ರೈಲು ಮಾರ್ಗ ಪರಿಶೀಲಿಸಿದ ಸಂಸದ ಸಂಸದ ಸಂಗಣ್ಣ ಕರಡಿ

ಕಾರಟಗಿ: ‘ಹುಬ್ಬಳ್ಳಿಯಿಂದ ಗಂಗಾವತಿವರೆಗೆ ಬರುತ್ತಿದ್ದ ರೈಲು ಸಂಚಾರವು ಕಾರಟಗಿವರೆಗೂ ವಿಸ್ತರಣೆಯಾಗಿದ್ದು, 165 ಕೀ.ಮೀ ಉದ್ದದ ರೈಲ್ವೆಲೈನ್ ಕಾಮಗಾರಿಯು ಜೂನ್ 22ಕ್ಕೆ ಸಿಂಧನೂರಿಗೆ ಪೂರ್ಣಗೊಳ್ಳಲಿದೆ‘ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಬುಧವಾರದಿಂದ ಕಾರಟಗಿಯಿಂದ ರೈಲು ಸಂಚಾರ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸಂಸದ ಸಂಗಣ್ಣ ಕರಡಿ ಅವರು, ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲು ಮಾರ್ಗವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಸಿಂಧನೂರಿನಲ್ಲಿ ನೂತನ ರೈಲ್ವೆ ನಿಲ್ದಾಣದ ಕಾಮಗಾರಿಗೆ ನ. 10ರಂದು ಚಾಲನೆ ನೀಡಲಾಗುವುದು. ಶೀಘ್ರವೇ ರಾಯಚೂರವರೆಗೆ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುವುದು‘ ಎಂದರು.
‘2 ದಶಕದ ಹಿಂದೆ ಕೈಗೆತ್ತಿಕೊಂಡಿರುವ ಯೋಜನೆ ಕಾಮಗಾರಿಯು ಇದೀಗ ಕಾರಟಗಿಯವರೆಗೆ ಪೂರ್ಣವಾಗಿದೆ. ₹ 2,565.95 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಇಲ್ಲಿಯವರೆಗೆ ₹ 1,960 ಕೋಟಿ ವೆಚ್ಚ ಮಾಡಲಾಗಿದೆ. ಕಾರಟಗಿ ಭಾಗದಿಂದ ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ಕಡಿಮೆ ಟಿಕೆಟ್ ದರದಲ್ಲಿ ಜನರು ಸಂಚರಿಸಬಹುದು. ನಮ್ಮ ಭಾಗದಲ್ಲಿ ಇದೊಂದು ಐತಿಹಾಸಿಕ ಯೋಜನೆಯಾಗಿದ್ದು, ಜನರ ಕನಸು ನನಸಾಗಿದೆ‘ ಎಂದರು.
‘ಕಾರಟಗಿ ರೈಲ್ವೆ ನಿಲ್ದಾಣಕ್ಕೆ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಲ್ದಾಣಕ್ಕೆ ಬರಲು ಖಾಸಗಿ ಲೇಔಟ್‌ಗೆ ಸಂಬಂಧಿಸಿದ ರಸ್ತೆ ಇದ್ದು, ಮಾಲೀಕರು ರಸ್ತೆ ಬಿಟ್ಟುಕೊಡಲು ಒಪ್ಪಿದ್ದಾರೆ. ಶಾಸಕರು ಮತ್ತು ತಹಶೀಲ್ದಾರರು ಜನರ ಭಾವನೆಗಳಿಗೆ ಸ್ಪಂದಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಸ್ಥಳೀಯ ವಿಷಯವಾಗಿ ಶಾಸಕ ಬಸವರಾಜ ದಢೇಸುಗೂರ ಸ್ಪಂದಿಸಿದ್ದಾರೆ‘ ಎಂದು ಹೇಳಿದರು.
ಶಾಸಕ ಬಸವರಾಜ ದಢೇಸೂಗೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಾಲೋಣಿ, ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಸದಸ್ಯರಾದ ಸಿ. ದುರ್ಗಾರಾವ್, ನಾಗರಾಜ ಅರಳಿ, ಮುಖಂಡರಾದ ಶಿವಶರಣೇಗೌಡ ಯರಡೋಣ, ನಾಗರಾಜ ಬಿಲ್ಗಾರ್, ಚನ್ನಬಸವ ಸುಂಕದ, ರಮೇಶ ನಾಡಿಗೇರ, ಶರಣಪ್ಪ ಗದ್ದಿ, ಕಾಶಿವಿಶ್ವನಾಥ, ಉದ್ಯಮಿಗಳಾದ ಎನ್. ಶ್ರೀನಿವಾಸ, ಗುರುರಾಜ ಶ್ರೇಷ್ಠಿ, ವಾಸುದೇವ ಶ್ರೇಷ್ಠಿ, ಶರಣಪ್ಪ ಶ್ರೇಷ್ಠಿ, ಬಸವರಾಜ ಪಗಡದಿನ್ನಿ, ತಹಶೀಲ್ದಾರ ರವಿ.ಎಸ್.ಅಂಗಡಿ, ಸುರೇಶ್, ಉಮೇಶ್, ಪುರಸಭೆಯ ಅಕ್ಷಾತ ಕಮ್ಮಾರ್, ಮಲ್ಲಮ್ಮ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.