ಸೋಮವಾರ, ಜನವರಿ 27, 2020
28 °C
ಕೆನರಾ ಬ್ಯಾಂಕ್‌ನಿಂದ ಪೊಲೀಸರಿಗೆ ದೂರು: ₹ 1.50 ಲಕ್ಷ ವಾಪಸ್‌

ಎ.ಟಿ.ಎಂ ಎಡವಟ್ಟು: ಗ್ರಾಹಕರಿಗೆ ಹೆಚ್ಚುವರಿ ಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇಲ್ಲಿನ ಕೊಹಿನೂರು ರಸ್ತೆಯ ಶ್ರೀಕಂಠೇಶ್ವರ ಎಲೆಕ್ಟ್ರಾನಿಕ್ಸ್‌ ಪಕ್ಕದಲ್ಲಿರುವ ಕೆನರಾ ಬ್ಯಾಂಕ್ ಎ.ಟಿ.ಎಂ ಯಂತ್ರಕ್ಕೆ ಹಣ ತುಂಬುವ ಸಿಬ್ಬಂದಿಗಳು ಮಾಡಿದ್ದ ಎಡವಟ್ಟಿನಿಂದ ಗ್ರಾಹಕರು ನಮೂದು ಮಾಡಿದ್ದಕ್ಕಿಂತ ಹೆಚ್ಚಿನ ಹಣ ಡ್ರಾ ಆಗಿದೆ. ಡಿ.30ರಂದು ಇಡೀ ದಿನ ಗ್ರಾಹಕರೂ ಯಾರಿಗೂ ತಿಳಿಸಿದಂತೆ ಈ ಎಟಿಎಂನಿಂದ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ಮಾಡಿದವರೂ ತಮ್ಮ ಆಪ್ತರಿಗೂ ಹೇಳಿ, ಅವರೂ ತಾವು ಪಡೆಯಬೇಕಿದ್ದ ಹಣಕ್ಕಿಂತ ಹೆಚ್ಚು ಹಣ ಪಡೆದುಕೊಂಡಿದ್ದಾರೆ.

ಅದೇ ದಿನ ಸಂಜೆಯ ವೇಳೆಗೆ ಬ್ಯಾಂಕ್‌ ಸಿಬ್ಬಂದಿಗೆ ಹೆಚ್ಚುವರಿ ಹಣ ಡ್ರಾ ಆಗುತ್ತಿರುವುದು ಗೊತ್ತಾಗಿದೆ. ಅಷ್ಟೊತ್ತಿಗೆ ಸಾಕಷ್ಟು ಹಣ ಡ್ರಾ ಆಗಿತ್ತು. ಅಂದಾಜು ₹ 1.50 ಲಕ್ಷ ಹಣ ಡ್ರಾ ಆಗಿತ್ತು!

ಕೆಲವು ಗ್ರಾಹಕರು ಹಣವನ್ನು ಹಿಂದಿರುಗಿಸಲು ಹಿಂದೇಟು ಹಾಕಿದ್ದರಿಂದ ಈ ಪ್ರಕರಣವು ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಹಣವನ್ನು ಡ್ರಾ ಮಾಡಿದ್ದ ವ್ಯಕ್ತಿಗಳು ಪೊಲೀಸರಿಗೆ ಹೆದರಿ ಹಣವನ್ನು ಮರಳಿ ಬ್ಯಾಂಕಿಗೆ ನೀಡುತ್ತಿದ್ದಾರೆ. ಸಿಬ್ಬಂದಿಗಳೂ ಈಗ ನಿರಾಳರಾಗುತ್ತಿದ್ದಾರೆ.

ಹೇಗಾಯ್ತು ಇದು?
ಡಿ.30ರಂದು ಖಾಸಗಿ ಏಜೆನ್ಸಿಯ ಸಿಬ್ಬಂದಿ, ಈ ಎ.ಟಿ.ಎಂ ಕೇಂದ್ರಕ್ಕೆ ಹಣ ತುಂಬಿದ್ದರು. ಹಣ ತುಂಬುವಾಗ ₹ 100 ಹಾಕುವ ಟ್ರೇನಲ್ಲಿ ₹ 500 ಮುಖಬೆಲೆಯ ನೋಟುಗಳನ್ನು ತುಂಬಿದ್ದರು. ಅಲ್ಲೇ ಆಗಿದ್ದು ಎಡವಟ್ಟು. ₹ 500 ಡ್ರಾ ಮಾಡಲು ಬಂದವರು ಆ ಸಂಖ್ಯೆ ನಮೂದಿಸಿದರೆ, ₹100 ಮುಖ ಬೆಲೆಯ 5 ನೋಟು ಬರುವ ಬದಲಿಗೆ ₹ 500 ಮುಖ ಬೆಲೆಯ 5 ನೋಟಿನಂತೆ ಒಟ್ಟು ₹2,500 ಗ್ರಾಹಕರ ಕೈಸೇರಿಬಿಟ್ಟಿದೆ.

ಸಿ.ಸಿ ಕ್ಯಾಮೆರಾದಲ್ಲಿ ಸೆರೆ

ಈ ಎಡವಟ್ಟನ್ನು ದುರುಪಯೋಗ ಪಡಿಸಿಕೊಂಡ ಕೆಲವರು ₹ 64 ಸಾವಿರ, ₹ 50 ಸಾವಿರದಂತೆ ಸರಣಿಯಾಗಿ ಹಣ ಪಡೆದಿದ್ದಾರೆ. ಒಬ್ಬ ಭೂಪ ಒಂದೇ ದಿನ ಹಲವು ಬಾರಿ ಹಣ ಪಡೆದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅದರಲ್ಲಿ ಶ್ರೀಧರ್‌ ಎಂಬ ಗ್ರಾಹಕ ಮಾತ್ರ ಬ್ಯಾಂಕಿಗೇ ಕರೆ ಮಾಡಿ ಎಟಿಎಂ ಕೇಂದ್ರದಲ್ಲಿ ದೋಷವಿರುವ ಬಗ್ಗೆ ಮಾಹಿತಿ ನೀಡಿದ್ದರು. ಆ ಹೊತ್ತಿಗಾಗಲೇ ಹೆಚ್ಚುವರಿ ಹಣ ಗ್ರಾಹಕರ ಕೈಸೇರಿತ್ತು. ನಂತರ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಲಾದ ಬ್ಯಾಂಕ್ ಖಾತೆಗಳ ಎಟಿಎಂ ಕಾರ್ಡ್‌ ಪರಿಶೀಲಿಸಿ, ಹೆಚ್ಚುವರಿ ಹಣ ಪಡೆದ ಗ್ರಾಹಕರನ್ನು ಸಂಪರ್ಕಿಸಿ, ಹಣ ಹಿಂದಿರುಗಿಸುವಂತೆ ಬ್ಯಾಂಕ್ ಸಿಬ್ಬಂದಿಗಳು ಮನವಿ ಮಾಡಿದ್ದರು. ಬಹುತೇಕರು ಬ್ಯಾಂಕಿಗೆ ಹಣ ಹಿಂದಿರುಗಿಸಿದ್ದಾರೆ. ಮತ್ತೆ ಕೆಲವರು ಹಣ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜ.6ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು