ವಿರಾಜಪೇಟೆ: ‘ಸಮಾಜದ ಉಳಿದ ವರ್ಗದವರಂತೆ ಶೋಷಿತ ಸಮಾಜವು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಧ್ಯೇಯದೊಂದಿಗೆ ಸಮಾಜದಲ್ಲಿ ಹೋರಾಟ ನಡೆಸಿದವರು ನಾರಾಯಣ ಗುರು’ ಎಂದು ಎಸ್.ಎನ್.ಡಿ.ಪಿಯ ವಿರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ.ನಾರಾಯಣ ಅವರು ಅಭಿಪ್ರಾಯಪಟ್ಟರು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ವಿರಾಜಪೇಟೆಯ ಎಸ್.ಎನ್.ಡಿ.ಪಿಯ ಶಾಖೆಯಿಂದ ಮಂಗಳವಾರ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶೋಷಿತ ವರ್ಗಗಳಿಗೆ ನಾರಾಯಣ ಗುರು ದೈವ ಸಮಾನ. ಜಾತೀಯತೆಯನ್ನು ಹೋಗಲಾಡಿಸುವ ಮಾರ್ಗದಲ್ಲಿ ಬೃಹತ್ ಹೋರಾಟವನ್ನು ಮಾಡಿ ಪ್ರತಿಯೊಬ್ಬರಿಗೂ ದೇಗುಲ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟ ಧೀಮಂತ ಸಂತ. ಸಮಾಜದ ಪ್ರತಿಯೊಬ್ಬರೂ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಬೇಕು’ ಎಂದರು.
ಕಾರ್ಯಕ್ರಮದಲ್ಲಿ ಶಾಖೆಯ ಉಪಾಧ್ಯಕ್ಷ ಟಿ.ಆರ್. ಗಣೇಶ್, ಕಾರ್ಯದರ್ಶಿ ಟಿ.ಕೆ. ಪದ್ಮನಾಭ, ಸಮಿತಿಯ ನಿರ್ದೇಶಕ ಕೆ.ಬಿ. ಹರೀಶ್, ಕೆ.ಕೆ. ಅನಿಲ್, ಟಿ.ಡಿ. ಹರೀಶ್, ಕೆ.ಎನ್. ಉಪೇಂದ್ರ, ಭಾಸ್ಕರ, ಪ್ರಭಾ, ಜನಾರ್ದನ್, ಸುಬ್ರಮಣಿ ಮತ್ತು ಕೆ.ಸಿ. ಶಶಿ ಮತ್ತು ಸಮುದಾಯವರು ಹಾಜರಿದ್ದರು.
ವಿರಾಜಪೇಟೆಯ ಎಸ್.ಎನ್.ಡಿ.ಪಿಯ ಶಾಖೆಯಿಂದ ಮಂಗಳವಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಆಚರಿಸಲಾಯಿತು