ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಪೊನ್ನಣ್ಣ ಪ್ರತಿಕೃತಿ ದಹನಕ್ಕೆ ಕಾಂಗ್ರೆಸ್‌ ಆಕ್ರೋಶ

ಸಂ‍ಪಾಜೆಯಲ್ಲಿ ಪ್ರತಿಭಟನೆ, ಮುಖಂಡರಿಂದ ಪ್ರತ್ಯೇಕ ಸುದ್ದಿಗೋಷ್ಠಿ
Published 22 ಜೂನ್ 2024, 14:23 IST
Last Updated 22 ಜೂನ್ 2024, 14:23 IST
ಅಕ್ಷರ ಗಾತ್ರ

ಮಡಿಕೇರಿ: ಇಂಧನ ಬೆಲೆ ಏರಿಕೆ ಖಂಡಿಸಿ ಈಚೆಗೆ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ಸುಟ್ಟಿದ್ದು, ಜಿಲ್ಲೆಯಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಘಟನೆ ವಿರೋಧಿಸಿ ಕಾಂಗ್ರೆಸ್ ಮುಖಂಡರು ಶನಿವಾರ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿ, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಗಡಿಭಾಗ ಸಂಪಾಜೆಯ ಚೆಕ್‌ಪೋಸ್ಟ್‌ ಬಳಿ ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು ಪೊನ್ನಣ್ಣ ಅವರ ಪ್ರತಿಕೃತಿ ದಹನ ವಿರೋಧಿಸಿ ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾ ಘಟಕದ ಅಧ್ಯಕ್ಷ ಮುಖಂಡ ಸೂರಜ್ ಹೊಸೂರು, ‘ ಬಿಜೆಪಿಗರು ಮೊನ್ನೆ ಇಂಧನ ಬೆಲೆ ಏರಿಕೆ ಮುಷ್ಕರದಲ್ಲಿ ನಡೆಸಿದ ವಿರಾಜಪೇಟೆ ಕ್ಷೇತ್ರದ ಶಾಸಕರ ಪ್ರತಿಕೃತಿ ದಹನವು ವಿಕೃತ ಹಾಗೂ ಪ್ರಜ್ಞಾಹೀನ ಮನಸ್ಥಿತಿಗೆ ಸಾಕ್ಷಿ’ ಎಂದು ಕಿಡಿಕಾರಿದರು.

‘ಈ ಘಟನೆಯಿಂದ ಅವರ ಹೋರಾಟದ ದುರುದ್ದೇಶವು ಬಯಲಾಗಿದೆ. ಇದಕ್ಕಾಗಿ ನಾವೆಲ್ಲರೂ ಪ್ರಜ್ಞಾವಂತರಾಗಿ ಸಾಮಾಜಿಕ ಕಳಕಳಿ ಅರಿತು ಬಾಯಿಗೆ ಕಪ್ಪು-ಪಟ್ಟಿ ಧರಿಸಿ ಮೌನ ಪ್ರತಿಭಟನೆಯನ್ನು ಮಾಡಿ ಅಭಿಮಾನ ಹಾಗೂ ನೈತಿಕ ಹೋರಾಟದ ಸಂದೇಶ ಸಾರುತ್ತಿದ್ದೇವೆ’ ಎಂದು ಹೇಳಿದರು.

ಇದೇ ವೇಳೆ ಕಾರ್ಯಕರ್ತರು ‘ವಿಕೃತ ಮನಸ್ಸಿನ ಪ್ರತಿಕೃತಿ’ ಎಂಬ ನಾಮಫಲಕ ಹಾಕಿ ಪ್ರತಿಕೃತಿಯೊಂದನ್ನು ದಹಿಸಿದರು.

ಕಾಂಗ್ರೆಸ್‌ನ ವಲಯ ಅಧ್ಯಕ್ಷ ಪಿ.ಎಲ್. ಸುರೇಶ್, ಚೆಂಬು ಅಧ್ಯಕ್ಷ ರವಿ ಹೊಸೂರ್, ಪೆರಾಜೆ ಅಧ್ಯಕ್ಷ ಜಯರಾಮ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಡಾ.ನಿಶ್ಚಲ್ ದಂಬೆಕೋಡಿ, ಬ್ಲಾಕ್ ಕಾರ್ಯದರ್ಶಿ ಮನು ಪೆರುಮುಂಡ, ಮಾಜಿ ಯುವ ಅಧ್ಯಕ್ಷ ಹನೀಫ್ ಸಂಪಾಜೆ, ಅಕ್ರಮ–ಸಕ್ರಮ ಸಮಿತಿ ಸದಸ್ಯೆ ತುಳಸಿ, ನಾಪೋಕ್ಲು ಬ್ಲಾಕ್ ಮಹಿಳಾ ಅಧ್ಯಕ್ಷೆ ಕೆ.ಕೆ. ರಾಜೇಶ್ವರಿ, ಅನುಷ್ಠಾನ ಸಮಿತಿ ಕಾರ್ಯದರ್ಶಿ ಬಷೀರ್, ಮಾಜಿ ಜಿಲ್ಲೆ ಪಂಚಾಯತ್ ಸದಸ್ಯ ಮುಯುದ್ದಿನ್ ಕುಂಹಿ, ಗ್ರಾಮ ಪಂಚಾಯಿತಿ ಸದಸ್ಯರಾದ ಆದಂ, ಕುಸುಮಾ, ಶಶಿಕಲಾ, ಭೂದೇವಿ, ಸ್ಯೆದಾಲವಿ ಭಾಗವಹಿಸಿದ್ದರು.

ಬಿಜೆಪಿ ಮುಖಂಡರು ಕ್ಷಮಾಪಣೆ ಕೇಳಬೇಕು; ವೀಣಾ ಅಚ್ಚಯ್ಯ

ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿದ್ದಕ್ಕೆ ಕೂಡಲೇ ಬಿಜೆಪಿ ಮುಖಂಡರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

‘ನಾನಿಲ್ಲಿ ರಾಜಕಾರಣಿಯಾಗಿ ಮಾತನಾಡುತ್ತಿಲ್ಲ. ಒಬ್ಬ ಕೊಡವ ಸ್ತ್ರೀಯಾಗಿ ಮಾತನಾಡುತ್ತಿರುವೆ. ಕೊಡವರಾದ ಪೊನ್ನಣ್ಣ ಅವರ ಪ್ರತಿಕೃತಿಯನ್ನು ಕೊಡವರೇ ಸುಟ್ಟಿರುವುದು ನನ್ನ ಮನಸ್ಸನ್ನು ಮಾತ್ರವಲ್ಲ ಸಮಸ್ತ ಕೊಡವರ ಮನಸ್ಸನ್ನು ಘಾಸಿಗೊಳಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಎಲ್ಲೂ ಪ್ರತಿಕೃತಿ ದಹಿಸಿಲ್ಲ. ಇಲ್ಲಿ ಮಾತ್ರ ಇಂಧನ ಬೆಲೆ ಏರಿಕೆಗೆ ಸಂಬಂಧವೇ ಇಲ್ಲದ ಪೊನ್ನಣ್ಣ ಅವರ ಪ್ರತಿಕೃತಿಯನ್ನು ದಹಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಕೊಡವರಿಗೆ ತಮ್ಮದೆಯಾದ ಪದ್ದತಿಗಳಿವೆ ಸಂಸ್ಕೃತಿ ಇದೆ. ಇದನ್ನು ಬಿಜೆಪಿಯಲ್ಲಿರುವ ಕೊಡವರು ಮರೆಯಬಾರದಿತ್ತು. ಆದರೆ ಬಿಜೆಪಿಯ ಎಂ.ಪಿ. ಅಪ್ಪಚ್ಚುರಂಜನ್ ಸುನಿಲ್ ಸುಬ್ರಮಣಿ ಕೆ.ಜಿ. ಬೋಪಯ್ಯ ಅವರು ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ಕೊಂಚ ಸಮಾಧಾನ ತರಿಸಿದೆ’ ಎಂದರು.

‘ಪ್ರತಿಭಟನೆ ಎಲ್ಲರ ಹಕ್ಕು ಪ್ರತಿಭಟನೆ ಮಾಡುವುದು ತಪ್ಪಲ್ಲ. ನಾವು ಟೀಕೆಗಳನ್ನು ಸ್ವಾಗತ ಮಾಡುತ್ತೇವೆ. ಆದರೆ ಸಂಬಂಧವೇ ಇರದ ವ್ಯಕ್ತಿಯ ಪ್ರತಿಕೃತಿ ದಹಿಸಿ ಅದರ ಸುತ್ತ ನಿಂತು ಕೇಕೆ ಹಾಕುವುದು ರಕ್ಕಸ ಮನಸ್ಥಿತಿ. ಇಂತಹ ಮನಸ್ಥಿತಿಗೆ ಬಿಜೆಪಿಗರು ಇಳಿಯಬಾರದಿತ್ತು. ಈ ಬಗೆಯ ಕೃತ್ಯಕ್ಕೆ ಬಿಜೆಪಿಯಲ್ಲಿರುವ ಸಾಕಷ್ಟು ಮಂದಿ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

‘ನಾವು ಎಂದೂ ಅಪ್ಪಚ್ಚುರಂಜನ್ ಸೇರಿದಂತೆ ಬಿಜೆಪಿಯಲ್ಲಿರುವ ಕೊಡವರ ಪ್ರತಿಕೃತಿ ದಹಿಸಿಲ್ಲ ದಹಿಸುವುದೂ ಇಲ್ಲ. ಮೂಲದಲ್ಲಿ ಒಂದೇ ಆಗಿರುವ ಕೊಡವರು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಸಂಬಂಧ ಹೊಂದಿದ್ದಾರೆ. ನಾವು ಇಂದಿಗೂ ಬಿಜೆಪಿಯಲ್ಲಿರುವ ಅಪ್ಪಚ್ಚುರಂಜನ್ ಬೋಪಯ್ಯ ಸೇರಿದಂತೆ ಹಿರಿಯರಿಗೆ ಗೌರವ ಕೊಡುತ್ತೇವೆ’ ಎಂದರು.

ಕೂಡಲೇ ಬಂಧಿಸಿ; ಟಿ.ಇ.ಸುರೇಶ್

ಮಡಿಕೇರಿ: ಶಾಸಕ ಎ.ಎಸ್. ಪೊನ್ನಣ್ಣ ಅವರ ಅಣಕು ಶವಯಾತ್ರೆಯು ಕೀಳುಮಟ್ಟದ ಪ್ರತಿಭಟನೆ ಎಂದು ಕಾಂಗ್ರೆಸ್ ವಕ್ತಾರ ಟಿ.ಇ. ಸುರೇಶ್ ಕಿಡಿಕಾರಿದರು. ಈ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪೊನ್ನಣ್ಣ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿ ಮುಖಂಡರು ಹತಾಶೆಯಿಂದ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ಜೆ.ಇ.ಜನಾರ್ದನ ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ವಿ. ಸಂದೀಪ್ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‍ನ ಎಸ್‍ಟಿ ಘಟಕದ ಅಧ್ಯಕ್ಷ ಎಚ್.ಎಂ. ಮಹದೇವ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT