ವ್ಯವಸಾಯದ ಬಗ್ಗೆ ಜ್ಞಾನವಿಲ್ಲದವರು ಕೈಗೊಂಡ ನಿರ್ಣಯ ಇದಾಗಿದೆ. ಜನಪ್ರತಿನಿಧಿಗಳು ಕೈಗೊಂಡ ಏಕಪಕ್ಷೀಯ ನಿರ್ಧಾರವಿದು. ನೀರಿನ ಅಭಾವವಾದರೂ ಪರ್ಯಾಯ ಬೆಳೆಗಳ ಬಗ್ಗೆಯಾದರೂ ರೈತರಿಗೆ ಹೇಳಬೇಕಿತ್ತು. ಕೃಷಿ ವಿಜ್ಞಾನಿಗಳು ವಿಶ್ವವಿದ್ಯಾಲಯದವರು ಈ ಸಮಯದಲ್ಲಿ ಸುಮ್ಮನಿರುವುದು ಸರಿಯಲ್ಲ
-ಚಾಮರಸ ಮಾಲಿಪಾಟೀಲ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ರಾಯಚೂರು ಜಿಲ್ಲೆ
ರೈತ ಹಾಗೂ ಸರ್ಕಾರದ ನಡುವೆ ಹೊಂದಾಣಿಕೆಯಿಲ್ಲದಂತಾಗಿದೆ. ರೈತನ ಮಾತು ಸರ್ಕಾರ ಕೇಳುವುದಿಲ್ಲ. ಸರ್ಕಾರದ ಇಂಗಿತ ನಮಗೆ ಒಪ್ಪಿಗೆಯಾಗುವುದಿಲ್ಲ. ಹೀಗಾಗಿ ಕೃಷಿಕರು ಪ್ರಕೃತಿ ವಿಕೋಪ ಹಾಗೂ ನೀರಿನ ಸಮಸ್ಯೆಯಿಂದಾಗಿ ಪ್ರತಿಸಲವೂ ಸಂಕಷ್ಟ ಎದುರಿಸುವಂತಾಗಿದೆ
-ನಾರಾಯಣ ಈಡಿಗೇರ, ಕೃಷಿಕ ಕಾರಟಗಿ
ನೀರು ಬಿಡುವ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರ ರೈತರ ಪಾಲಿಗೆ ಮರಣ ಶಾಸನದಂತಿದೆ. ಮಳೆ ಬಂದು ಕಳೆದ ಬಾರಿ ಬೆಳೆ ಹಾನಿಯಾಗಿದೆ. ಮೂರು ತಿಂಗಳಲ್ಲಿ ಬೆಳೆ ಬರುತ್ತಿತ್ತು. ನೀರು ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು. ಸರ್ಕಾರ ರೈತರ ಪರವಾದ ನಿರ್ಣಯ ಕೈಗೊಳ್ಳಬೇಕಿತ್ತು
-ಶರಣಪ್ಪ ನಾಗೋಜಿ ಸೋಮನಾಳ, ಕಾರಟಗಿ ತಾಲ್ಲೂಕು
ನೀರಾವರಿಗೆ ಸಂಬಂಧಿಸಿದಂತೆ ಮಂಡ್ಯ ಮೈಸೂರು ಭಾಗದಲ್ಲಿ ಸಣ್ಣ ಸಮಸ್ಯೆಯಾದರೂ ಜನಪ್ರತಿನಿಧಿಗಳು ತ್ವರಿತವಾಗಿ ದೊಡ್ಡಮಟ್ಟದಲ್ಲಿ ಸ್ಪಂದಿಸುತ್ತಾರೆ. ಆದರೆ ನಮ್ಮ ಭಾಗದ ಹೋರಾಟಕ್ಕೆ ಸ್ಪಂದನೆಯೇ ಸಿಗುವುದಿಲ್ಲ. ಈ ಪ್ರಾದೇಶಿಕ ತಾರತಮ್ಯ ಹೋಗಬೇಕು. ನೀರಿನ ಕೊರತೆಯಿಂದ ಭತ್ತ ಹಾಗೂ ಅಕ್ಕಿಯ ಬೆಲೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ
-ಸಾವಿತ್ರಿ ಪುರುಷೋತ್ತಮ, ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ರಾಯಚೂರು