ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌ | ಕೊಪ್ಪಳ: ಬಿತ್ತನೆ ಪೂರ್ಣ, ಮುಂಗಾರು ನಿರಾತಂಕ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌.
Published : 30 ಆಗಸ್ಟ್ 2024, 5:25 IST
Last Updated : 30 ಆಗಸ್ಟ್ 2024, 5:25 IST
ಫಾಲೋ ಮಾಡಿ
Comments
ಪ್ರ

ರಾಕೇಶ, ಘಟ್ಟಿರೆಡ್ಡಿಹಾಳ: ಬೆಳೆದ ಉಳ್ಳಾಗಡ್ಡಿ ವ್ಯಾಪಕ ಮಳೆಯಿಂದಾಗಿ ಕೊಳೆತು ಹೋಗಿದೆ. ಏನು ಮಾಡಬೇಕು?

ಈ ಸಲದ ಮುಂಗಾರಿನಲ್ಲಿ ಬೆಳೆ ಹಾನಿಗೆ ಪರಿಹಾರ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ವಿಮೆ ತುಂಬಿದ್ದರೆ ನಮ್ಮ ಕಚೇರಿಗೆ ಅರ್ಜಿ ಕಳುಹಿಸಿ. ನಿಮ್ಮ ಸಮೀಪದ ಕೃಷಿ ಇಲಾಖೆ ಅಧಿಕಾರಿಗಳೊಂದಿಗೂ ಮಾತನಾಡಿ.

ಪ್ರ

ಹುಸೇನಪ್ಪ ಹಿರೇಮನಿ, ಮುದೇನೂರು: ಜೀವನೋಪಾಯ ನಿಧಿ ಯೋಜನೆ ಯಲಬುರ್ಗಾ ತಾಲ್ಲೂಕಿಗೆ ಮಾತ್ರ ಸೀಮಿತವೇ?

ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಇದು ಅನ್ವಯವಾಗುತ್ತದೆ. ಕಳೆದ ವರ್ಷ ಬರಗಾಲವಿದ್ದ ಕಾರಣ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ₹2000ರಂತೆ ಈ ನಿಧಿ ನೀಡಲಾಗಿತ್ತು. ಜಿಲ್ಲೆಯ 54 ಸಾವಿರ ರೈತರಿಗೆ ಇದರ ಪ್ರಯೋಜನ ಲಭಿಸಿದೆ.

ಪ್ರ

ವೀರಭದ್ರಪ್ಪ ಕೋರಿ, ನವಲಹಳ್ಳಿ: ರಸಗೊಬ್ಬರ ತರಲು ನಮ್ಮಲ್ಲಿ ಜನಸಂದಣಿ ಇರುವುದರಿಂದ ನಿತ್ಯ ಕಾಯುವುದು ಕೆಲಸವಾಗಿದೆ. ಇನ್ನೊಂದು ಕೇಂದ್ರ ಆರಂಭಿಸಬಹುದಲ್ಲವೇ?

ಜನಸಂದಣಿಯಾಗುತ್ತಿರುವ ಸಮಸ್ಯೆ ನಮ್ಮ ಗಮನಕ್ಕಿದೆ. ಚರ್ಚೆಯೂ ಆಗಿದೆ. ಹಿಂಗಾರು ಅವಧಿಯಲ್ಲಿ ಆದಷ್ಟು ಬೇಗನೆ ಮತ್ತೊಂದು ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಬೆಂಬಲ ಬೆಲೆಯಲ್ಲಿ ಹೆಸರು ಹಾಗೂ ಸೂರ್ಯಕಾಂತಿ ಖರೀದಿಗೆ ನೋಂದಣಿ ಆರಂಭವಾಗಿದೆ. ಆದಷ್ಟು ಬೇಗನೆ ನೋಂದಣಿ ಮಾಡಿಕೊಳ್ಳಿ.

ಪ್ರ

ರಮೇಶ, ಅಳವಂಡಿ: ಕಳೆದ ಹಿಂಗಾರಿನಲ್ಲಿ ಮೆಣಸಿನಕಾಯಿ ಬೆಳೆಗೆ ವಿಮೆ ತುಂಬಿದ್ದೆವು. ಇನ್ನೂ ಹಣ ಬಂದಿಲ್ಲ?

ಇದು ಬೆಳೆ ಆಧಾರಿತ ವಿಮೆಯಾಗಿದ್ದು, ತೋಟಗಾರಿಕಾ ಇಲಾಖೆಗೆ ಜಿಲ್ಲಾಧಿಕಾರಿ ಈ ಕುರಿತು ನಿರ್ದೇಶನ ನೀಡಿದ್ದಾರೆ. ಆದಷ್ಟು ಬೇಗನೆ ಬರಬಹುದು. ಹಿಂದಿನ ವರ್ಷ ರಾಜ್ಯ ಸರ್ಕಾರ ಮುಂಗಾರು ಬೆಳೆಗಳ ಬರ ಘೋಷಣೆ ಮಾಡಿತ್ತು. ಮುಂಗಾರಿನಲ್ಲಿ ₹ 74 ಕೋಟಿ ಬೆಳೆ ವಿಮೆ ರೈತರಿಗೆ ನೀಡಲಾಗಿದೆ.

ಪ್ರ

ಚಂದ್ರಶೇಖರ, ಹನಕುಂಟಿ: ಮೆಕ್ಕಜೋಳ ಗಿಡ ಬುಡಸಮೇತ ಹಾಳಾಗಿದೆ ಹೋಗಿದ್ದು, ಏನು ಮಾಡಬೇಕು?

ಮಳೆ ಜಾಸ್ತಿಯಾಗಿರುವುದರಿಂದ ಸಮಸ್ಯೆಯಾಗಿದೆ. ಈಗ ನಿಯಂತ್ರಣ ಕಷ್ಟವಾಗಿದ್ದು, ಸಮಸ್ಯೆಯಾಗಿರುವ ಬೆಳೆಯನ್ನು ಆದಷ್ಟು ಬೇಗನೆ ಕಿತ್ತು ಹಾಕಿ. ಇಲ್ಲವಾದರೆ ಇರುವ ಬೆಳೆಗೂ ರೋಗ ಹರಡಿಕೊಳ್ಳುತ್ತದೆ. ಪರ್ಯಾಯ ಬೆಳೆಯ ಬಗ್ಗೆಯೂ ಯೋಚನೆ ಮಾಡಿ. ಎರಡ್ಮೂರು ದಿನಗಳಲ್ಲಿ ವಿಜ್ಞಾನ ಕೇಂದ್ರದ ಸಂಶೋಧಕರನ್ನು ನಿಮ್ಮೂರಿಗೆ ಕಳುಹಿಸುವೆ.

ಪ್ರ

ಶಂಕ್ರಪ್ಪ ಸಾದರ, ಹಿರೇಹಂಚಿನಾಳ: ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆಯಾಗಿದ್ದು, ಅದನ್ನು ಪಡೆದುಕೊಳ್ಳುವುದು ಹೇಗೆ?

ಬೆಂಬಲ ಬೆಲೆಯ ಯೋಜನೆ ಲಾಭ ಪಡೆದುಕೊಳ್ಳಲು ಬೆಳೆ ಸಮೀಕ್ಷೆಯಾಗಿರಬೇಕು. ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ ಕೇಂದ್ರದಲ್ಲಿ ಕೊಡಬೇಕು. ಬೆಳೆ ಚೆನ್ನಾಗಿ ಒಣಗಿಸಿಕೊಂಡು ಹೋಗಬೇಕು.

ಪ್ರ

ಏಳುಕೋಟೇಶ, ಬೆಟಗೇರಿ: ಹೊಲದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ 100 ದಿನ ಕೆಲಸ ನೀಡಲು ಕೃಷಿ ಇಲಾಖೆ ಅನುಷ್ಠಾನ ತೆಗೆದುಕೊಂಡಿದೆ. ಬದು ನಿರ್ಮಾಣಕ್ಕೆ ಇನ್ನೂ ಕೆಲಸ ಸಿಕ್ಕಿಲ್ಲ?

ಎಲ್ಲ ಇಲಾಖೆ ಸೇರಿ 100 ದಿನ ಕೆಲಸ ಕೊಡಬೇಕು ಎನ್ನುವ ನಿಯಮವಿದೆ. ಇಷ್ಟು ದಿನಗಳ ಕಾಲ ಹೊಲದಲ್ಲಿ ಬೆಳೆ ಇದ್ದ ಕಾರಣ ಕೊಟ್ಟಿರಲಿಲ್ಲ. ಬೆಳೆ ಕಟಾವು ಮಾಡಿದ ತಕ್ಷಣ ಕೆಲಸ ಮಾಡಿಕೊಡಲಾಗುವುದು.

ಪ್ರ

ಹನುಮರಡ್ಡಿ, ಘಟ್ಟರೆಡ್ಡಿಹಾಳ: ಹೊಲ ಜಂಟಿಯಾಗಿದ್ದು, ಎರಡು ಪಹಣಿ ಇವೆ. ಜಿಪಿಎಸ್‌ ಮಾಡಲು ಹೋದಾಗ ಒಂದು ಪಹಣಿ ಮಾತ್ರ ಬರುತ್ತದೆ. ಈ ಸಮಸ್ಯೆಗೆ ಪರಿಹಾರವೇನು? 

ಹಿಸ್ಸಾ ಆಗಿಲ್ಲವಾದರೆ ಈ ಸಮಸ್ಯೆಯಾಗುತ್ತದೆ. ಮೊದಲು ಹಿಸ್ಸಾ ಮಾಡಿಸಿ ಸಮಸ್ಯೆ ಪರಿಹಾರವಾಗುತ್ತದೆ. ಈ ಕುರಿತು ಪರಿಶೀಲಿಸಲು ನಮ್ಮ ಅಧಿಕಾರಿಗಳಿಗೆ ಸೂಚಿಸುವೆ. ನಿಮ್ಮ ವ್ಯಾಪ್ತಿಯ ಕವಲೂರು ಪಿ.ಆರ್‌.ಗೆ ಮಾಹಿತಿ ಕಳುಹಿಸಿ. 

ಪ್ರ

ಪರಮೇಶರಡ್ಡಿ, ಹ್ಯಾಟಿ: ನನ್ನ ಹಾಗೂ ತಾಯಿ ಹೆಸರಿನಲ್ಲಿ ಪಹಣಿ ಪ್ರತ್ಯೇಕವಾಗಿದೆ. ಪಿ.ಎಂ. ಕಿಸಾನ್‌ ಹಣ ಬರುತ್ತಿಲ್ಲ.

2019ಕ್ಕಿಂತಲೂ ಮೊದಲು ಪಹಣಿ ಇದ್ದವರಿಗೆ ಮಾತ್ರ ಈ ಸೌಲಭ್ಯ ಲಭಿಸುತ್ತದೆ. ಕುಟುಂಬದ ಒಬ್ಬರಿಗೆ ಮಾತ್ರ ಈ ಸೌಲಭ್ಯ ಲಭಿಸುತ್ತದೆ. ತಾಯಿಗೆ ಬಂದರೆ ಮಗನಿಗೆ, ಹೆಂಡತಿಗೆ ಬಂದರೆ ಗಂಡನಿಗೆ ಬರುವುದಿಲ್ಲ. ನಿಮ್ಮ ಸಮೀಪದ ಕೃಷಿ ಅಧಿಕಾರಿಯನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸುತ್ತಾರೆ.

ಕೃಷಿ ಇಲಾಖೆಯ ಅಧಿಕಾರಿಗಳು: (ಎಡದಿಂದ ಬಲಕ್ಕೆ) ನಲ್ಲೇನಿ ಟಿ. ಶಿವಶೇಖರ ಪಾಟೀಲ (ಸಹಾಯಕ ಕೃಷಿ ನಿರ್ದೇಶಕ) ರುದ್ರೇಶಪ್ಪ ಟಿ.ಎಸ್‌.(ಜಂಟಿ ನಿರ್ದೇಶಕ) ಪ್ರಕಾಶ ಚೌಡಿ ಹಾಗೂ ಮೊಹಮ್ಮದ್‌ ಹಸನ್‌   ಪ್ರಜಾವಾಣಿ ಚಿತ್ರಗಳು: ಭರತ್‌ ಕಂದಕೂರ
ಕೃಷಿ ಇಲಾಖೆಯ ಅಧಿಕಾರಿಗಳು: (ಎಡದಿಂದ ಬಲಕ್ಕೆ) ನಲ್ಲೇನಿ ಟಿ. ಶಿವಶೇಖರ ಪಾಟೀಲ (ಸಹಾಯಕ ಕೃಷಿ ನಿರ್ದೇಶಕ) ರುದ್ರೇಶಪ್ಪ ಟಿ.ಎಸ್‌.(ಜಂಟಿ ನಿರ್ದೇಶಕ) ಪ್ರಕಾಶ ಚೌಡಿ ಹಾಗೂ ಮೊಹಮ್ಮದ್‌ ಹಸನ್‌   ಪ್ರಜಾವಾಣಿ ಚಿತ್ರಗಳು: ಭರತ್‌ ಕಂದಕೂರ
ಪ್ರ

ಈಶ್ವರಯ್ಯ ಹಿರೇಬೊಮ್ಮನಹಾಳ: ಕೃಷಿ ಇಲಾಖೆಯಲ್ಲಿ ಇರುವ ಪ್ರಮುಖ ಯೋಜನೆಗಳು ಯಾವುವು? ಅವುಗಳನ್ನು ಪಡೆಯುವುದು ಹೇಗೆ?

ಕೃಷಿ ಇಲಾಖೆಯಿಂದ 20ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆ ಟ್ರ್ಯಾಕ್ಟರ್‌ ನೇಗಿಲು ಹೀಗೆ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ಸಬ್ಸಿಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಅಗತ್ಯ ಇರುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಇಲಾಖೆಯಲ್ಲಿ ಹಣಕಾಸಿನ ಲಭ್ಯತೆ ಆಧಾರದ ಮೇಲೆ ಮಂಜೂರು ಮಾಡಲಾಗುತ್ತದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯ್‌ ಯೋಜನೆಯಲ್ಲಿ ಸ್ಪಿಂಕ್ಲರ್‌ ಪಡೆಯಲು ಶೇ 90ರಷ್ಟು ಸಹಾಯಧನ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಪಂಪ್‌ಸೆಂಟ್‌ ಸ್ಪಿಂಕ್ಲರ್‌ ಸೇರಿ ಹಲವು ಸೌಲಭ್ಯ ಲಭಿಸುತ್ತವೆ. ಮಣ್ಣು ಆರೋಗ್ಯ ಅಭಿಯಾನದಡಿ ಉಚಿತವಾಗಿ ಮಣ್ಣು ಪರೀಕ್ಷಾ ವರದಿ ನೀಡುವುದು ಹೀಗೆ ಅನೇಕ ಯೋಜನೆಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT