ಬುಧವಾರ, ಸೆಪ್ಟೆಂಬರ್ 23, 2020
23 °C
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ ನೌಕರರು

ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರ ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಮುನಿರಾಜಮ್ಮ, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಐಸಿಡಿಎಸ್ ಯೋಜನೆಯುಡಿ ಶ್ರಮಿಸಲಾಗುತ್ತಿದೆ. ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಬಾಲಕಿಯರ ಸರ್ವತೋಮುಖ ಬೆಳವಣಿಗೆಗೆ ಐಸಿಡಿಎಸ್ ಯೋಜನೆ ಪ್ರಮುಖ ಪಾತ್ರವಹಿಸಿದೆ. ಇಂತಹ ಯೋಜನೆಯನ್ನು ಸಬಲೀಕರಿಸುವ ಕೆಲಸವಾಗಬೇಕು. ಆದರೆ, ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ದಾಖಾಲಾತಿಯನ್ನು ಹೆಚ್ಚಿಸಲು ಎಲ್‌ಕೆಜಿ ಮತ್ತು ಯುಕೆಜಿಯನ್ನು ಇದೀಗ ಆರಂಭಿಸಿದ್ದು, ಅಂಗನವಾಡಿಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.

‘ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‍ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸಬೇಕು. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 3ರಿಂದ 4 ತಿಂಗಳ ಗೌರವಧನ ಬಂದಿಲ್ಲ. ಕೋಳಿ ಮೊಟ್ಟೆ, ತರಕಾರಿಯ ಹಣ ಕೂಡ ಬಾಕಿಯಿದೆ. ಸರಿಯಾಗಿ ಗ್ಯಾಸ್ ವಿತರಣೆಯಾಗಿಲ್ಲ. ಈ ಸಮಸ್ಯೆಯನ್ನು ನೀಗಿಸಬೇಕು. ಕೇಂದ್ರ ಸರ್ಕಾರವು 2018 ಅಕ್ಟೋಬರ್‌ನಲ್ಲಿ ಹೆಚ್ಚಳವಾದ ಗೌರವಧನವನ್ನು ಬಿಡುಗಡೆ ಮಾಡಬೇಕು. ನಿವೃತ್ತಿ ಆದ ಕಾರ್ಯಕರ್ತೆ ಸಹಾಯಕಿಯರಿಗೆ ಇಡಿಗಂಟು ನೀಡಬೇಕು. 2016ರ ಏಪ್ರಿಲ್‌ನಿಂದ ಆಯ್ಕೆಯಾದ ಕಾರ್ಯಕರ್ತೆ ಸಹಾಯಕಿಯರಿಗೆ ಖಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು. ಈಗಾಗಲೇ ನಿವೃತ್ತರಾದವರಿಗೆ ಕನಿಷ್ಠ ₹3000 ಪಿಂಚಣಿ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯೋಜನೆಯನ್ನು ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು’ ಎಂದು ಆಗ್ರಹಿಸಿದರು.

‘5 ವರ್ಷಗಳನ್ನು ಪೂರೈಸಿದ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. ಶ್ರೀನಿವಾಸಪುರ ತಾಲ್ಲೂಕಿನ  ಜಿ. ಈಶ್ವರಮ್ಮ ಅವರ ವರ್ಗಾವಣೆಯಲ್ಲಿ ಆಗಿರುವ ಇಲಾಖಾ ತಾರತಮ್ಯವನ್ನು ಕೂಡಲೇ ಸರಿಪಡಿಸಿ, ಮರು ಆದೇಶ ಮಾಡಬೇಕು.  ಬೇತಮಂಗಲ ಯೋಜನೆಯಲ್ಲಿ ಬಾಕಿ ಇರುವ ಅಂಗನವಾಡಿ ಕಟ್ಟಡಗಳ ಒಂದು ವರ್ಷದ ಬಾಡಿಗೆ ಹಣವನ್ನೂ ಕೂಡಲೇ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಬಿ.ಎಸ್. ನಾಗರತ್ನ, ಮುಖಂಡರಾದ ಜಿ.ಈಶ್ವರಮ್ಮ, ಕಲ್ಪನಾ, ಮಂಜುಳ, ಲಕ್ಷ್ಮೀದೇವಮ್ಮ, ಎಂ.ಲಕ್ಷ್ಮಮ್ಮ, ಸುಜಾತ, ಪಿ.ಸಿ.ಜಯಮ್ಮ, ಆಂಜಿಲಮ್ಮ, ನೇತ್ರಾವತಿ, ಶೈಲ, ಅಮುದ, ರತ್ನ, ಇಂದ್ರಾಣಿಯಮ್ಮ, ಸುಶೀಲಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು