ಕುಂದಾ ಬೆಟ್ಟದ ಮೇಲಿನ ಬೊಟ್ಲಪ್ಪ ದೇವಸ್ಥಾನಕ್ಕೆ ಪಾಂಡವರ ಕಾಲದ ಇತಿಹಾಸವಿದೆ. ಅಜ್ಞಾತ ವಾಸದಲ್ಲಿದ್ದ ಪಾಂಡವರು ಇಲ್ಲಿ ತಲೆಮರೆಸಿಕೊಂಡಿದ್ದರು ಎಂಬ ಐತಿಹ್ಯವಿದ್ದು ಅರ್ಜುನನ ಕುದುರೆ ಇಲ್ಲಿಂದ ಹಾತೂರಿನ ವನಭದ್ರಕಾಳಿ ದೇವಸ್ಥಾನದ ಹತ್ತಿರದ ಕಲ್ಲಿನ ಮೇಲೆ ಜಿಗಿಯಿತು. ಇದರ ಗುರುತನ್ನು ಈಗಲೂ ಹಾತೂರಿನಲ್ಲಿರುವ ಕಲ್ಲಿನಲ್ಲಿ ಕಾಣಬಹುದು. ಇದರಿಂದ ಈ ಕಲ್ಲಿಗೆ ಕುದುರೆಮೊಟ್ಟೆ ಎಂದು ಕರೆಯಲಾಗುತ್ತದೆ. ಕುಂದಾ ಬೆಟ್ಟದ ಮೇಲಿನ ಬೊಟ್ಲಪ್ಪ (ಈಶ್ವರ)ದೇವಾಲಯವನ್ನು ಪಾಂಡವರೇ ನಿರ್ಮಿಸಿದರು ಎಂಬ ಪ್ರತೀತಿಯಿದೆ. ಒಂದೇ ರಾತ್ರಿಯಲ್ಲಿ ಕಲ್ಲಿನಿಂದ ಕೆತ್ತಿ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಇಲ್ಲಿನ ಕಲ್ಲಿನಲ್ಲಿ ಇಂದಿಗೂ ಭೀಮನ ಪಾದದ ಮತ್ತು ಬೆರಳುಗಳ ಗುರುತನ್ನು ಕಾಣಬಹುದು. ಇಲ್ಲಿನ ದೇರಟೆ ಕಲ್ಲಿಗೆ ವಿಶೇಷ ಶಕ್ತಿ ಇದೆ ಎಂದು ನಂಬಲಾಗಿದೆ. ಬೆಟ್ಟದ ತುದಿಯ ಒಂದು ಮೂಲೆಯಲ್ಲಿರುವ ದೇರಟೆ ಕಲ್ಲು ಅಂಗೈ ಅಗಲದಷ್ಟಿದ್ದು ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುತ್ತಾರೆ ಹಿರಿಯರು. ಬೆಟ್ಟದ ಕಲ್ಲಿನ ಗುಹೆಯಲ್ಲಿ ಹುಲಿಗಳು ವಾಸಿಸುತ್ತಿದ್ದು ಹಬ್ಬ ನಡೆಯುವ ಒಂದು ವಾರದ ಮುಂಚೆ ಅವುಗಳು ಬೇರೆಡೆಗೆ ತೆರಳಿ ಹಬ್ಬ ನಡೆಸಲು ಅವಕಾಶ ಮಾಡಿಕೊಡುತ್ತಿದ್ದವು ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗ ಅಂಥ ಪ್ರಾಣಿಗಳಿಲ್ಲ.