ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಕಲಿಯೋಕೆ ನಮಗೆ ಬಸ್‌ನದ್ದೇ ಸಮಸ್ಯೆ! ಶಾಲಾ ವಿದ್ಯಾರ್ಥಿಗಳ ಅಳಲು

Published 3 ಜನವರಿ 2024, 6:15 IST
Last Updated 3 ಜನವರಿ 2024, 6:15 IST
ಅಕ್ಷರ ಗಾತ್ರ

ಸೇಡಂ: ನಮಗೆ ಶಾಲೆಗೆ ಹೋಗಿ ಅಕ್ಷರ ಕಲಿತು ಸರ್ಕಾರಿ ನೌಕರಿ ತಗೋಬೇಕಂತ ಬಾಳ್ ಛಲ ಆದ. ಆದ್ರೆ ನಮಗೆ ಅಕ್ಷರ ಕಲಿಯೋಕೆ ಈ ಬಸ್ಸಿನದೇ ಸಮಸ್ಯೆ... ನಿತ್ಯ ಸರಿಯಾದ ಸಮಯಕ್ಕೆ ಬಸ್ ಬರದೆ ಇರೋದ್ರದಿಂದ ಶಾಲಾ ತರಗತಿಗಳಿಗೆ ಕುಳಿಕೊಳ್ಳೋಕೆ ಆಗ್ತಿಲ್ಲ. ನಮ್ ತೊಂದ್ರೆಗೆ ಯಾರು ಸ್ಪಂದಿಸ್ತಿಲ್ಲ ಸರ್ ಎಂದು ಅಳಲು ತೋಡಿಕೊಂಡವರು ತಾಲ್ಲೂಕಿನ ರಾಜೀವನಗರ(ಹೂಡಾ.ಕೆ) ಗ್ರಾಮದ ವಿದ್ಯಾರ್ಥಿಗಳು.

ಸೇಡಂ-ಕಲಬುರಗಿ ಮಾರ್ಗ ಮಧ್ಯದ ಹೂಡಾ(ಬಿ) ಗ್ರಾಮದ ರಸ್ತೆಗೆ ಬಸ್ ತಡೆದು ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಜಾವಾಣಿ ವರದಿಗಾರ ಭೇಟಿ ನೀಡಿದಾಗ, ‘ನಮ್ಮೂರಿಂದ ದಿನಾಲು ಸುಮಾರು 30 ರಿಂದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಸೇಡಂ ಸೇರಿದಂತೆ ಮಳಖೇಡ ತೆರಳುತ್ತೇವೆ. ಆದರೆ ನಮ್ಮೂರಿಗೆ ಸಮಯಕ್ಕೆ ಸರಿಯಾಗಿ ಬಸ್ ಬರ್ತಿಲ್ಲ. ಕಲಿಯೋಕೆ ದೊಡ್ ಸಮಸ್ಯೆ ಆಗ್ತಿದೆ’ ಎಂದು ವಿದ್ಯಾರ್ಥಿ ರೇಖಾ ಬೇಸರ ವ್ಯಕ್ತಪಡಿಸಿದರು.

‘ನಾವು ಅನೇಕ ಬಾರಿ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಕೊಟ್ಟು ಸಾಕಾಗಿದೆ. ಬಸ್ ತಡೆದು ಮೂರ್ನಾಲ್ಕು ಬಾರಿ ರಸ್ತೆಗಿಳಿದು ಪ್ರತಿಭಟನೆ ಮಾಡಿದಿವಿ. ಆದ್ರೂ ಸಹ ಸರಿಯಾಗಿ ಬರ್ತಿಲ್ಲ’ ಸರ್ ಎಂದಳು ಐಶ್ವರ್ಯ.

‘ಬೆಳಿಗ್ಗೆ 9 ಗಂಟೆಗೆ ಬರಬೇಕಾದ ಬಸ್ಸು ನಿತ್ಯವು 11 ಗಂಟೆಗೆ ಬರುತ್ತಿದೆ. ಸಂಜೆ 5ಗಂಟೆಯಿಂದ ಸೇಡಂನಿಂದ ಬರಬೇಕಾದ ಬಸ್ 7 ಗಂಟೆಗೆ ಬರುತ್ತಿದೆ. ನಮಗೆ ಯಾವುದೇ ರೀತಿಯಲ್ಲಿ ಅನುಕೂಲವಾಗುತ್ತಿಲ್ಲ. ಪ್ರತಿಭಟನೆ ನಡೆಸಿದಾಗ ಮಾತ್ರ ಎರಡ್ಮೂರು ದಿನ ಸಮಯಕ್ಕೆ ಬಸ್ ಬರುತ್ತದೆ. ನಂತ್ರ ಮತ್ತೆ ಅದೇ ಗೋಳು. ಶಾಲೆಗೆ ಲೇಟಾಗಿ ಹೋದ್ರೆ ಶಿಕ್ಷಕರು ಬೈತಾರೆ, ತರಗತಿ ಪಾಠ ಕೇಳೋಕೆ ಆಗ್ತಿಲ್ಲ’ ಎಂದು ವಿದ್ಯಾರ್ಥಿಗಳಾದ ಭಗವಂತ ಮತ್ತು ರಮೇಶ.

ಸರಿಯಾಗಿ ಬಸ್ ಬರಬೇಕಾದ್ರೆ ರಸ್ತೆಗಿಳಿಬೇಕು!

ನಾವು ಈಗಾಗಲೇ ನಮ್ಮೂರಿನ ಜನರ ಜೊತೆಗೆ ರಾಜ್ಯ ಹೆದ್ದಾರಿ-10 ಕಲಬುರಗಿ ಮತ್ತು ರಿಬ್ಬನಪಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದೇವೆ. ಆಗ ತಿಂಗಳು ಚೆನ್ನಾಗಿ ಬಂತು ನಂತರ ಸರಿಯಾಗಿ ಬರ್ತಿಲ್ಲ. ಮತ್ತೆ ಪ್ರತಿಭಟನೆ ಮಾಡಿದ್ವಿ. ಆಗ ಮೂರ್ನಾಲ್ಕು ದಿನ ಬಂತು. ಸರಿಯಾಗಿ ಬಸ್ ನಮ್ಮೂರಿಗೆ ಬರಬೇಕಾದ್ರೆ ರಸ್ತೆಗಿಳಿಬೇಕಾಗಿದೆ’ ನಾವು ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಬೆಳಿಗ್ಗೆ 9ಗಂಟೆಗೆ ನಮ್ಮೂರಲ್ಲಿರಬೇಕು ಮಧ್ಯಾಹ್ನ 2.30ಕ್ಕೆ ಮತ್ತು ಸಂಜೆ 5ಕ್ಕೆ ಸೇಡಂನಿಂದ ಬಿಟ್ಟು 5.30ಕ್ಕೆ ನಮ್ಮೂರಲ್ಲಿರಬೇಕು ಅಂದ್ರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.

ಬಸ್ ಲೇಟಾಗಿ ಊರಿಗೆ ತೆರಳಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ.
–ವಿಜಯಕುಮಾರ ರಾಠೋಡ್‌ ಘಟಕ ವ್ಯವಸ್ಥಾಪಕ ಸೇಡಂ
ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಮಯಕ್ಕೆ ಬಸ್ ಬರದೆ ಇರೋದ್ರದಿಂದ ಸಮಸ್ಯೆಯಾಗ್ತಿದೆ. ಸಮಯಕ್ಕೆ ಬಸ್ ಓಡಿಸುವಂತಹ ಕೆಲಸ ಅಧಿಕಾರಿಗಳು ಮಾಡಬೇಕು.
–ಶ್ರೀನಾಥ ಪಿಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT