ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಲೋಕಸಭೆ ಕ್ಷೇತ್ರ | ಮಹಿಳಾ ಮತ ಅಧಿಕ; ಟಿಕೆಟ್‌ಗೆ ಪುರುಷರು ಮುಂದು!

Published 21 ಫೆಬ್ರುವರಿ 2024, 6:35 IST
Last Updated 21 ಫೆಬ್ರುವರಿ 2024, 6:35 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ದಿನಗಳು ಸನ್ನಿಹಿತವಾಗಿದ್ದು, ಕೋಲಾರ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಬಿಜೆಪಿ–ಜೆಡಿಎಸ್‌ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ಗಾಗಿ ಪುರುಷ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿದೆ. ಮಹಿಳೆಯರ ಹೆಸರೇ ಕಾಣುತ್ತಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ ಕ್ಷೇತ್ರ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್‌, ಬಂಗಾರಪೇಟೆ, ಕೋಲಾರ ಹಾಗೂ ಮಾಲೂರು ಕ್ಷೇತ್ರ ಈ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸೇರಿವೆ.

ವಿಶೇಷವೆಂದರೆ ಎಂಟೂ ಕ್ಷೇತ್ರಗಳಲ್ಲಿ ಮಹಿಳಾ ಮತದಾರರದ್ದೇ ಮೇಲುಗೈ. ಹೀಗಾಗಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸುವುದು ಖಚಿತ. ‌ಆದರೆ, ಟಿಕೆಟ್‌ ವಿಚಾರದಲ್ಲಿ ಅವರನ್ನು ಮಾತನಾಡಿಸುವವರೇ ಇಲ್ಲ.

ಎಂಟೂ ಕ್ಷೇತ್ರಗಳಿಂದ ಸೇರಿ 8.45 ಲಕ್ಷ ಪುರುಷ ಮತದಾರರಿದ್ದರೆ, 8.62 ಲಕ್ಷ ಮಹಿಳಾ ಮತದಾರರಿದ್ದಾರೆ.

ಹೀಗಾಗಿ, ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಬೇಕಾಗಿದೆ. ಇವರಲ್ಲಿ ಯಶಸ್ವಿಯಾದವರಿಗೆ ವಿಜಯಲಕ್ಷ್ಮಿ ಕೈಹಿಡಿಯುವ ಸಾಧ್ಯತೆ ಹೆಚ್ಚು.

ಕೇವಲ ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿನ ಲೆಕ್ಕಾಚಾರ ಗಮನಿಸಿದರೂ ಮಹಿಳಾ ಮತದಾರರೇ ಮುಂದಿದ್ದಾರೆ. 6.32 ಲಕ್ಷ ಪುರುಷ ಮತದಾರರಿದ್ದರೆ, 6.45 ಲಕ್ಷ ಮಹಿಳಾ ಮತದಾರರಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯಲ್ಲಿ 6.08 ಲಕ್ಷ ಪುರುಷರು ಹಾಗೂ 6.04 ಲಕ್ಷ ಮಹಿಳಾ ಮತದಾರರು ಸೇರಿ ಒಟ್ಟು 12.12 ಲಕ್ಷ ಮತದಾರರಿದ್ದರು. ಈ ಮೂಲಕ ಪುರುಷ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದರು. 

ಬಿಜೆಪಿ–ಜೆಡಿಎಸ್‌ ಮೈತ್ರಿ ಪಕ್ಷದಿಂದ ಈ ಬಾರಿ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಹಾಲಿ ಸಂಸದರೂ ಆಗಿರುವ ಎಸ್‌.ಮುನಿಸ್ವಾಮಿ, ಸಮೃದ್ಧಿ ಮಂಜುನಾಥ್‌, ಮಲ್ಲೇಶಬಾಬು, ನಿಸರ್ಗ ನಾರಾಯಣಸ್ವಾಮಿ ಹೆಸರು ಮುಂಚೂಣಿಯಲ್ಲಿವೆ. ಇನ್ನು ಕಾಂಗ್ರೆಸ್‌ ಪಕ್ಷದಲ್ಲಿ ಕೆ.ಎಚ್‌. ಮುನಿಯಪ್ಪ, ಕೆ.ಜಿ. ಚಿಕ್ಕಪೆದ್ದಣ್ಣ, ಎಚ್‌. ನಾಗೇಶ್‌, ಡಾ.ಬಿ.ಸಿ. ಮುದ್ದುಗಂಗಾಧರ್‌, ಮದನ್‌ ಪಟೇಲ್‌ ಸೇರಿದಂತೆ ಒಂದು ಡಜನ್‌ ಆಕಾಂಕ್ಷಿಗಳಿದ್ದಾರೆ. 

2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಕೆಜಿಎಫ್‌ ಶಾಸಕಿ, ಕಾಂಗ್ರೆಸ್‌ನ ರೂಪಕಲಾ ಶಶಿಧರ್ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಯಾವ ಮಹಿಳೆಯ ಹೆಸರೂ ಕಾಣಿಸಿರಲಿಲ್ಲ. 

‘ಮಹಿಳೆಯರು ಟಿಕೆಟ್‌ ಕೇಳಿಕೊಂಡು ಹೋದರೆ ರಾಜಕೀಯ ಪಕ್ಷಗಳ ವರಿಷ್ಠರು ತಮ್ಮ ಹತ್ತಿರವೂ ಸೇರಿಸಲ್ಲ. ಲೋಕಸಭೆ, ವಿಧಾನಸಭೆ ಎರಡರಲ್ಲೂ ಇದೇ ಪರಿಸ್ಥಿತಿ. ಮೂರೂ ಪಕ್ಷಗಳಿಗೆ ಮಹಿಳೆಯರ ಮೇಲೆ ಕಾಳಜಿ ಇಲ್ಲ. ಆದರೆ, ಮತ ಕೋರಿಕೊಂಡು ಮಹಿಳಾ ಮತದಾರರ ಮನೆ ಬಾಗಿಲು ತಟ್ಟುತ್ತಾರೆ. ಮಹಿಳೆಯರಿಗಾಗಿಯೇ ವಿಶೇಷ ಘೋಷಣೆ ಮೊಳಗಿಸುತ್ತಾರೆ’ ಎಂದು ಹೇಳುತ್ತಾರೆ ಮಹಿಳಾ ನಾಯಕಿಯರು. 

‘ಬಿಜೆಪಿಯವರು ಭಾರತ್‌ ಮಾತಾಕೀ ಜೈ ಎನ್ನುತ್ತಾರೆ, ಕಾಂಗ್ರೆಸ್‌ನವರು ಸೋನಿಯಾ ಗಾಂಧಿಗೆ ಜೈ ಎನ್ನುತ್ತಾರೆ. ಜೆಡಿಎಸ್‌ನ ಚಿಹ್ನೆಯೇ ಮಹಿಳೆ. ಆದರೆ, ಎಲ್ಲ ಪಕ್ಷಗಳೂ ಮಹಿಳೆಯರನ್ನು ಕಡೆಗಣಿಸುತ್ತಿವೆ’ ಎಂದು ದೂರುತ್ತಾರೆ. 

ಮಹಿಳಾ ಟಿಕೆಟ್ ಆಕಾಂಕ್ಷಿಗಳು ಇದ್ದರೂ ಮುಂದೆ ಬಂದು ಕೇಳುವ ವಾತಾವರಣ ಇಲ್ಲ. ಹೀಗಾಗಿ ಯಾರೂ ಟಿಕೆಟ್‌ ಕೋರಿ ಮುಂದೆ ಬರಲ್ಲ. ಕುಟುಂಬ ಹಿನ್ನೆಲೆ ಇದ್ದರೆ ಅವಕಾಶ ಸಾಧ್ಯತೆ ಇರುತ್ತದೆ
- ಕುರ್ಕಿ ರಾಜೇಶ್ವರಿ, ಎಪಿಎಂಸಿ ಮಾಜಿ ಅಧ್ಯಕ್ಷೆ ಕೋಲಾರ
ಎಲ್ಲಾ ಪಕ್ಷಗಳಲ್ಲೂ ಅಲ್ಲಿರುವ ಪುರುಷ ನಾಯಕರು ಮಹಿಳೆಯರಿಗೆ ಅವಕಾಶವನ್ನೇ ನೀಡಲ್ಲ. ಚುನಾವಣೆಯಲ್ಲಿ ಮಹಿಳೆಯರ ಮತ ಮಾತ್ರ ಬೇಕು ಪ್ರಾತಿನಿಧ್ಯ ಕೊಡಲ್ಲ
- ವಿ.ಗೀತಾ, ಜನವಾದಿ ಮಹಿಳಾ ಸಂಘಟನೆ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT