ಮಂಗಳವಾರ, ಜೂನ್ 28, 2022
21 °C
ಏಳನೇ ಹೊಸಕೋಟೆಯ ‘ಹಸಿದವರಿಗೆ ಹಸಿವು ನೀಗಿಸುವ ತಂಡ’ದ ಸೇವೆ

ಹಸಿದವರಿಗೆ ಅನ್ನ ನೀಡುವ ಯುವಕರು

ಸುನಿಲ್ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಕೊರೊನಾ ಲಾಕ್‌ಡೌನ್‌ ನಿಂದಾಗಿ ಹೋಬಳಿ ವ್ಯಾಪ್ತಿಯ ಹೋಟೆಲ್, ಕ್ಯಾಂಟೀನ್‌ಗಳು ಮುಚ್ಚಿರುವುದರಿಂದ ವಾಹನ ಚಾಲಕರು, ನಿರ್ಗತಿಕರು, ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಊಟವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಇಂಥ ಕಷ್ಟದಲ್ಲಿರುವವರಿಗೆ ನೆರವಾಗಲೆಂದೇ ಏಳನೇ ಹೊಸಕೋಟೆಯ ಆರು ಮಂದಿ ‘ಹಸಿದವರ ಹಸಿವು ನೀಗಿಸುವ ತಂಡ’ ಕಟ್ಟಿಕೊಂಡು ನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಹಾದು ಹೋಗುವ ಲಾರಿ, ಆಂಬುಲೆನ್ಸ್ ಸೇರಿದಂತೆ ಇತರೆ ವಾಹನಗಳ ಚಾಲಕರಿಗೆ, ನಿರ್ಗತಿಕರಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಸಮಸ್ಯೆ ಆಗಿರುವುದನ್ನು ಮನಗಂಡ ತಂಡದ ಮುರುಗೇಶ್, ರವಿಚಂದ್ರ, ನಾಸೀರ್, ಸುಗು, ಹಂಸ ಹಾಗೂ ದೀಪು ಅವರು ಊಟದ ಪೊಟ್ಟಣ ಕಟ್ಟಿ ಹಾಗೂ ತಟ್ಟೆಗಳಲ್ಲೂ ನೀಡಿ ಹಸಿವು ನೀಗಿಸುವ ಉತ್ತಮ ಕೆಲಸ
ಮಾಡುತ್ತಿದ್ದಾರೆ.

ಅಡುಗೆಯವರಿಂದ ಅನ್ನ, ಸಾಂಬಾರ್‌ ಮಾಡಿಸುತ್ತಾರೆ. ಕೆಲವೊಮ್ಮೆ ಆರು ಮಂದಿ ಯುವಕರೇ ಸೇರಿಕೊಂಡು ಅಡುಗೆ ಸಿದ್ಧಪಡಿಸುತ್ತಾರೆ. ನಿತ್ಯವೂ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ಸದಸ್ಯರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ಊಟ-ನೀರು ನೀಡುತ್ತಾರೆ. ಉಳಿದವರು ಸ್ಥಳೀಯ ಮತ್ತು ಸುಂಟಿಕೊಪ್ಪದ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಹಾಗೂ ಮಾರುಕಟ್ಟೆಯಲ್ಲಿ ಆಶ್ರಯ ಪಡೆದ ನಿರ್ಗತಿಕರಿಗೆ ಊಟ ವಿತರಿಸುತ್ತಾರೆ. ಪ್ರತಿನಿತ್ಯ 150 ರಿಂದ 200 ಮಂದಿಯ ಹಸಿವು ನೀಗಿಸುತ್ತಿದ್ದಾರೆ.

‘ಆರಂಭದಲ್ಲಿ ಆರು ಮಂದಿ ಹಣ ಹಾಕಿ ಪಲಾವ್ ಮಾಡಿಸಿ ವಿತರಿಸಿದೆವು. ನಮ್ಮ ಕಾರ್ಯ ಮೆಚ್ಚಿ ದಾನಿಗಳು ನೆರವು ನೀಡಲು ಮುಂದೆ ಬಂದರು. ವಿದೇಶದಿಂದಲೂ ಕರೆ ಮಾಡಿ ದಾನ ಮಾಡುವುದಾಗಿ ತಿಳಿಸಿದ್ದಾರೆ’ ಎಂದು ತಂಡದ ಅಧ್ಯಕ್ಷ ಮುರುಗೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಲಾಕ್‌ಡೌನ್‌ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಹಸಿವು ತಣಿಸುವ ಕೆಲಸವನ್ನು ಸಹ ನಾವು ಮಾಡುತ್ತಿದ್ದೇವೆ. ದಾನಿಗಳ ಸಹಕಾರ ಬಹಳಷ್ಟಿದೆ, ಲಾಕ್‌ಡೌನ್‌ ಮುಗಿಯುವವರೆಗೂ ನಮ್ಮ ಈ ಕಾರ್ಯ ಮುಂದುವರಿಯಲಿದೆ’ ಎಂದು ತಂಡದ ನಾಸೀರ್ ಅವರು
ತಿಳಿಸಿದರು.

‘ಆರು ಜನರ ಈ ತಂಡ ದಾನಿಗಳ ಸಹಾಯದೊಂದಿಗೆ ಉತ್ತಮ ಕೆಲಸ ಮಾಡುತ್ತಿದೆ. ಅವರ ಸೇವೆಗೆ ಎಲ್ಲರ ಸಹಕಾರ ಇದೆ’ ಎಂದು ಸ್ಥಳೀಯ ಉದ್ಯಮಿ ದಾಸಂಡ ರಮೇಶ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು