ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಚ್‌ಒ ಮನೆ ಮೇಲೆ ಎಸಿಬಿ ದಾಳಿ

ಆದಾಯ ಮಿತಿಗಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣ
Last Updated 2 ಫೆಬ್ರುವರಿ 2021, 14:14 IST
ಅಕ್ಷರ ಗಾತ್ರ

ಕೋಲಾರ: ಆದಾಯ ಮಿತಿಗಿಂತ ಹೆಚ್ಚಿನ ಆಸ್ತಿ ಗಳಿಕೆ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್‌.ವಿಜಯ್‌ಕುಮಾರ್‌ರ ಮನೆ, ಕಚೇರಿ ಸೇರಿದಂತೆ 6 ಕಡೆ ಮಂಗಳವಾರ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಮುಳಬಾಗಿಲು ನಗರದಲ್ಲಿರುವ ವಿಜಯ್‌ಕುಮಾರ್‌ರ ಮನೆ, ನರ್ಸಿಂಗ್‌ ಹೋಂ, ಜಿಲ್ಲಾ ಕೇಂದ್ರದಲ್ಲಿನ ಕಚೇರಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿರುವ ಮನೆ, ಬೆಂಗಳೂರಿನ ರಾಜಾಜಿನಗರ ಹಾಗೂ ಜಕ್ಕೂರು ಬಳಿಯ ಫ್ಲಾಟ್‌ಗಳ ಮೇಲೆ ಎಸಿಬಿ ಡಿವೈಎಸ್ಪಿ ಪುರುಷೋತ್ತಮ್‌ ಮತ್ತು ಸಿಬ್ಬಂದಿ ತಂಡವುಮುಂಜಾನೆಯೇ ಏಕಕಾಲಕ್ಕೆ ದಾಳಿ ನಡೆಸಿದೆ.

ಒಟ್ಟಾರೆ 36 ಸಿಬ್ಬಂದಿಯನ್ನು ಒಳಗೊಂಡ 6 ತಂಡಗಳು ವಿಜಯ್‌ಕುಮಾರ್‌ರ ಮನೆ, ಫ್ಲಾಟ್‌ಗಳಲ್ಲಿ ಶೋಧ ನಡೆಸಿವೆ. ಬೆಳಿಗ್ಗೆ 6 ಗಂಟೆಯಿಂದ ತಡರಾತ್ರಿವರೆಗೂ ತಪಾಸಣೆ ಮಾಡಿದ ಅಧಿಕಾರಿಗಳು ಆಸ್ತಿ, ವಾಹನ, ಚಿನ್ನಾಭರಣ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆಪತ್ರ ವಶಪಡಿಸಿಕೊಂಡಿದ್ದಾರೆ.

ವಿಜಯ್‌ಕುಮಾರ್‌ ಅವರು ಮುಳಬಾಗಿಲು, ಕೋಲಾರ ಮತ್ತು ಬೆಂಗಳೂರಿನಲ್ಲಿ ತಲಾ ಒಂದು ಮನೆ, ಬೆಂಗಳೂರಿನ ವಿವಿಧೆಡೆ 3 ಫ್ಲಾಟ್‌, ಕೋಲಾರ ಮತ್ತು ಬೆಂಗಳೂರಿನಲ್ಲಿ 3 ನಿವೇಶನ, ಮುಳಬಾಗಿಲಿನಲ್ಲಿ ನರ್ಸಿಂಗ್‌ ಹೋಂ ಹೊಂದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸಿಬಿ ಉನ್ನತ ಮೂಲಗಳು ತಿಳಿಸಿವೆ.

ವಿಜಯ್‌ಕುಮಾರ್‌ ಅವರು ಬೆಂಗಳೂರಿನ ಯಲಹಂಕದ ಥಣಿಸಂದ್ರ ಬಳಿ 13 ಗುಂಟೆ ಕೃಷಿ ಜಮೀನು, ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಸಮೀಪ 1 ಎಕರೆ ಕೃಷಿ ಜಮೀನು ಖರೀದಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅವರ ಮನೆಯಲ್ಲಿ ಪರಿಶೀಲನೆ ವೇಳೆ ₹ 10 ಲಕ್ಷ ನಗದು ಮತ್ತು ಸುಮಾರು 300 ಗ್ರಾಂ ಚಿನ್ನಾಭರಣ, 2 ಕಾರು ಪತ್ತೆಯಾಗಿವೆ ಎಂದು ಮೂಲಗಳು ಹೇಳಿವೆ.

6 ಖಾತೆ: ವಿಜಯ್‌ಕುಮಾರ್‌, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 6 ಖಾತೆ ತೆರೆದಿದ್ದಾರೆ. ಅಲ್ಲದೇ, ಹಲವು ಬ್ಯಾಂಕ್‌ಗಳಲ್ಲಿ ಸೀಕ್ರೇಟ್‌್ ಲಾಕರ್‌ ಹೊಂದಿದ್ದರು. ಖಾತೆಗಳಲ್ಲಿ ₹ 51.21 ಲಕ್ಷ ಠೇವಣಿ ಇಟ್ಟಿರುವುದು ಖಚಿತವಾಗಿದೆ. ಬ್ಯಾಂಕ್‌ ಲಾಕರ್‌ಗಳನ್ನು ಪರಿಶೀಲಿಸಬೇಕಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ವಿಜಯ್‌ಕುಮಾರ್‌ ಅವರು ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿ ಬೇನಾಮಿಯಾಗಿ ಆಸ್ತಿ ಖರೀದಿಸಿರುವ ಬಗ್ಗೆ ಮಾಹಿತಿ ಇದೆ. ಕುಟುಂಬ ಸದಸ್ಯರ ಹೆಸರಿನಲ್ಲಿ ಜಮೀನುಗಳು ನೊಂದಣಿಯಾಗಿವೆ. ವಿಜಯ್‌ಕುಮಾರ್‌ ಆದಾಯ ಮಿತಿಗಿಂತಲೂ ಹಣ ಮತ್ತು ಆಸ್ತಿಯ ಮೌಲ್ಯ ಹೆಚ್ಚಿದೆ. ಇದಕ್ಕೆ ಸಂಬಂಧಪಟ್ಟಂತೆ ದಾಖಲೆಪತ್ರ ಹಾಜರುಪಡಿಸಲು ಅವರಿಗೆ ಸೂಚಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT