ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವತೆ ಪೂಜಿಸುತ್ತೇವೆ; ಮಹಿಳೆಯರನ್ನೇಕೆ ಅರ್ಚಕರನ್ನಾಗಿ ಮಾಡಲ್ಲ?: ನ್ಯಾ.ಕೆ.ಚಂದ್ರು

Last Updated 18 ಜನವರಿ 2023, 13:09 IST
ಅಕ್ಷರ ಗಾತ್ರ

ಕೋಲಾರ: ‘ಮಹಿಳಾ ದೇವರನ್ನು ಪೂಜಿಸುತ್ತೇವೆ. ಆದರೆ, ಕೆಲ ದೇಗುಲಗಳಲ್ಲಿ ಮಹಿಳೆಯರಿಗೆ ಏಕೆ ಪ್ರವೇಶ ನೀಡುವುದಿಲ್ಲ, ಮಹಿಳೆಯರನ್ನು ಏಕೆ ಅರ್ಚಕರನ್ನಾಗಿ ಮಾಡುವುದಿಲ್ಲ' ಎಂದು ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ‘ಜೈ ಭೀಮ್‌’ ಸಿನಿಮಾ ಖ್ಯಾತಿಯ ಕೆ.ಚಂದ್ರು ಪ್ರಶ್ನಿಸಿದರು.

ಅಖಿಲ ಭಾರತ ವಕೀಲರ ಒಕ್ಕೂಟ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬುಧವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನನ್ನ ದೂರು ಕೇಳಿ’ ಹಾಗೂ ‘ಕರ್ನಾಟಕ ಸ್ಟೂಡೆಂಟ್ಸ್‌ ಇನ್‌ ಫ್ರೀಡಂ ಮೂವ್‌ಮೆಂಟ್‌’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಹಿಳೆಯರು ದೇಗುಲದ ಪೂಜಾರಿ ಅಥವಾ ಅರ್ಚಕರಾಗಬಾರದೆಂದು, ದೇಗುಲ ಪ್ರವೇಶ ಮಾಡಬಾರದೆಂದು ಯಾವುದೇ ಕಾನೂನಿನಲ್ಲಿ ಇಲ್ಲ. ಮಹಿಳೆಯರು ಪೂಜೆ, ಆಚರಣೆ ಮಾಡುತ್ತಿದ್ದ ಉಲ್ಲೇಖ ವೇದಗಳಲ್ಲಿದೆ. ಲಿಂಗ, ಜಾತಿ, ಧರ್ಮ ತಾರತಮ್ಯ ಮಾಡದೆ ಎಲ್ಲರೂ ಸಮಾನರು ಎಂಬುದಾಗಿ ಸಂವಿಧಾನದಲ್ಲಿ ಅಂಬೇಡ್ಕರ್‌ ಬರೆದಿದ್ದಾರೆ. ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ' ಎಂದರು.

‘ಧರ್ಮದ ಹೆಸರಿನಲ್ಲಿ ಶೋಷಣೆಗೆ ಕರ್ನಾಟಕ ಪ್ರಯೋಗಾಲಯ ಆಗಿದೆ. ಹಿಜಾಬ್‌, ಹಲಾಲ್, ಆಜಾನ್‌ ಬಗ್ಗೆ ತಕರಾರು ತೆಗೆಯುತ್ತಿದ್ದಾರೆ. ಸಮಾಜ‌ ಒಳಗೊಳ್ಳುವಿಕೆಯೇ ಕಾಣುತ್ತಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಹಿಜಾಬ್ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಪರೀಕ್ಷೆ ಬರೆಯಲೂ ಬಿಡಲಿಲ್ಲ. ಇದು ಸಂವಿಧಾನ ವಿರೋಧಿ ಕ್ರಮ. ಸಮಾಜದಲ್ಲಿ ವಿಷಕಾರಿ ಚಿಂತನೆಗಳ ಬೀಜ ಬಿತ್ತುವ ಕಳವಳಕಾರಿ ವಿದ್ಯಮಾನಗಳು ನಡೆಯುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕೆ.ಚಂದ್ರು ಬರೆದಿರುವ ‘ನನ್ನ ದೂರು ಕೇಳಿ’ ಕೃತಿಯನ್ನು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಭಾರತಿ ದೇವಿ ಪಿ. ಹಾಗೂ ಪತ್ರಕರ್ತ ಸತೀಶ್‌ ಜಿ.ಟಿ. ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಕರ್ನಾಟಕ ಸ್ಟೂಡೆಂಟ್ಸ್‌ ಇನ್‌ ಫ್ರೀಡಂ ಮೂವ್‌ಮೆಂಟ್‌’ ಕೃತಿಯನ್ನು ಪತ್ರಕರ್ತ ವಿಶ್ವ ಕುಂದಾಪುರ ಬರೆದಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT