ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭ ತೆರವು: ಆತಂಕ ಸೃಷ್ಟಿಸಿದ ಆದೇಶ

ಗೊಂದಲ ಮೂಡಿಸಿದ ತಾ.ಪಂ ಇಒ ಸೂಚನೆ, ಸ್ಪಷ್ಟನೆ ನೀಡಿದ ಜಿ.ಪಂ ಸಿಇಒ
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ಮುಂದುವರಿದಿರುವಾಗಲೇ, 108 ಅಡಿ ಎತ್ತರದ ಧ್ವಜಸ್ತಂಭವನ್ನೂ ತೆರವುಗೊಳಿಸಲು ಜಿಲ್ಲಾಡಳಿತದ ಆದೇಶಿಸಿದೆ ಎನ್ನಲಾದ ಸುದ್ದಿ ಶುಕ್ರವಾರ ಆತಂಕ ಸೃಷ್ಟಿಸಿತ್ತು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಧ್ವಜಸ್ತಂಭ ತೆರವುಗೊಳಿಸಿ ಜಾಗವನ್ನು ಸುಪರ್ದಿಗೆ ಪಡೆಯಬೇಕು, ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಜ.25ರಂದು ಹೊರಡಿಸಿದ್ದ ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ನಂತರ ಜ.29ರಂದು ಹೊರಡಿಸಲಾಗಿರುವ ‘ರಂಗಮಂದಿರದ ಮುಂಭಾಗದಲ್ಲಿರುವ ಧ್ವಜಸ್ತಂಭವನ್ನು ಸುಪರ್ದಿಗೆ ಪಡೆದು ಕ್ರಮ ವಹಿಸಬೇಕು’ ಎಂಬ ಸೂಚನೆ ನೀಡಿರುವ ತಿದ್ದುಪಡಿ ಆದೇಶ ಪ್ರತಿಯೂ ಹರಿದಾಡಿತ್ತು. ‘ತೆರವು’ ಪದ ತೆಗೆದು ಮಾಡಲಾದ ತಿದ್ದುಪಡಿ ಆದೇಶದಲ್ಲೂ ಸ್ಪಷ್ಟತೆ ಇಲ್ಲದ ಕಾರಣಕ್ಕೆ ಸಾರ್ವಜನಿಕರಲ್ಲಿ ಗೊಂದಲ ಮೂಡಿತ್ತು.

‘ಅಧಿಕಾರಿಗಳು ಶುಕ್ರವಾರವೇ ಧ್ವಜಸ್ತಂಭ ತೆರವುಗೊಳಿಸುತ್ತಾರೆ’ ಎಂಬ ಮಾಹಿತಿ ಹರಿದಾಡಿದ ಪರಿಣಾಮ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಡಳಿತದ ಕ್ರಮವನ್ನು ಸಾರ್ವಜನಿಕರು ಖಂಡಿಸಿದರು, ಶಾಸಕ ಗಣಿಗ ರವಿಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ‘ಧ್ವಜಸ್ತಂಭ ತೆರವುಗೊಳಿಸುವ ಯಾವುದೇ ಆದೇಶ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸತ್ಯವಲ್ಲ’ ಸ್ಪಷ್ಟನೆ ನೀಡಿದರು.

ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಆದರೂ ಗ್ರಾಮದಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ, ನಿಷೇಧಾಜ್ಞೆ ಮುಂದುವರಿದಿದೆ.

ಡಿಸಿ, ಎಸ್ಪಿ ಎಚ್ಚರಿಕೆ: ‘ಧ್ವಜಸ್ತಂಭ ವಿಚಾರ ಅತ್ಯಂತ ಸೂಕ್ಷ್ಮವಾಗಿದ್ದು, ಜಾಲತಾಣಗಳ ಸಂದೇಶದ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ವಹಿಸಿದೆ. ಸಮಾಜದ ಸ್ವಾಸ್ಥ್ಯಕ್ಕೆ ಭಂಗ ತರುವ ವಿಡಿಯೊ, ಚಿತ್ರ, ಪ್ರಚೋದನಾಕಾರಿ ಹೇಳಿಕೆ ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಕಠಿಣ ಕ್ರಮ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದಲ್ಲಿ ಶಾಂತಿ ಸಭೆ

ಕೆರಗೋಡು ಗ್ರಾಮದಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಜಿ.ಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ನೇತೃತ್ವದಲ್ಲಿ ನಡೆದ ಶಾಂತಿ ಸಭೆಗೆ 50ಕ್ಕೂಹೆಚ್ಚು ಗ್ರಾಮಸ್ಥರು ಬಂದಿದ್ದರು. ‘2–3 ದಿನದೊಳಗೆ ಮಾತುಕತೆ ಮೂಲಕ ಒಮ್ಮತಕ್ಕೆ ಬರುವಂತೆ ತಿಳಿಸಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಧ್ವಜ ಆಂದೋಲನ ಮುಂದೂಡಿಕೆ: ‘ಕೆರಗೋಡು ಗ್ರಾಮದ ಮನೆಗಳಿಗೆ ಹನುಮ ಧ್ವಜ ಅಳವಡಿಸುವ ಆಂದೋಲನವನ್ನು ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ಶನಿವಾರ ನಡೆಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್‌ ಕುಮಾರ್‌ ತಿಳಿಸಿದರು.

ರಾಷ್ಟ್ರಧ್ವಜ ಅಸ್ಮಿತೆಯ ಪ್ರತೀಕ: ಸಿ.ಎಂ

ವಿಜಯಪುರ: ‘ಮಂಡ್ಯ ಜಿಲ್ಲೆಯ ಕೆರಗೋಡು ಹನುಮಧ್ವಜ ಪ್ರಕರಣವನ್ನು ಸಿಬಿಐಗೆ ವಹಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳುತ್ತಾರೆ. ಆದರೆ, ಅವರಿಗೆ ಆ ಪ್ರಕರಣದ ವಾಸ್ತವಾಂಶವೇ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕೇವಲ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸುವುದಾಗಿ ಕೆರಗೋಡು ಗ್ರಾಮ ಪಂಚಾಯಿತಿಯಲ್ಲಿ ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಲು ಮುಂದಾಗಿದ್ದರು. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಯಾವ ಗೌರವವೂ ಇಲ್ಲ. ರಾಷ್ಟ್ರಧ್ವಜ, ಭಾರತ ದೇಶದ 140 ಕೋಟಿ ಜನರ ಅಸ್ಮಿತೆಯ ಪ್ರತೀಕ. ಇಂತಹ ರಾಷ್ಟ್ರಧ್ವಜವನ್ನು ಹಾಕಲು ಒಪ್ಪದಿರುವವರು ದೇಶಭಕ್ತರೆಂದು ಹೇಳಿಕೊಳ್ಳು ತ್ತಾರೆ’ ಎಂದು ಅವರು ಮುದ್ದೇಬಿಹಾಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

9ರ ವರೆಗೆ ಹನುಮಧ್ವಜ ಅಭಿಯಾನ

ಮಂಗಳೂರು: ಮಂಡ್ಯ ಜಿಲ್ಲೆ ಕರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆಗೆದುಹಾಕಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಹಿಂದೂಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ರಾಜ್ಯದಾದ್ಯಂತ ಇದೇ 9ರ ವರೆಗೆ ಹನುಮಧ್ವಜ ಅಭಿಯಾನ ನಡೆಸುತ್ತಿರುವುದಾಗಿ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್‌ ಕೆ.ಆರ್‌. ತಿಳಿಸಿದರು.

ಶುಕ್ರವಾರ ಇಲ್ಲಿಯ ವಿಶ್ವ ಹಿಂದೂ ಪರಿಷತ್‌ ಕಚೇರಿಯಲ್ಲಿ
ಹನುಮಧ್ವಜಾರೋಹಣ ಮಾಡಿ, ಆಂದೋಲನಕ್ಕೆ ಅವರು ಚಾಲನೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿ, ರಾಜ್ಯದ ಎಲ್ಲ ಹಿಂದೂಗಳ ಮನೆ ಮನೆಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜ ಹಾರಿಸಲಾ ಗುವುದು. ಕರೆಗೋಡಿನಲ್ಲಿ ಹನುಮಧ್ವಜ ಹಾರಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಇದೇ 9ರಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಫೆ.10ರಂದು ಎಲ್ಲೆಡೆ ಹನುಮಾನ್‌ ಚಾಲೀಸಾ ಪಠಣ ನಡೆಸಲಾಗುವುದು ಎಂದರು.

ಮಳಲಿ ಮಸೀದಿ ಜಾಗದಲ್ಲಿ ಮಂದಿರ– ವಿಶ್ವಾಸ: ‘ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿ ಇರುವ ಸ್ಥಳ ವಕ್ಫ್‌ ಮಂಡಳಿಯ ಆಸ್ತಿ ಅಲ್ಲ ಎಂದು ನ್ಯಾಯಾಲಯದ ತೀರ್ಪು ಬಂದಿದೆ. ಜ್ಞಾನವಾಪಿ, ಮಳಲಿ ಹಿಂದೆ ಮಂದಿರಗಳೇ ಆಗಿದ್ದವು. ಮುಸ್ಲಿಂ ಆಕ್ರಮಣದ ನಂತರ ಅವುಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸಲಾಯಿತು. ಮಳಲಿಯಲ್ಲಿ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ’ ಎಂದು ಸುನೀಲ್‌ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT