ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳನ್ನೇ ಬುಕ್‌ ಮಾಡಿದ ಮಾಲೀಕರು

ಗೋಕುಲ್‌ದಾಸ್‌ ಗಾರ್ಮೆಂಟ್ಸ್‌ ಕಾರ್ಖಾನೆ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಆರೋಪ
Last Updated 17 ಜೂನ್ 2020, 8:32 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಪಟ್ಟಣದ ಗೋಕುಲ್‌ ದಾಸ್‌ ಗಾರ್ಮೆಂಟ್ಸ್‌ ಕಾರ್ಖಾನೆ ಮಾಲೀಕರು ಕ್ಷೇತ್ರದ ಪ್ರಮುಖ ರಾಜಕಾರಣಿಗಳಿಗೆ ಹಣ ಕೊಟ್ಟು ಬುಕ್‌ ಮಾಡಿಕೊಂಡಿದ್ದು, ಕಾರ್ಮಿಕರ ಪರ ದನಿ ಎತ್ತದಂತೆ ಮಾಡಿದ್ದಾರೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ ಮಾಡಿದರು.

ಪಟ್ಟಣದಲ್ಲಿ ಗೋಕುಲ್‌ದಾಸ್‌ ಗಾರ್ಮೆಂಟ್ಸ್‌ ಕಾರ್ಖಾನೆ ಕಾರ್ಮಿಕರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಮಾತನಾಡಿದರು.

‌‘ರಾಜಕಾರಣಿಗಳಿಗೆ ಆಮಿಷ ಒಡ್ಡಿರುವ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಎಲ್ಲ ವಿದ್ಯಮಾನಗಳನ್ನು ಗಮನಿ ಸುತ್ತಿದ್ದೇನೆ. ಇನ್ನು ಎರಡು ದಿನಗಳಲ್ಲಿ ಎಲ್ಲವನ್ನೂ ಬಯಲು ಮಾಡುತ್ತೇನೆ’ ಎಂದರು.

‘ಸ್ಥಳೀಯ ರಾಜಕಾರಣಿಗಳ ಜತೆ ಒಳಒಪ್ಪಂದ ಮಾಡಿಕೊಂಡು ಗಾರ್ಮೆಂಟ್ಸ್‌ ಕಾರ್ಖಾನೆ ಮುಚ್ಚಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಅದಕ್ಕೆ ಆಸ್ಪದ ನೀಡುವುದಿಲ್ಲ. ಸರ್ಕಾರ ಏನು ಮಾಡುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ನೀತಿಗೆಟ್ಟ ವ್ಯವಸ್ಥೆಯ ವಿರುದ್ಧ ಜನರ ಜತೆಗೂಡಿ ಹೋರಾಟಕ್ಕೆ ಇಳಿಯಲಿದ್ದೇನೆ. ಕಾರ್ಮಿಕರು ಎದೆಗುಂದದೆ ಹೋರಾಟ ಮುಂದುವರೆಸಬೇಕು’ ಎಂದರು.

ಗಾರ್ಮೆಂಟ್ಸ್‌ ಅಂಡ್‌ ಟೆಕ್ಸ್‌ಟೈಲ್ಸ್‌ ಯೂನಿಯನ್‌ ವರ್ಕರ್ಸ್‌ ಸಂಘಟನಾ ಕಾರ್ಯದರ್ಶಿ ಎಲ್‌.ಎಸ್‌. ನವೀನ್‌ ಕುಮಾರ್‌ ಮಾತನಾಡಿ, ‘ಆಡಳಿತ ಮಂಡಳಿ ಪ್ರತಿನಿಧಿಗಳು ರಾಜೀನಾಮೆ ಕೊಡುವಂತೆ ಕಾರ್ಮಿಕರ ಮೇಲೆ ಒತ್ತಡ ಹೇರುತ್ತಿದ್ದಾರೆ. 9 ದಿನಗಳಿಂದ ಧರಣಿ ನಡೆಸುತ್ತಿದ್ದ ಮೂವರು ರಾಜೀನಾಮೆ ನೀಡಿದ್ದಾರೆ. ಉಳಿದ ಕಾರ್ಮಿಕರು ಇಂತಹ ತೀರ್ಮಾನ ಕೈಗೊಳ್ಳಬಾರದು. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸಬಾರದು’ ಎಂದರು.

ಶಾಸಕರ ಆಕ್ರೋಶ
ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಧರಣಿ ಸ್ಥಳಕ್ಕೆ ಕರೆಸಿದ ರವೀಂದ್ರ ಶ್ರೀಕಂಠಯ್ಯ, ಅವರ ವಿರುದ್ಧ ಕಿಡಿಕಾರಿದರು. ‘ಕಾರ್ಮಿಕರನ್ನು ಹೆದರಿಸುವುದೇಕೆ? ನೀವು ಗೂಂಡಾಗಳಾ...’ ಎಂದು ಗದರಿದರು.

‘ಬೇರೆ ರಾಜಕಾರಣಿಗಳಿಗೆ ದುಡ್ಡಿನ ಆಮಿಷ ಒಡ್ಡುತ್ತೀರಿ. ನನ್ನ ಬಳಿ ನಿಮ್ಮ ಆಟ ನಡೆಯುವುದಿಲ್ಲ. ನೀವು ಏನೇನು ಮಾಡಿದ್ದೀರಿ ಎಲ್ಲವೂ ರೆಕಾರ್ಡ್‌ ಆಗಿದೆ. ಕಾರ್ಮಿಕರಿಗೆ ರಾಜೀನಾಮೆ ಕೊಡಿ ಎಂದು ಮೇಲಿಂದ ಮೇಲೆ ಒತ್ತಡ ಹೇರುವುದು ಸರಿಯಲ್ಲ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT