ಶಿವಮೊಗ್ಗ: ಮಾಜಿ ಸಿಎಂಗಳ ಪುತ್ರರ ಮತ್ತೊಂದು ಸುತ್ತಿನ ಹಣಾಹಣಿ

ಶನಿವಾರ, ಏಪ್ರಿಲ್ 20, 2019
27 °C
ಸ್ಥಳೀಯ ಸಮಸ್ಯೆ, ದೇಶದ ಭದ್ರತೆಯೇ ಅಸ್ತ್ರ

ಶಿವಮೊಗ್ಗ: ಮಾಜಿ ಸಿಎಂಗಳ ಪುತ್ರರ ಮತ್ತೊಂದು ಸುತ್ತಿನ ಹಣಾಹಣಿ

Published:
Updated:

ಶಿವಮೊಗ್ಗ: ಐದು ತಿಂಗಳ ಹಿಂದಷ್ಟೆ ಉಪ ಚುನಾವಣೆ ಮೂಲಕ ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಾರ್ವತ್ರಿಕ ಚುನಾವಣೆಯಲ್ಲೂ ಮತ್ತೆ ಸದ್ದು ಮಾಡುತ್ತಿದೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ಎರಡನೇ ಬಾರಿ ನಡೆಯುತ್ತಿರುವ ಸೆಣಸಾಟ ಕುತೂಹಲ ಕೆರಳಿಸಿದೆ. ಎಸ್.ಬಂಗಾರಪ್ಪ ಪುತ್ರ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಎಸ್‌. ಮಧು ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಪುತ್ರ ಬಿಜೆಪಿಯ ಬಿ.ವೈ. ರಾಘವೇಂದ್ರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಮೈತ್ರಿ ಪಕ್ಷಗಳು ಮಲೆನಾಡಿನ ಸ್ಥಳೀಯ ಸಮಸ್ಯೆಗಳನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಮತದಾರರನ್ನು ಸೆಳೆಯುತ್ತಿವೆ. ಸಮ್ಮಿಶ್ರ ಸರ್ಕಾರದ ಸಾಲ ಮನ್ನಾ, ಸಿದ್ದರಾಮಯ್ಯ, ಕುಮಾರಸ್ವಾಮಿ ಜಾರಿಗೆ ತಂದ ಯೋಜನೆಗಳ ನೆನಪು ಮಾಡುತ್ತಿವೆ. ಬಿಜೆಪಿ ಮೋದಿ ಅಲೆಯ ಜತೆಗೆ, ದೇಶದ ಭದ್ರತೆ, ಹಿಂದುತ್ವ, 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಆಧಾರದಲ್ಲಿ ಪ್ರಚಾರ ನಡೆಸುತ್ತಿದೆ.

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಈಚೆಗೆ ನೀಡಿದ ತೀರ್ಪು, ಕಸ್ತೂರಿ ರಂಗನ್‌ ವರದಿಯ ಗೊಂದಲಗಳು ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಗಮನ ಸೆಳೆದಿವೆ. ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಪ್ರಕರಣವೂ ಪ್ರತಿಧ್ವನಿಸುತ್ತಿದೆ. ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಾ ವೈಫಲ್ಯದ ಹೊಣೆ ಪರಸ್ಪರ ವರ್ಗಾಯಿಸುತ್ತಿವೆ.

‘10 ವರ್ಷ ಅಪ್ಪ, ಮಕ್ಕಳು ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಪ್ರತಿ ಚುನಾವಣೆ ಬಂದಾಗಲೂ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ. ಅಧಿಕಾರಕ್ಕೆ ಬಂದ ತಕ್ಷಣ ಬಗೆಹರಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ನಂತರ ಆ ವಿಷಯಗಳ ಕುರಿತು ಚಕಾರ ಎತ್ತುವುದಿಲ್ಲ. ಭದ್ರಾವತಿಯ ಜೀವನಾಧಾರ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಎಂಪಿಎಂ ವಿಷಯಗಳಲ್ಲಿ ಹೀಗೆ ಭರವಸೆ ನೀಡಿದ್ದರು. ಕೊನೆಗೆ ಎರಡೂ ಬಾಗಿಲು ಮುಚ್ಚಿವೆ. ಈಗ ಮತ್ತೆ ಪುನಶ್ಚೇತನದ ನಾಟಕ ಮಾಡುತ್ತಿದ್ದಾರೆ. ನೆಪಮಾತ್ರಕ್ಕೆ ಕೇಂದ್ರ ಸಚಿವರನ್ನು ಕರೆಸಿ ಹುಸಿ ಭರವಸೆ ಕೊಡಿಸಿದ್ದರು’ ಎಂದು ಆರೋಪಿಸುತ್ತಾರೆ ಜೆಡಿಎಸ್, ಕಾಂಗ್ರೆಸ್ ಬೆಂಬಲಿಗರು.

‘ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ ನೀರಾವರಿ ವಿಷಯಗಳಲ್ಲೂ ಇದೇ ರೀತಿ ನಡೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಏತ ನೀರಾವರಿಗೆ ಹಣ ಬಿಡುಗಡೆ ಮಾಡಿದರೆ ನಾವು ಅರ್ಜಿ ಕೊಟ್ಟಿದ್ದಕ್ಕೆ ಆಯಿತು ಎನ್ನುತ್ತಾರೆ. ಯಡಿಯೂರಪ್ಪ ಅವರೇ ಮೂರು ವರ್ಷ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರೂ ಹಣ ಏಕೆ ಬಿಡುಗಡೆ ಮಾಡಲಿಲ್ಲ’ ಎಂದು ಪ್ರಶ್ನಿಸುತ್ತಾರೆ.

ಅರಣ್ಯವಾಸಿಗಳಿಗೆ ನೆಮ್ಮದಿ ದೊರಕಬೇಕಾದರೆ ಸಂಸತ್‌ನಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕು. ಸ್ಥಳೀಯ ಸಮಸ್ಯೆಗಳಿಗೆ ದೆಹಲಿ ಮಟ್ಟದಲ್ಲಿ ಧ್ವನಿ ಸಿಗಬೇಕು. ರಾಜ್ಯ ಸರ್ಕಾರದ ಸಹಕಾರವೂ ಇರಬೇಕು ಎಂದರೆ ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕು ಎನ್ನುವುದು ಬೆಂಬಲಿಗರ ವಾದ.

ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಸಂಸದರು ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾರೆ. ಹೆದ್ದಾರಿಗಳ ನಿರ್ಮಾಣ, ಹೊಸ ರೈಲು ಮಾರ್ಗಗಳು, ತುಮರಿ ಸೇತುವೆ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಅರಣ್ಯವಾಸಿಗಳ ರಕ್ಷಣೆಗೆ ಬಿಜೆಪಿ ಬದ್ಧವಾಗಿದೆ. ಇಂತಹ ವಿಷಯಗಳ ಜತೆಗೆ, ರಾಷ್ಟ್ರದ ಭದ್ರತೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ದೇಶದ ಮಟ್ಟಿಗೆ ಆಯ್ಕೆ ವಿಷಯ ಬಂದಾಗ ಜನರು ವಿಭಿನ್ನ ನಿಲುವು ತಳೆಯುತ್ತಾರೆ. ಪ್ರಾದೇಶಿಕ ಪಕ್ಷಗಳಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲ. ಮೋದಿ ಅವರ ದೂರದೃಷ್ಟಿ ಜನರಿಗೆ ಇಷ್ಟವಾಗುತ್ತದೆ. ಹಾಗಾಗಿ, ಈ ಚುನಾವಣೆಯಲ್ಲೂ ತಮ್ಮ ಪಕ್ಷ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಿಜೆಪಿ ಬೆಂಬಲಿಗರು.

ಬಿಜೆಪಿಗೆ ಶಾಸಕರ ಬಲ, ಜೆಡಿಎಸ್‌ಗೆ ಮೈತ್ರಿ ಬೆಂಬಲ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಇದ್ದಾರೆ. ವಿಧಾನಸಭಾ ಚುನಾವಣೆ ಅಂಕಿ–ಅಂಶಗಳ ಆಧಾರದಲ್ಲಿ ಬಿಜೆಪಿ ಗೆಲುವಿನ ಲೆಕ್ಕಾಚಾರ ಮುಂದಿಡುತ್ತದೆ. ಆದರೆ, ಮೈತ್ರಿ ಪಕ್ಷಗಳು ಅದನ್ನು ಒಪ್ಪಿತ್ತಿಲ್ಲ.

ಹಿಂದೆ ಬಂಗಾರಪ್ಪ ಅವರು 2005ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದಾಗ ಒಬ್ಬರೂ ಆ ಪಕ್ಷದ ಶಾಸಕರು ಇರಲಿಲ್ಲ. ಅವರು ಗೆಲ್ಲಲಿಲ್ಲವೇ? ಯಡಿಯೂರಪ್ಪ ಅವರು 2014ರಲ್ಲಿ ದಾಖಲೆ ಅಂತರದಿಂದ ಗೆದ್ದಾಗ ಅವರ ಹೊರತು ಒಬ್ಬರೂ ವಿಧಾನಸಭೆಗೆ ಆಯ್ಕೆಯಾಗಿರಲಿಲ್ಲ ಎಂಬ ವಾದ ಮುಂದಿಡುತ್ತಾರೆ.

ಜಾತಿವಾರು ಲೆಕ್ಕಾಚಾರದ ಲಾಭ: ಕ್ಷೇತ್ರದಲ್ಲಿ ಈಡಿಗ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಮುಸ್ಲಿಂ, ಮರಾಠರು, ಪರಿಶಿಷ್ಟ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಲಿಂಗಾಯತರು, ಬ್ರಾಹ್ಮಣರು ಬಿಜೆಪಿ ಬೆಂಬಲಿಸುವ ಸಾಧ್ಯತೆ ಕಂಡುಬಂದರೆ, ಉಳಿದ ಸಮುದಾಯಗಳು ಜೆಡಿಎಸ್‌ ಪರ ನಿಲ್ಲುವ ಸಾಧ್ಯತೆ ಕಾಣಿಸುತ್ತಿದೆ. ಅಲ್ಪ ಸಂಖ್ಯಾತರ ಮತಗಳು ಇಡಿಯಾಗಿ ದೊರಕುವ ನಿರೀಕ್ಷೆಯಲ್ಲಿ ಮೈತ್ರಿ ಪಡೆ ಇದೆ. ಮೈತ್ರಿ ಅಭ್ಯರ್ಥಿಗೆ ಶ್ರೀರಕ್ಷೆಯಾಗಿರುವ ಬಂಗಾರಪ್ಪ ನಾಮಬಲದ ಲಾಭ ಪಡೆಯಲು ಬಂಗಾರಪ್ಪ ಅವರ ಹಿರಿಯ ಪುತ್ರ, ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಆ ಸಮುದಾಯದ ಶಾಸಕರ ಮೂಲಕ ಬಿಜೆಪಿ ಕಸರತ್ತು ನಡೆಸಿದೆ.

ಒಂದು ದಶಕದಿಂದ ಕ್ಷೇತ್ರದಲ್ಲಿ ಬಿಜೆಪಿ ಬಲ ವೃದ್ಧಿಸಿದೆ. 2009ನಂತರ ನಡೆದ ಮೂರು ಚುನಾವಣೆಗಳಲ್ಲಿ ಸತತ ಗೆಲುವು ಪಡೆದಿದೆ. ಬಿಜೆಪಿ ಮಣಿಸಲು ಮೈತ್ರಿ ಸಾಕಷ್ಟು ಕಸರತ್ತು ನಡೆಸಿದೆ. ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸೋಲುಕಂಡರೂ ಸಮಬಲದ ಪೈಪೋಟಿ ನೀಡಿತ್ತು. ಆ ಸೋಲಿನ ಎಲ್ಲ ನ್ಯೂನತೆ ತಿದ್ದಿಕೊಂಡು ಮುನ್ನಡೆದಿದೆ. ಬಿಜೆಪಿಯೂ ಕ್ಷೇತ್ರದ ಮೇಲಿನ ಹಿಡಿತ ಮತ್ತಷ್ಟು ಹಿಡಿತ ಬಿಗಿಗೊಳಿಸಿದೆ.

**

ಮಲೆನಾಡಿನ ಜನ ಸ್ಥಳೀಯ ಸಮಸ್ಯೆಗಳಲ್ಲಿ ಸಿಲುಕಿದ್ದು, ಅರಣ್ಯ ವಾಸಿಗಳು ಅತಂತ್ರರಾಗಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಮೈತ್ರಿಯತ್ತ ಚಿತ್ತ ಹರಿಸಿದ್ದಾರೆ.
-ಎಸ್‌.ಮಧು ಬಂಗಾರಪ್ಪ, ಮೈತ್ರಿ ಅಭ್ಯರ್ಥಿ

**
ಉಪ ಚುನಾವಣೆಗೂ, ಸಾರ್ವತ್ರಿಕ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಶಿವಮೊಗ್ಗ ಜನರು ಈ ಬಾರಿ ಬಿಜೆಪಿ ಬೆಂಬಲಿಸುತ್ತಾರೆ.
-ಬಿ.ವೈ.ರಾಘವೇಂದ್ರ, ಬಿಜೆಪಿ ಅಭ್ಯರ್ಥಿ

**
ಶಿವಮೊಗ್ಗ ಮಲೆನಾಡು ಎಂದು ಖ್ಯಾತಿ ಪಡೆದರೂ, ಮಳೆಯಾಶ್ರಿತ ಕೃಷಿಯೇ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಯಾರೇ ಗೆಲ್ಲಲಿ, ಶಾಶ್ವತ ನೀರಾವರಿ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಲಿ.
-ಶಶಿಕಲಾ, ವಿದ್ಯಾರ್ಥಿನಿ, ಡಿವಿಎಸ್‌ ಕಾಲೇಜು

**
ಮುಳುಗಡೆ ಸಂತ್ರಸ್ತರು ಕಾಡಿನಲ್ಲಿದ್ದು, ಅರಣ್ಯ ಹಕ್ಕು ಕಾಯ್ದೆಯಡಿ ಭದ್ರತೆ ಕೊಡಿಸಲು ಸಂಸದರು ಧ್ವನಿ ಎತ್ತಬೇಕು. ಅಂತಹ ಕೆಲಸ ಇದುವರೆಗೂ ಆಗಿಲ್ಲ. ಅದೇ ನೋವಿನ ಸಂಗತಿ.
-ಕೆ.ಎ. ಹರೀಶ್ ಶೆಟ್ಟಿ, ಇರೇಗೋಡು, ತೀರ್ಥಹಳ್ಳಿ.ತಾ.

–––

ಪ್ರಜಾವಾಣಿ ವಿಶೇಷ ಸಂದರ್ಶನಗಳು...
ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ
ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ
ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ
ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್‌
ಬಡವರದ್ದಲ್ಲ, ಕಾಂಗ್ರೆಸ್‌ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ
ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !