ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ ತಾಪಂ: ಸದಸ್ಯರಿಗೆ ವಿಪ್‌ ಜಾರಿಗೊಳಿಸಿದ ಬಿಜೆಪಿ

ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಸಭೆ ಇಂದು
Last Updated 16 ಜುಲೈ 2019, 19:45 IST
ಅಕ್ಷರ ಗಾತ್ರ

ಕುಷ್ಟಗಿ: ಇಲ್ಲಿಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ನೀಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಅವಿಶ್ವಾಸ ನಿರ್ಣಯ ಪರ್ಯಾಯಲೋಚನಾ ಸಭೆ ಜುಲೈ 17 ರಂದು ನಡೆಯಲಿದ್ದು ತೀವ್ರ ಕುತೂಹಲ ಕೆರೆಳಿಸಿದೆ.

25 ಸದಸ್ಯ ಬಲದ ತಾಲ್ಲೂಕು ಪಂಚಾಯಿತಿ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿದ್ದು ಅಧ್ಯಕ್ಷೆ ಮಹಾಂತಮ್ಮ ಪೂಜಾರ ಮತ್ತು ಉಪಾಧ್ಯಕ್ಷೆ ಮಂಜುಳಾ ಪಾಟೀಲ ಇವರ ಕಾರ್ಯವೈಖರಿಗೆ ಬೇಸತ್ತಿರುವುದಾಗಿ ಹೇಳಿ ಬಿಜೆಪಿಯ ಮೂವರನ್ನು ಹೊರತುಪಡಿಸಿ ಉಳಿದ ಬಿಜೆಪಿ ಮತ್ತು ಕಾಂಗ್ರೆಸ್‌ನ 22 ಜನ ಸದಸ್ಯರೂ ಪಕ್ಷಾತೀತವಾಗಿ ಅವಿಶ್ವಾಸ ನಿರ್ಣಯಕ್ಕೆ ಸಭೆ ಕರೆಯುವಂತೆ ಜೂನ್‌ 19 ರಂದು ಕಾರ್ಯನಿರ್ವಾಹಕ ಅಧಿಕಾರಿಗೆ ಸಾಮೂಹಿಕವಾಗಿ ಪತ್ರ ನೀಡಿದ್ದರು.

ಆದರೆ, ಮಂಜುಳಾ ಪಾಟೀಲ ಜೂನ್‌ 26 ರಂದೇ ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 11 ಗಂಟೆಗೆ ಸಭೆ ನಡೆಯಬೇಕಿದೆ. ಆದರೆ, ಅಧಿಕಾರದ ಕುರ್ಚಿಗೆ ಬಂದಿರುವ ಕುತ್ತಿನಿಂದ ಪಾರಾಗುವ ನಿಟ್ಟಿನಲ್ಲಿ ತೀವ್ರ ಪ್ರಯತ್ನ ನಡೆಸಿರುವ ಬಿಜೆಪಿ ಸಭೆಯಲ್ಲಿ ಅಧ್ಯಕ್ಷೆ ಪರವಾಗಿ ಮತ್ತು ಅವಿಶ್ವಾಸ ಗೊತ್ತುವಳಿ ವಿರುದ್ಧ ಬೆಂಬಲಿಸುವಂತೆ ವಿಪ್‌ ಮೂಲಕ ಕಟ್ಟಪ್ಪಣೆ ಹೊರಡಿಸಿರುವುದು ಪಕ್ಷದ ಸದಸ್ಯರಿಗೆ ನುಂಗಲಾರದ ತುತ್ತಾಗಿದೆ.

ಪತಿಯ ಕಾರಬಾರ: ತಾಲ್ಲೂಕು ಪಂಚಾಯಿತಿಯ ಪ್ರಸಕ್ತ ಅಧಿಕಾರದ ಅವಧಿ ಈಗಾಗಲೇ 40 ತಿಂಗಳು ಪೂರೈಸಿದ್ದು ಕೇವಲ 20 ತಿಂಗಳು ಮಾತ್ರ ಉಳಿದಿವೆ. ಮಹಾಂತಮ್ಮ ಪೂಜಾರ ಹೆಸರಿಗೆ ಮಾತ್ರ ಅಧ್ಯಕ್ಷೆಯಾಗಿದ್ದು ಎಲ್ಲ ಅಧಿಕಾರ ಅವರ ಪತಿ ಕಾಶೀಮಪ್ಪ ಪೂಜಾರ ಚಲಾಯಿಸುತ್ತಿದ್ದಾರೆ. ಇತರೆ ಸದಸ್ಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ, ಕ್ಷೇತ್ರಗಳ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಕಚೇರಿಗೆ ಬರುವುದೇ ಅಪರೂಪ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದೆ ಇತರೆ ಸದಸ್ಯರು ಬಿಜೆಪಿ ಮುಖಂಡರಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಕುರಿತು ಸೋಮವಾರ ರಾತ್ರಿ ಇಲ್ಲಿಯ ಸರ್ಕೀಟ್‌ ಹೌಸ್‌ದಲ್ಲಿ ಸಭೆ ನಡೆಸಿದ ಪಕ್ಷದ ಮುಖಂಡರು ಸದಸ್ಯರ ಅಸಮಾಧಾನ ತಣ್ಣಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೆಲ ಸದಸ್ಯರು 'ಪ್ರಜಾವಾಣಿ'ಗೆ ತಿಳಿಸಿದರು.

ಬದಲಾದ ನಿರ್ಧಾರ: ತಮ್ಮದೇ ಪಕ್ಷದ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ತುದಿಗಾಲ ಮೇಲೆ ನಿಂತಿದ್ದ ಬಿಜೆಪಿ ಸದಸ್ಯರ ನಿರ್ಧಾರ ಬದಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಬುಧವಾರ ನಡೆಯಲಿರುವ ಅವಿಶ್ವಾಸ ಗೊತ್ತುವಳಿ ಮೇಲಿನ ಸಭೆಗೆ ಅವಿಶ್ವಾಸ ನಿರ್ಣಯ ತರಲು ಮುಂದಾಗಿದ್ದ ಬಿಜೆಪಿ ಸದಸ್ಯರೇ ಗೈರು ಹಾಜರಾಗಲು ನಿರ್ಧರಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಬಿಜೆಪಿ ಮೂಲಗಳು ತಿಳಿಸಿವೆ.

ಹಾಗಾದರೆ ಬಿಜೆಪಿ ಸದಸ್ಯರೊಂದಿಗೆ ಕೈಜೋಡಿಸಿದ್ದ ಕಾಂಗ್ರೆಸ್‌ ಸದಸ್ಯರು ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು ಒಂದುವೇಳೆ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡರೆ ಅತಿ ಹೆಚ್ಚು ಸ್ಥಾನ ಹೊಂದಿರುವ ಬಿಜೆಪಿಯಲ್ಲಿಯೇ ಈ ಜಾತಿಗೆ ಸೇರಿದ ಬೇರೆ ಸದಸ್ಯೆ ಇಲ್ಲ, ಕಾಂಗ್ರೆಸ್‌ನಲ್ಲಿ ಮಾತ್ರ ಒಬ್ಬ ಸದಸ್ಯೆ ಇದ್ದಾರೆ. ಅಧಿಕಾರ ತಾವೇ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ ಸದಸ್ಯರನ್ನು ವಿಪ್‌ ಮೂಲಕ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ ಎಂದು ತಿಳಿಸಲಾಗಿದೆ.

*
ಸಭೆಯಲ್ಲಿ 3ನೇ 2ರಷ್ಟು ಸದಸ್ಯರು (17) ಸದಸ್ಯರ ಕೋರಂ ಇಲ್ಲದಿದ್ದರೆ ಸಭೆ ರದ್ದು.
ಕೆ.ತಿಮ್ಮಪ್ಪ, ತಾ.ಪಂ ಇಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT