ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಅಭ್ಯರ್ಥಿ ಹಿಟ್ನಾಳ ಪರ ಅಜರುದ್ದೀನ್‌ ‘ಬ್ಯಾಟಿಂಗ್‌’: ಕ್ರಿಕೆಟ್‌ ಭಾಷೆಯಲ್ಲೇ ಪ್ರಚಾರ

Published 4 ಮೇ 2023, 17:07 IST
Last Updated 4 ಮೇ 2023, 17:07 IST
ಅಕ್ಷರ ಗಾತ್ರ

ಕೊಪ್ಪಳ: ಕ್ರೀಡಾಂಗಣದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಅಬ್ಬರಿಸುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್‌ ನಗರದಲ್ಲಿ ಗುರುವಾರ ‘ಪ್ರಖರ ಮಾತುಗಳ’ ಮೂಲಕ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ‘ಮತಬೇಟೆ’ಯ ಬ್ಯಾಟಿಂಗ್ ಮಾಡಿದರು.

‘ಚುನಾವಣೆಯಲ್ಲಿ ಅನ್ಯ ಪಕ್ಷ ಟೀಕಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೈದಾನದಲ್ಲಿದ್ದೇವೆ ಎಂದ ಮೇಲೆ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿಯೇ ನಮ್ಮ ಅಭ್ಯರ್ಥಿ ಹಿಟ್ನಾಳ ಅವರನ್ನು ಗೆಲ್ಲಿಸಬೇಕು’ ಎಂದು ಕ್ರಿಕೆಟ್‌ ಭಾಷೆಯಲ್ಲಿಯೇ ಮತಯಾಚನೆ ಮಾಡಿದರು.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಅಜರುದ್ದೀನ್‌ ಇಲ್ಲಿನ ತೆಗ್ಗಿನಕೆರೆ ಓಣಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ‘ಕೊಪ್ಪಳಕ್ಕೆ ಬರುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಪ್ರಚಾರ ಇಲ್ಲಿಂದಲೇ ಶುರುವಾಗಿದೆ. ಹಿಂದಿನ ಸರ್ಕಾರಗಳ ವೈಫಲ್ಯಗಳ ಬಗ್ಗೆ ಮಾತನಾಡುವುದಕ್ಕಿಂತ ನಾವು ಮುಂದೆ ಏನು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎನ್ನುವದರ ಬಗ್ಗೆ ಯೋಚಿಸಬೇಕಿದೆ’ ಎಂದರು.

‘ಕ್ರಿಕೆಟ್‌ ಮೈದಾನದಲ್ಲಿ ಶತಕ ಹೊಡೆಯಲು ಬಹಳಷ್ಟು ಕಷ್ಟಪಡಬೇಕು. ಕೆಲ ಬಾರಿ ಶತಕದ ಸಮೀಪ ಬಂದು ಔಟ್‌ ಆಗುತ್ತೇವೆ. ಅದೇ ರೀತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಯಾರು ಜನಪರವಾದ ಅಭಿವೃದ್ಧಿ ಕೆಲಸಗಳ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಹೊಡೆಯುತ್ತಾರೊ ಅವರಿಗೆ ಜನ ಜೈ ಎನ್ನುತ್ತಾರೆ’ ಎಂದರು.

‘ನನ್ನ ವೃತ್ತಿ ಬದುಕಿನಲ್ಲಿ 99 ಟೆಸ್ಟ್‌ ಪಂದ್ಯಗಳನ್ನು ಆಡಿದ್ದೇನೆ. ಹಿಟ್ನಾಳ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿದಂತೆ. ನಾನು 100 ಪಂದ್ಯಗಳನ್ನು ಆಡಿದಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ರನ್‌ ಔಟ್‌ ಮಾಡಬೇಡಿ‘ ಎಂದರು.

ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್‌ ಕೆ. ರಾಠೋಡ್‌, ವಕೀಲ ಅಸೀಫ್ ಅಲಿ, ಮುಖಂಡರಾದ ಕೆ.ರಾಜಶೇಖರ್ ಹಿಟ್ನಾಳ, ಪ್ರಸನ್ನ ಗಡಾದ, ಕಾಟನ್ ಪಾಷಾ, ಮಹೇಂದ್ರ ಚೋಪ್ರಾ, ಅಮ್ಜದ್ ಪಟೇಲ್‌, ಕೃಷ್ಣ ಇಟ್ಟಂಗಿ, ಇಂದಿರಾ ಭಾವಿಕಟ್ಟಿ, ಜನಾರ್ದನ ಹುಲಿಗಿ, ಮುತ್ತುರಾಜ್ ಕುಷ್ಟಗಿ, ವಿರೂಪಾಕ್ಷಪ್ಪ ಮೋರನಾಳ, ಮಾನ್ವಿ ಪಾಷಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT