವಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಶುದ್ಧೀಕರಿಸಿ ಗ್ರಾಹಕರಿಗೆ ಪೂರೈಸುತ್ತಿವೆ. ಪ್ರತಿ ತಿಂಗಳು ಗುಣಮಟ್ಟ ಪರೀಕ್ಷೆಗೂ ನೀರು ಕಳಿಸಲಾಗುತ್ತಿದೆ.
-ಮಂಜುನಾಥ ಜಿ. ಪುಲ್ಸೆ, ಮಿಸ್ಟ್‌ ನೀರು ಶುದ್ಧೀಕರಣ ಘಟಕದ ಮಾಲೀಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು