ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಟಿಕೆಟ್ ಪಡೆಯಲು ತೀವ್ರ ಕಸರತ್ತು ನಡೆಸಿದ್ದ ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ನಿರಾಸೆಯಾಗಿದೆ.
ವೀಣಾ ಅಚ್ಚಯ್ಯ ಅವರೂ ಟಿಕೆಟ್‌ಗಾಗಿ ಭಾರಿ ಕಸರತ್ತು ನಡೆಸಿದ್ದರು. ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬ ಪರಿಕಲ್ಪನೆಯಡಿಯಲ್ಲಿ ತಮಗೆ ಟಿಕೆಟ್ ಕೊಡಬೇಕು ಎಂದೂ ಹೈಕಮಾಂಡ್ ಮುಂದೆ ಪ್ರತಿಪಾದಿಸಿದ್ದರು. ಮಹಿಳೆಯರಿಗೆ ಆದ್ಯತೆ ನೀಡುವ ಕಾರಣಕ್ಕೆ ಹಾಗೂ ಈಗಾಗಲೇ ವಿಧಾನಪರಿಷತ್ ಸದಸ್ಯರಾಗಿ ಕ್ಷೇತ್ರದಲ್ಲಿ ಸಾಕಷ್ಟು ಛಾಪು ಮೂಡಿಸಿರುವುದರಿಂದ ವೀಣಾ ಅಚ್ಚಯ್ಯ ಅವರಿಗೆ ಟಿಕೆಟ್ ಲಭಿಸಬಹುದು ಎಂಬ ನಿರೀಕ್ಷೆ ಬೆಂಬಲಿಗರಲ್ಲಿತ್ತು.
ಇದಕ್ಕೆ ಪ್ರತಿಯಾಗಿ ಪೊನ್ನಣ್ಣ ಅವರೂ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಸಮಾವೇಶವೊಂದನ್ನು ಏರ್ಪಡಿಸಿ ಜೆಡಿಎಸ್‌ನ ರಾಜ್ಯ ವಕ್ತಾರರಾಗಿದ್ದ ಸಂಕೇತ್ ಪೂವಯ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತಮ್ಮ ಬಲವನ್ನು ಪ್ರದರ್ಶಿಸಿದ್ದರು. ಸಂಕೇತ್ ಪೂವಯ್ಯ ಅವರೂ ಪೊನ್ನಣ್ಣ ಅವರಂತಹ ಅಭ್ಯರ್ಥಿಯನ್ನು ಬೆಂಬಲಿಸುವುದಕ್ಕಾಗಿಯೇ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಕೆಪಿಸಿಸಿಯಿಂದ ಕೇವಲ ಪೊನ್ನಣ್ಣ ಅವರು ಹೆಸರು ಮಾತ್ರವೇ ಶಿಫಾರಸ್ಸಾಗಿತ್ತು. ಒಂದೇ ಆಕಾಂಕ್ಷಿಯ ಹೆಸರು ಶಿಫಾರಸ್ಸಾಗಿದ್ದರಿಂದ ಮೊದಲ ಪಟ್ಟಿಯಲ್ಲೇ ಹೆಸರು ಘೋಷಣೆಯಾಯಿತು ಎಂದು ಮೂಲಗಳು ತಿಳಿಸಿವೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಾಲು
ಮತ್ತೊಂದು ವಿಧಾನಸಭಾ ಕ್ಷೇತ್ರವಾದ ಮಡಿಕೇರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಇಲ್ಲಿ ಜೀವಿಜಯ, ಮಂಥರ್‌ಗೌಡ ಹಾಗೂ ಚಂದ್ರಮೌಳಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇವರೊಂದಿಗೆ ಕೆ.ಕೆ.ಮಂಜುನಾಥ ಕುಮಾರ್, ಚಂದ್ರಕಲಾ, ಹರಪನಹಳ್ಳಿ ರವೀಂದ್ರ, ಕೆ.ಎಂ.ಲೋಕೇಶ್ ಸಹ ಇದ್ದಾರೆ. ಇಲ್ಲಿ ಇಬ್ಬರ ಹೆಸರನ್ನು ಕೆಪಿಸಿಸಿ ಶಿಫಾರಸ್ಸು ಮಾಡಿರುವುದರಿಂದ ಟಿಕೆಟ್ ಘೋಷಣೆ ತಡವಾಗಿದೆ ಎಂದು ಮೂಲಗಳು ಹೇಳಿವೆ.
ಇವುಗಳನ್ನೂ ಓದಿ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.