ಕೊಪ್ಪಳ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ 11ನೇ ದಿನದ ವಿಸರ್ಜನಾ ಮೆರವಣಿಗೆ ಮಂಗಳವಾರ ರಾತ್ರಿ ಅದ್ದೂರಿಯಾಗಿ ಆರಂಭವಾಗಿದ್ದು, ಡಿಜೆ ಸದ್ದಿನ ಅಬ್ಬರಕ್ಕೆ ಯುವಕರು ಸಂಭ್ರಮದಿಂದ ಕುಣಿದರು.
ಕೋಟೆ ರಸ್ತೆಯ ವಿನಾಯಕ ಮಿತ್ರ ಮಂಡಳಿ, ಏಕದಂತ ಗಜಾನನ ಮಿತ್ರಮಂಡಳಿ, ಗಡಿಯಾರ ಕಂಬದ ಬಳಿ ಇರುವ ಗಜಾನನ ಮಿತ್ರ ಮಂಡಳಿ, ಕೊಪ್ಪಳ ಕಾ ಸರ್ಕಾರ, ಕೊಪ್ಪಳ ಕಾ ಮಹಾರಾಜ ಹೀಗೆ ಅನೇಕ ಸಂಘಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು.
ಗಡಿಯಾರ ಕಂಬದ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಕಣ್ಣು ಕೊರೈಸುವ ಬಣ್ಣಬಣ್ಣದ ವಿದ್ಯುತ್ ಬೆಳಕಿನ ನಡುವೆ ಡಿ.ಜೆ. ಸದ್ದಿಗೆ ಹೆಜ್ಜೆ ಹಾಕಿದರು. ಸ್ನೇಹಿತರು, ಗಣಪತಿ ಪ್ರತಿಷ್ಠಾನ ಮಂಡಳಿಯವರು ಕೈ ಕೈ ಹಿಡಿದು ಕುಣಿದರು. ಬುಧವಾರ ಬೆಳಿಗಿನ ಜಾವದ ತನಕ ಮೆರವಣಿಗೆ ನಡೆಯಲಿದ್ದು, ಬಳಿಕ ಮೂರ್ತಿಗಳ ವಿಸರ್ಜನೆ ಜರುಗಲಿದೆ.