ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ 14 ಚೆಕ್‌ಪೋಸ್ಟ್‌ಗಳ ರಚನೆ, ಉತ್ಸವಗಳಿಗೆ ಅನುಮತಿ ಕಡ್ಡಾಯ

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ, ಎಲ್ಲೆಡೆ ಹದ್ದಿನ ಕಣ್ಣು, ಬಿಗಿ ತಪಾಸಣೆ
Published 17 ಮಾರ್ಚ್ 2024, 7:03 IST
Last Updated 17 ಮಾರ್ಚ್ 2024, 7:03 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಮಾದರಿ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿದ್ದು, ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ 14 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಚೆಕ್‌ಪೋಸ್ಟ್‌ಗಳು ನಕ್ಸಲರ ಚಲನವಲನಗಳು ಹೆಚ್ಚು ಇರುವ ಕೇರಳ ರಾಜ್ಯದ ಗಡಿಯಲ್ಲಿವೆ. ಇಲ್ಲಿ ಬಿಗಿ ತಪಾಸಣೆ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ’ ಎಂದು ತಿಳಿಸಿದರು.

ಈಗ ಜಿಲ್ಲೆಯಲ್ಲಿ ಹಬ್ಬ, ಉತ್ಸವ, ಜಾತ್ರೆಗಳು ಆರಂಭವಾಗಿವೆ. ಮೇ ಅಂತ್ಯದವರೆಗೂ ಬಹುತೇಕ ಎಲ್ಲೆಡೆ ಉತ್ಸವಗಳು ನಡೆಯಲಿವೆ. ಎಲ್ಲ ಬಗೆಯ ಜಾತ್ರೆ, ಉತ್ಸವಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.

ಮದ್ಯಕ್ಕೆ ಅನುಮತಿ ಕಡ್ಡಾಯ

ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡುವುದಕ್ಕೆ ಕಡ್ಡಾಯವಾಗಿ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮವಾಗಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜನರು ಈ ನಿಯಮಗಳನ್ನು ಪಾಲಿಸುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲೆಯಲ್ಲಿ ಚುನಾವಣೆಗೆ ಮಾರ್ಚ್ 28ರಂದು ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 4ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶ ಇರುತ್ತದೆ. 5ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಏಪ್ರಿಲ್ 8 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಂದೂಕು ಠೇವಣಿ ಇಡಲು ಸೂಚನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಸುಳ್ಳು ಸುದ್ದಿಗಳನ್ನು ಹರಡುವುದು, ಕೋಮು ಸೌಹಾರ್ದತೆ ಹಾಳಾಗುವಂತಹ ಸಂದೇಶಗಳನ್ನು ಹರಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೃತ್ಯಗಳು ಕಂಡು ಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಇನ್ನು ಜಿಲ್ಲೆಯಲ್ಲಿ ಬಹುತೇಕ ಮಂದಿಯಲ್ಲಿ ಬಂದೂಕು, ಆಯುಧಗಳು ಇವೆ. ಪರವಾನಗಿ ಹೊಂದಿರುವ ಬಂದೂಕು ಆಯುಧಗಳನ್ನು ಠೇವಣಿ ಇಡಬೇಕು. ಒಂದು ವೇಳೆ ಜೀವ ರಕ್ಷಣೆ ಹಾಗೂ ಇತರೆ ಕಾರಣಗಳಿಗೆ ಅವುಗಳು ಬೇಕು ಎಂದು ಮುಚ್ಚಳಿಕೆ ಬರೆದುಕೊಟ್ಟರೆ ವಾಪಸ್ ನೀಡಲು ಚಿಂತಿಸಲಾಗುವುದು. ಜಮ್ಮಾ ಬಂದೂಕು ಹಾಗೂ ಆಯುಧಗಳನ್ನು ಹೊಂದಿರುವವರು ಕಳೆದ 5 ವರ್ಷಗಳಲ್ಲಿ ಯಾವುದಾದರೂ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಕಡ್ಡಾಯವಾಗಿ ಠೇವಣಿ ಇಡಲೇಬೇಕು ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗವು ‘ಸಿ–ವಿಜಿಲ್’ ಎಂಬ ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿಪಡಿಸಿದ್ದು, ಈ ಆ್ಯಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಂಡು, ಚುನಾವಣೆಯಲ್ಲಿ ಮತದಾರರಿಗೆ ಅಕ್ರಮವಾಗಿ ಹಣ, ಗೃಹ ಬಳಕೆ ಸಾಮಗ್ರಿಗಳನ್ನು, ಮದ್ಯವನ್ನು ಹಂಚಿಕೆ ಮಾಡುವ ಬಗ್ಗೆ ಹಾಗೂ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಆ್ಯಪ್‌ನಲ್ಲಿ ವಿಡಿಯೊ ಮತ್ತು ಚಿತ್ರಗಳ ಮೂಲಕ ದೂರು ಸಲ್ಲಿಸಬಹುದು ಎಂದರು.

ಜಿಲ್ಲೆಯಲ್ಲಿ ಒಟ್ಟು 1,357 ಸೇವಾ ಮತದಾರರು, 4,411 ಅಂಗವಿಕಲ ಮತದಾರರು ಹಾಗೂ 85 ವರ್ಷ ದಾಟಿದ 5,686 ಮತದಾರರು ಇದ್ದಾರೆ. 85 ವರ್ಷ ದಾಟಿದವರು ಬಯಸಿದರೆ ಮನೆಯಲ್ಲೆ ಮತದಾನ ಮಾಡುವ ಅವಕಾಶವೂ ಇದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪವಿಭಾಗಾಧಿಕಾರಿ ನರ್ವಡೆ ವಿನಾಯಕ್.ಕೆ ಭಾಗವಹಿಸಿದ್ದರು

ಚುನಾವಣಾಧಿಕಾರಿಗಳ ನಿಯೋಜನೆ

ಕೊಡಗು ಜಿಲ್ಲೆಯಲ್ಲಿ ಸಹಾಯಕ ಚುನಾವಣಾಧಿಕಾರಿಯನ್ನಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರನ್ನು ನೇಮಕ ಮಾಡಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಉಪವಿಭಾಗಾಧಿಕಾರಿ ನರ್ವಡೆ ವಿನಾಯಕ್ ಕೆ. ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಎಲ್.ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಒಟ್ಟು 44 ಸೆಕ್ಟರ್ ಅಧಿಕಾರಿಗಳು 21 ಫ್ಲೈಯಿಂಗ್ ಸ್ಕ್ವಾಡ್‌ಗಳು 42 ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡಗಳು 4 ವಿಡಿಯೊ ಸರ್ವೇಲೆನ್ಸ್ ತಂಡಗಳು 2 ವಿಡಿಯೊ ವೀವಿಂಗ್ ತಂಡಗಳು ಸೇರಿದಂತೆ ಇನ್ನಿತರ ಕಾರ್ಯಕ್ಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT