ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ತಮಿಳುನಾಡು ಕಾರ್ಖಾನೆಗಳಿಗೆ ಕಬ್ಬು ಸಾಗಣೆ

Last Updated 4 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಮೂರು ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿದ್ದು ಸಹಕಾರ ಹಾಗೂ ಸರ್ಕಾರಿ ವಲಯದ ಇನ್ನೆರಡು ಕಾರ್ಖಾನೆಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೂ ಜಿಲ್ಲಾ ವ್ಯಾಪ್ತಿಯ ಕಬ್ಬನ್ನು ತಮಿಳುನಾಡಿನ ಸಕ್ಕರೆ ಕಾರ್ಖಾನೆಗಳಿಗೆ ಸಾಗಣೆ ಮಾಡಲಾಗುತ್ತಿದೆ.

ಈ ಹಂಗಾಮಿನಲ್ಲಿ 50 ಲಕ್ಷ ಟನ್‌ ಕಬ್ಬು ಜಿಲ್ಲೆಯಲ್ಲಿದೆ. ಈಗಾಗಲೇ 30 ಲಕ್ಷ ಟನ್‌ ಕಟಾವಿಗೆ ಬಂದಿದ್ದು ಕೆ.ಆರ್‌.ಪೇಟೆಯ ಕೋರಮಂಡಲ್‌, ಮದ್ದೂರು ತಾಲ್ಲೂಕಿನ ಎನ್‌ಎಸ್‌ಎಲ್‌, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ಆರಂಭಿಸಿವೆ. ಪಾಂಡವಪುರದ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯನ್ನು ನಿರಾಣಿ ಶುಗರ್ಸ್‌ಗೆ ಗುತ್ತಿಗೆ ನೀಡಲಾಗಿದ್ದು ಆ.11ರಂದು ಕಾರ್ಖಾನೆ ಆರಂಭಗೊಳ್ಳಲಿದೆ.

ಮಂಡ್ಯದ ಮೈಷುಗರ್‌ ಕಾರ್ಖಾನೆಯನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಅಂಡ್‌ ಎಂ) ಮಾದರಿಯಲ್ಲಿ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಆದರೂ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯ ಕಬ್ಬು ತಮಿಳುನಾಡಿನ ಸತ್ಯಮಂಗಲ ಬಳಿ ಇರುವ ಶಕ್ತಿ ಷುಗರ್ಸ್‌, ಪ್ಯಾರಿ ಷುಗರ್‌ ಕಂಪನಿಗಳಿಗೆ ರವಾನೆಯಾಗುತ್ತಿದೆ.

ಕಳೆದ ಹಂಗಾಮಿನಲ್ಲಿ ಜಿಲ್ಲೆಯ ಪ್ರಮುಖ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದ ಕಾರಣ ಕಬ್ಬು ಕೊಂಡೊಯ್ಯಲು ಜಿಲ್ಲಾಡಳಿತವೇ ಹೊರ ಜಿಲ್ಲೆ, ಹೊರರಾಜ್ಯಗಳ ಕಾರ್ಖಾನೆಗಳಿಗೆ ಮುಕ್ತ ಅವಕಾಶ ಕಲ್ಪಿಸಿತ್ತು. ಅದು ಈ ವರ್ಷವೂ ಮುಂದುವರಿದಿದ್ದು ರಸ್ತೆಗಳಲ್ಲಿ ತಮಿಳುನಾಡು ನೋಂದಣಿ ಲಾರಿಗಳು ಕಬ್ಬು ತುಂಬಿಕೊಂಡು ಹೊರಟಿರುವ ದೃಶ್ಯಗಳು ಸಾಮಾನ್ಯವಾಗಿವೆ.

‘ತಮಿಳುನಾಡಿನ ಸಕ್ಕರೆ ಕಾರ್ಖಾನೆಗಳು ಮಂಡ್ಯದಲ್ಲಿ ತಮ್ಮದೇ ಆದ ಏಜೆಂಟರನ್ನು ನೇಮಕ ಮಾಡಿಕೊಂಡಿವೆ. ಅವರ ಮೂಲಕ ಕಬ್ಬು ಗುತ್ತಿಗೆ ಪಡೆದು ಸಾಗಣೆ ಮಾಡಲಾಗುತ್ತಿದೆ’ ಎಂದು ರೈತ ಮುಖಂಡ ಶಂಭೂನಹಳ್ಳಿ ಸುರೇಶ್‌ ಹೇಳಿದರು.

ಗೋಲಿಬೆಲ್ಲಕ್ಕೂ ಮಂಡ್ಯ ಕಬ್ಬು: ತಮಿಳುನಾಡಿನಲ್ಲಿ ಗೋಲಿ ಬೆಲ್ಲ ತಯಾರಿಸಿ ಮಾರಾಟ ಮಾಡುವ ವ್ಯಾಪಾರಿಗಳು ಕೂಡ ಜಿಲ್ಲಾ ವ್ಯಾಪ್ತಿಯ ಕಬ್ಬು ಕೊಂಡೊಯ್ಯುತ್ತಿದ್ದಾರೆ. ಹಲವು ವ್ಯಾಪಾರಿಗಳು ಒಟ್ಟುಗೂಡಿ ಕಬ್ಬು ಸಾಗಿಸುತ್ತಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿ ಬೆಳೆಯುವ ವಿಸಿಎಫ್‌–571 ಕಬ್ಬಿನಿಂದ ಹೆಚ್ಚು ಬೆಲ್ಲದ ಇಳುವರಿ ಬರುತ್ತದೆ. ಇಲ್ಲಿಯ ಕಬ್ಬು ಸಕ್ಕರೆಗಿಂತ ಕಬ್ಬಿಗೆ ಬಹಳ ಚೆನ್ನಾಗಿದೆ. ಹೀಗಾಗಿ ಇಲ್ಲಿಂದ ಕಬ್ಬು ಕೊಂಡೊಯ್ಯುತ್ತೇವೆ’ ಎಂದು ಕೊಯಮತ್ತೂರಿನ ಬೆಲ್ಲದ ವ್ಯಾಪಾರಿ ಮುನಿರಾಜು ಹೇಳಿದರು.

ಆಳುಗಳ ಕೊರತೆ
ಕೊರೊನಾ ಸೋಂಕಿನ ಹಾವಳಿಯಿಂದಾಗಿ ಕಬ್ಬು ಕಡಿಯುವ ಆಳುಗಳ ಕೊರತೆ ಉಂಟಾಗಿದೆ. ರೈತರು ಕಡಿದು ಸಾಗಿಸುವ ಕಬ್ಬನ್ನು ಮಾತ್ರ ಜಿಲ್ಲಾ ವ್ಯಾಪ್ತಿಯ ಅರೆಯುತ್ತಿವೆ. ಆದರೆ ತಮಿಳುನಾಡು ಕಾರ್ಖಾನೆಗಳು ಆಳುಗಳನ್ನು ಕರೆತಂದು ಕಬ್ಬು ಕಡಿದು, ಸಾಗಿಸುತ್ತಿದ್ದಾರೆ. ರೈತರಿಗೆ ಪ್ರತಿ ಟನ್‌ ಕಬ್ಬಿಗೆ ₹ 1,500 ನೀಡು ಕಬ್ಬು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹ 1,70 ನ್ಯಾಯಯುತ ಬೆಲೆ (ಎಫ್‌ಆರ್‌ಪಿ) ನಿಗದಿ ಮಾಡಿದೆ.

‘ಸ್ಥಳೀಯ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲಾಗದ ರೈತರು ಅನಿವಾರ್ಯವಾಗಿ ತಮಿಳುನಾಡು ಕಾ ರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ರೈತ ನಾಗರಾಜೇಗೌಡ ಹೇಳಿದರು.

********
ಭತ್ತ ಬೆಳೆಯಲು ಅನುಕೂಲವಾಗುವಂತೆ ಶೀತ ಪ್ರದೇಶದಲ್ಲಿರುವ ಕಬ್ಬನ್ನು ಮಾತ್ರ ಸಾಗಿಸಲು ಅನ್ಯ ಜಿಲ್ಲೆ, ರಾಜ್ಯಗಳ ಕಾರ್ಖಾನೆಗಳಿಗೆ ಅವಕಾಶ ನೀಡಲಾಗಿದೆ.
–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT