ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ಬೆಮಲ್‌ ಶಕ್ತಿ ತೋರಿಸುತ್ತೇವೆ;ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ

ಒಂದು ತಿಂಗಳ ಸರದಿ ನಿರಶನದಲ್ಲಿ ಬೆಮಲ್ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಎಚ್ಚರಿಕೆ
Last Updated 17 ಫೆಬ್ರುವರಿ 2021, 4:38 IST
ಅಕ್ಷರ ಗಾತ್ರ

ಕೆಜಿಎಫ್‌: ‘ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ನಡೆಸಿರುವ ಹುನ್ನಾರವನ್ನು ಕಾರ್ಮಿಕ ಶಕ್ತಿ ತಡೆಯುತ್ತದೆ’ ಎಂದು ಬೆಮಲ್ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

ಬೆಮಲ್‌ ನಗರದಲ್ಲಿ ಮಂಗಳವಾರ ಖಾಸಗೀಕರಣವನ್ನು ವಿರೋಧಿಸಿ ಬೆಮಲ್‌ ಕಾರ್ಮಿಕರು ನಡೆಸುತ್ತಿರುವ ಒಂದು ತಿಂಗಳ ಸರದಿ ನಿರಶನಕ್ಕೆ ಚಾಲನೆ ನೀಡಿ ಮಾತನಾಡಿ, ಖಾಸಗೀಕರಣ ಮಾಡಬಾರದು ಎಂದು ಐದು ಬಾರಿ ರಕ್ಷಣಾ ಸಚಿವರನ್ನು ಭೇಟಿಮಾಡಿದ್ದೇವೆ. ಚುನಾವಣೆ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿದ್ದರು. ಈಗ ಚುನಾವಣೆ ಯಾವುದೂ ಇಲ್ಲ. ಆದ್ದರಿಂದ ಎಕ್ಸ್‌ಪ್ರೆಸನ್‌ ಆಫ್ ಇಂಟರೆಸ್ಟ್‌ ಗೆ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಮಿಕರು ಸಂಘಟನೆಯಾದರೆ ಮಾತ್ರ ಕೇಂದ್ರ ಸರ್ಕಾರದ ನಿರ್ಧಾರವನ್ನು ತಡೆಯಬಹುದು ಎಂದರು.

ಸೇಲಂ ಸ್ಡೀಲ್‌ ಪ್ಲಾಂಟ್‌ನಲ್ಲಿ ಮುಷ್ಕರ ನಡೆಯುತ್ತಿದೆ. ಒಂದು ವರ್ಷದಿಂದ ಸರದಿ ಮೇರೆಗೆ ನಿರಶನ ನಡೆಯುತ್ತಿದೆ. ಅಲ್ಲಿನ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆದೇ ರೀತಿ ನಾವು ಕೂಡ ಜಿಲ್ಲೆಯ ನಾಲ್ವರು ಶಾಸಕರು, ಒಬ್ಬ ವಿಧಾನಪರಿಷತ್ ಸದಸ್ಯರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿರುವ ಏಕೈಕ ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಉಳಿಸಿ ಎಂದು ಕೇಳಿಕೊಂಡಿದ್ದೇವೆ. ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಂಗಾರಪೇಟೆ ಶಾಸಕ ಎಸ್‌.ಎನ್.ನಾರಾಯಣಸ್ವಾಮಿ ತಾಲ್ಲೂಕಿನ ಎಲ್ಲ ಜನಪ್ರತಿನಿಧಿಗಳನ್ನು ಕರೆತಂದು ನಿರಶನದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಆಂಜನೇಯರೆಡ್ಡಿ ಹೇಳಿದರು.

1964ರಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಅಂದಿನ ಮುಖಂಡ ಎಂ.ವಿ.ಕೃಷ್ಣಪ್ಪ, ನಿಜಲಿಂಗಪ್ಪ, ಕಾಮರಾಜ್‌ ಪ್ರಯತ್ನ ನಡೆಸಿದ ಪರಿಣಾಮವಾಗಿ ಕೆಜಿಎಫ್‌ ನಲ್ಲಿ ಬೆಮಲ್‌ ಸ್ಥಾಪನೆಯಾಯಿತು. ಇಂದು ಜಿಲ್ಲೆಯಲ್ಲಿರುವ ಏಕೈಕ ಪಿಎಸ್‌ಯು ಮುಚ್ಚಲು ಕೇಂದ್ರ ಸರ್ಕಾರ ಹವಣಿಸಿದೆ. ಆದರೆ ಅವರಿಗೆ ಬೆಮಲ್‌ ಕಾರ್ಮಿಕರ ಶಕ್ತಿ ಗೊತ್ತಿಲ್ಲ. ಈ ಹಿಂದೆ ಬೆಮಲ್‌ ಮೌಲ್ಯ ನಿರ್ಧಾರ ಮಾಡಲು ತಂಡ ಬಂದಿತ್ತು. ಆದರೆ ಬೆಮಲ್‌ ಕಾರ್ಮಿಕರ ಶಕ್ತಿಗೆ ಹೆದರಿ ಬಂಗಾರಪೇಟೆಯಿಂದಲೇ ವಾಪಸ್‌ ಹೋದರು. ಇದು ಇತಿಹಾಸ. ಅದೇ ಇತಿಹಾಸ ಮರುಕಳಿಸಬೇಕು. ಇಡೀ ಜಿಲ್ಲೆ ಬೆಮಲ್‌ ಪರವಾಗಿ ನಿಂತಿದೆ. ಅವರೆಲ್ಲರೂ ಬೆಮಲ್‌ ತಮ್ಮ ಜಿಲ್ಲೆಯ ಹೆಮ್ಮೆಯ ಕಾರ್ಖಾನೆ ಎಂದು ತಿಳಿದಿದ್ದಾರೆ ಎಂದು ತಿಳಿಸಿದರು.

ಬೆಮಲ್‌ ಯಾವಾಗಲೂ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಯಾಗಿದ್ದರೆ, ಅದು ಎಂದಿಗೂ ಸಾಮಾಜಿಕ ನ್ಯಾಯ ನೀಡುತ್ತದೆ. ಸಣ್ಣಪುಟ್ಟ ಉದ್ದಿಮೆಗಳು ತಲೆ ಎತ್ತುತ್ತವೆ. ಬೆಮಲ್‌ ಕಾರ್ಮಿಕರು ಪಡೆಯುವ ₹400 ಕೋಟಿ ವೇತನ ಇಲ್ಲಿಯೇ ಖರ್ಚಾಗುತ್ತಿದೆ. ಆದರೆ ಖಾಸಗಿ ಕಂಪನಿ ಬಂದರೆ, ಕಾರ್ಮಿಕರ ಬದಲಾಗಿ ಯಂತ್ರಗಳನ್ನು ಅಳವಡಿಸುತ್ತಾರೆ. ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಾರೆ. ಸಣ್ಣಪುಟ್ಟ ಕಾಯಿಲೆ ಇರುವ ಕಾರ್ಮಿಕರು ಕೆಲಸದಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಆಂಜನೇಯರೆಡ್ಡಿ ಹೇಳಿದರು.

ಮುಂದಿನ ವರ್ಷ ₹5000 ಕೋಟಿ ಆರ್ಡರ್ ಇದೆ. ಈಗಿರುವ 1500 ಕಾರ್ಮಿಕರನ್ನು ಇಟ್ಟುಕೊಂಡು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಹೆಚ್ಚಿನ ನೇಮಕಾತಿ ಆಗಬೇಕು. ಅದು ಬೆಮಲ್‌ ಖಾಸಗೀಕರಣವಾಗದೆ ಇದ್ದರೆ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.

ಪದಾಧಿಕಾರಿಗಳಾದ ಗಣೇಶ್‌ಕುಮಾರ್, ಓ.ರಾಮಚಂದ್ರರೆಡ್ಡಿ ಮತ್ತು ಗೋಪಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT