ವಿರಾಜಪೇಟೆ: ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಎಬಿವಿಪಿ ವಿರಾಜಪೇಟೆ ಶಾಖೆಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಗಡಿಯಾರ ಕಂಬದ ಬಳಿ ನಡೆದ ಪ್ರತಿಭಟನೆಯ ಸಂದರ್ಭ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ‘ ಪರಿಜ್ಞಾನವಿಲ್ಲದ ದುಷ್ಟ ವ್ಯಕ್ತಿಗಳಿಂದ ಅತ್ಯಾಚಾರ, ಕೊಲೆಗಳಂತಹ ಕೃತ್ಯಗಳು ನಡೆಯುತ್ತಿದ್ದು, ಮಾನವ ಸಮಾಜನ್ನು ತಲೆ ತಗ್ಗಿಸುವಂತೆ ಮಾಡುತ್ತಿವೆ. ಕೃತ್ಯದ ಹಿಂದಿರುವ ದುಷ್ಟಶಕ್ತಿಗಳು ರಾಜಕೀಯ ಕಾನೂನಿನ ಕೈಯಿಂದ ಜಾರುತ್ತಿರುವಂತೆ ಭಾಸವಾಗುತ್ತಿದೆ. ಇಂತಹ ಘಟನೆಗಳು ಯುವ ಶಕ್ತಿಗೆ ಕುಂದು ತರುತ್ತಿದೆ. ಪಶ್ಚಿಮ ಬಂಗಾಳದ ಸರ್ಕಾರವು ಹತ್ಯೆಗೀಡಾದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಹಾಗೂ ಕೊಲೆಗಡುಕರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಎ.ಬಿ.ವಿ.ಪಿಯ ಜಿಲ್ಲಾ ಪ್ರಮುಖ್ ಕೌಶಲ್ಯ ಕೆ.ಎಚ್. ಮಾತನಾಡಿ, ‘ರಾಜ್ಯದಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಆರಂಭವಾಗಿದ್ದರೂ ವಸತಿ ನಿಲಯಗಳು ಇನ್ನು ಆರಂಭಗೊಂಡಿಲ್ಲ. ಜೊತೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದರೂ ಮೂರು ವರ್ಷಗಳಿಂದ ವಿದ್ಯಾರ್ಥಿವೇತನ ಬಿಡುಗಡೆಯಾಗದಿರುವುದರಿಂದ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಜೊತೆಗೆ ವಿವಿಧ ವಿಭಾಗಗಳಲ್ಲಿ ಅಗತ್ಯ ಪ್ರಮಾಣದ ಉಪನ್ಯಾಸಕರು ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ಈ ಕುರಿತು ಸರ್ಕಾರ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.
ತಹಶೀಲ್ದಾರ್ ರಾಮಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಎಬಿವಿಪಿಯ ಜಿಲ್ಲಾ ಸಂಚಾಲಕ ಕೀರ್ತನ್ ಕಾವೇರಪ್ಪ, ಜಿಲ್ಲಾ ಸಹ ಸಂಚಾಲಕ ಮೋನಿಶ್ ಮಂದಣ್ಣ, ತಾಲ್ಲೂಕು ಸಂಚಾಲಕಿ ರಕ್ಷಿತಾ, ಬಿ.ಎಸ್, ಮೋಹಿತ್ ಬಿ.ಯು, ನಿತೀನ್ ಬಿದ್ದಪ್ಪ ಎಂ.ಯು, ಭೂಮಿಕಾ, ರೋಷನ್, ಮನೀಶ್ ಇದ್ದರು.
ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಘಟನೆಯನ್ನು ಖಂಡಿಸಿ ಎಬಿವಿಪಿಯಿಂದ ವಿರಾಜಪೇಟೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು