ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶನಿವಾರಸಂತೆ: ಚಿಗುರೊಡೆಯಿತು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಕನಸು

ಶನಿವಾರಸಂತೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಭರವಸೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ
Published : 12 ಸೆಪ್ಟೆಂಬರ್ 2024, 4:32 IST
Last Updated : 12 ಸೆಪ್ಟೆಂಬರ್ 2024, 4:32 IST
ಫಾಲೋ ಮಾಡಿ
Comments

ಶನಿವಾರಸಂತೆ: ಕೊಡಗು ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಆರಂಭದ ಕನಸು ಚಿಗುರೊಡೆಯಿತು.

ಸದ್ಯ, ಪುತ್ತೂರು ವಿಭಾಗ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ವಿಭಾಗೀಯ ಕಚೇರಿ ತೆರೆಯುವ ಇಂಗಿತವನ್ನು ಸಾರಿಗೆ ಖಾತೆ ಸಚಿವ ರಾಮಲಿಂಗಾರೆಡ್ಡಿ ವ್ಯಕ್ತಪಡಿಸಿದರು.

ಅವರು ಇಲ್ಲಿ ಬುಧವಾರ ನಡೆದ ₹ 1 ಕೋಟಿ ಮೊತ್ತದ ನೂತನ ಬಸ್‌ನಿಲ್ದಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈಗ ಮಡಿಕೇರಿಯಲ್ಲಿ ಮಾತ್ರವೇ ಕೆಎಸ್‌ಆರ್‌ಟಿಸಿ ಬಸ್‌ ಘಟವಿದ್ದು, ಕುಶಾಲನಗರದಲ್ಲಿ ಬಸ್‌ ಘಟಕ ನಿರ್ಮಾಣವಾಗುತ್ತಿದೆ. ಕೇವಲ ಎರಡೇ ಘಟಕಗಳಿಗೆ ಒಂದು ವಿಭಾಗೀಯ ಕಚೇರಿ ಆರಂಭಿಸುವುದು ಕಷ್ಟ. ಅದಕ್ಕಾಗಿ ರಾಮನಾಥಪುರ ಸೇರಿದಂತೆ ಸಮೀಪದ ಘಟಕಗಳನ್ನು ಒಳಗೊಂಡು ಕೊಡಗಿನಲ್ಲಿ ವಿಭಾಗೀಯ ಕಚೇರಿ ಆರಂಭಿಸಬಹುದು ಎಂದು ಅಭಿಪ್ರಾಯಪಟ್ಟರು.

‘ಶಕ್ತಿ’ ಯೋಜನೆ ನಂತರ ಕರ್ನಾಟಕ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮತ್ತು ಸುಧಾರಣೆಯಾಗಿದೆ. ಪ್ರತಿನಿತ್ಯ ಸಾವಿರಾರು ಮಹಿಳೆಯರು ಬಸ್‍ನಲ್ಲಿ ಸಂಚರಿಸುತ್ತಿದ್ದಾರೆ ಎಂದು ತಿಳಿಸಿದರು.

‘ಶಕ್ತಿ’ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ, 4,500 ಹೊಸ ಬಸ್‍ಗಳನ್ನು ಸಹ ಖರೀದಿಸಲಾಗಿದೆ. ಜೊತೆಗೆ ಚಾಲಕ, ನಿರ್ವಾಹಕ ಸೇರಿದಂತೆ 9 ಸಾವಿರ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 12ರಂದು ಬೆಂಗಳೂರಿನಲ್ಲಿ ಹೊಸ ಬಸ್‍ಗಳ ಸಂಚಾರ ಸೇರಿದಂತೆ ಸಾರಿಗೆ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಕೊಡ್ಲಿಪೇಟೆಯಲ್ಲೂ ಸಹ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಹಾಗೆಯೇ ಖಾಸಗಿ ಬಸ್ ಮಾಲೀಕರ ಸಮಸ್ಯೆಯನ್ನು ಸಹ ಆಲಿಸಲಾಗಿದೆ. ಹೊಸ ಬಸ್ ಮಾರ್ಗಕ್ಕೂ ಸಹ ಅಗತ್ಯ ಕ್ರಮವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಹೊಸ ಬಸ್‌ನಿಲ್ದಾಣದ ಕಾಮಗಾರಿಯನ್ನು 9 ತಿಂಗಳ ಒಳಗಡೆ ಮುಗಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ, ಮುಖಂಡರಾದ ಕೆ.ಪಿ.ಚಂದ್ರಕಲಾ, ಚಂದ್ರಮೌಳಿ, ಶನಿವಾರಸಂತೆ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆಮಲಿಂಗಯ್ಯ ಬಿ.ಹೊಸ ಪೂಜಾರಿ, ಮಡಿಕೇರಿ ಕೆಸ್‍ಆರ್‌ಟಿಸಿ ಘಟಕ ವ್ಯವಸ್ಥಾಪಕ ಎಂ.ಎಂ.ಮೆಹಬೂಬ್ ಅಲಿ ಭಾಗವಹಿಸಿದ್ದರು.

ಹಿಂದಿನ ಜಿಲ್ಲಾಧಿಕಾರಿ ಶ್ರಮ ನೆನೆದ ಗ್ರಾಮಸ್ಥರು: ಬಸ್‌ನಿಲ್ದಾಣದ ಕಾಮಗಾರಿ ವೇಳೆ ಭಾಗವಹಿಸಿದ್ದ ಬಹುತೇಕ ಮಂದಿ ಸಾರ್ವಜನಿಕರು ಹಿಂದಿನ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಅವರ ಶ್ರಮವನ್ನು ಶ್ಲಾಘಿಸಿದರು. ಸ್ವತಃ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಜಾಗವನ್ನು ಸರ್ವೇ ಮಾಡಿಸಿ ಅದನ್ನು ಬಸ್‌ನಿಲ್ದಾಣಕ್ಕೆಂದು ಮೀಸಲಿರಿಸಿದರು ಎಂದು ಅವರು ನೆನೆದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು

ಬೆಂಗಳೂರಿನಲ್ಲಿ ಹೊಸ ಬಸ್‍ ಸಂಚಾರ ಆರಂಭ ಇಂದು  9 ತಿಂಗಳ ಒಳಗಡೆ ಮುಗಿಸುವಂತೆ ಸೂಚನೆ ಹಿಂದಿನ ಜಿಲ್ಲಾಧಿಕಾರಿ ಸತೀಶ್‌ ಅವರ ಶ್ರಮಕ್ಕೆ ಶ್ಲಾಘನೆ

ಶನಿವಾರಸಂತೆಯಲ್ಲಿ ಬಸ್ ನಿಲ್ದಾಣದ ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು. ಜಿಲ್ಲೆಗೆ ಮತ್ತಷ್ಟು ನೂತನ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು
ಸುಜಾ ಕುಶಾಲಪ್ಪ ವಿಧಾನ ಪರಿಷತ್ ಸದಸ್ಯ.
ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿರುವುದು ಗಮನಾರ್ಹ
ಧರ್ಮಜ ಉತ್ತಪ್ಪ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ.
ಬಹು ದಶಕಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ
ಗೀತಾ ಹರೀಶ್ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಬಸ್ ನಿಲ್ದಾಣಕ್ಕೆ ಸ್ಥಳ ದೊರೆಯಲು ಹಲವರು ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಹಿಂದಿನ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರನ್ನು ಮರೆಯುವಂತಿಲ್ಲ
ರಘು ಗ್ರಾಮ ಪಂಚಾಯಿತಿ ಸದಸ್ಯ.

ದುಂಡಳ್ಳಿಯಲ್ಲಿ ನಿರ್ಮಾಣವಾಗಬೇಕಿದೆ ಖಾಸಗಿ ಬಸ್‌ನಿಲ್ದಾಣ; ಮಂತರ್‌ಗೌಡ

ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಮುಂದಿನ ದಿನಗಳಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೂ ದುಂಡಳ್ಳಿಯಲ್ಲಿ ಅವಕಾಶ ಮಾಡಬೇಕು’ ಎಂದು ಮನವಿ ಮಾಡಿದರು. ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಹಲವು ದಶಕಗಳ ಒತ್ತಾಯವಾಗಿತ್ತು. ಅದೀಗ ಸಾಕಾರಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಕೆಎಸ್‍ಆರ್‌ಟಿಸಿ ವಿಭಾಗೀಯ ಘಟಕ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು. ಪ್ರತ್ಯೇಕ ವಿಭಾಗೀಯ ಘಟಕ ಆರಂಭಿಸುವುದರ ಜೊತೆಗೆ ಬಸ್‍ಗಳಿಗೆ ಕೆಎ12 ನೋಂದಣಿ ಆಗಬೇಕು ಎಂದು ಕೋರಿದರು. ಬಸ್ ನಿಲ್ದಾಣ ನಿರ್ಮಾಣದ ಬಳಿ ಇರುವ ಜಾಗವನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು. ಇದರಿಂದ ಮಳಿಗೆ ನಿರ್ಮಾಣ ಮಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಹಲವು ದೇವಾಲಯಗಳು ಇದ್ದು ದೇವಾಲಯಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದೂ ಅವರು ಮನವಿ ಮಾಡಿದರು. ‘ಶಕ್ತಿ’ ಯೋಜನೆ ಆರಂಭದಿಂದ ಕೊಡಗು ಜಿಲ್ಲೆಯಲ್ಲಿ ಇದುವರೆಗೆ 70 ಲಕ್ಷ ಮಹಿಳೆಯರು ಸಂಚರಿಸಿದ್ದು ₹ 27 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT