ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| ಪ್ಲಾಸ್ಟಿಕ್‌ ಅಲಂಕಾರ: ಹೂ ಬೆಳೆಗಾರರಿಗೆ ಸಂಚಕಾರ

ಚೀನಾ, ಜಪಾನ್‌ನಿಂದ ಬರುತ್ತಿರುವ ಕೃತಕ ಹೂವು, ಕಸದಬುಟ್ಟಿ ಸೇರುತ್ತಿರುವ ನೈಸರ್ಗಿಕ ಹೂವು
Last Updated 25 ಜೂನ್ 2022, 19:31 IST
ಅಕ್ಷರ ಗಾತ್ರ

ಮಂಡ್ಯ: ಮದುವೆ, ಗೃಹಪ್ರವೇಶ ಮುಂತಾದ ಸಮಾರಂಭಗಳ ಅಲಂಕಾರಕ್ಕಾಗಿ ಜನರು ಪ್ಲಾಸ್ಟಿಕ್‌ ಹೂವು ಬಳಸುತ್ತಿರುವ ಕಾರಣ ರಾಜ್ಯ ದಾದ್ಯಂತ ಸಾವಿರಾರು ಬೆಳೆಗಾರರು ನಷ್ಟಕ್ಕೀಡಾಗಿದ್ದಾರೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಪಾಲಿ ಹೌಸ್‌ನಲ್ಲಿ ಬೆಳೆಯುತ್ತಿರುವ ಅಪಾರ ಪ್ರಮಾಣದ ನೈಸರ್ಗಿಕ ಹೂವು ಮಾರಾ ಟವಾಗದೇ ಕಸದ ಬುಟ್ಟಿ ಸೇರುತ್ತಿದೆ.

ಚೀನಾ, ಜಪಾನ್‌, ಥೈಲೆಂಡ್‌ನಿಂದ ಕೃತಕ ಅಲಂಕಾರಿಕ ಹೂಗಳು ಅಪಾರ ಪ್ರಮಾಣದಲ್ಲಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ರಾಸಾಯನಿಕ ಬಣ್ಣ ಬಳಸಿ ನೈಸರ್ಗಿಕ ಹೂವು ಕೂಡ ನಾಚುವಷ್ಟು ಸುಂದರವಾಗಿ ತಯಾರಿಸಲಾಗಿದೆ. ಬೆಲೆಯೂ ತೀರಾ ಕಡಿಮೆ ಇರುವ ಕಾರಣ ಸಾರ್ವಜನಿಕರು ಸಮಾರಂಭಗಳಿಗೆ ಪ್ಲಾಸ್ಟಿಕ್‌ ಹೂಗಳನ್ನೇ ಬಳಸುತ್ತಿದ್ದಾರೆ.

ರಾಷ್ಟ್ರೀಯ ತೋಟಗಾರಿ ಮಿಷನ್‌ (ಎನ್‌ಎಚ್‌ಎಂ) ಅಡಿ ಹೂ ಬೆಳೆಗಾರರು ಸಹಾಯಧನ ಪಡೆದು ಪಾಲಿಹೌಸ್‌ ನಿರ್ಮಿಸಿ ಅಲಂಕಾರಿಕ ಪುಷ್ಪಕೃಷಿ ಮಾಡುತ್ತಿದ್ದಾರೆ. ಪಾಲಿಹೌಸ್ ನಿರ್ಮಾಣ, ಹೂವಿನ ಸಸಿ, ಹನಿ, ತುಂತುರು ನೀರಾವರಿ ಉಪಕರಣಕ್ಕಾಗಿ ಪ್ರತಿ ಎಕರೆಗೆ ₹ 50 ಲಕ್ಷ ಬಂಡವಾಳ ಹಾಕಿದ್ದಾರೆ. ರಾಜ್ಯದಾದ್ಯಂತ 1,200 ಎಕರೆ ಪ್ರದೇಶದಲ್ಲಿ ಹೂ ಬೆಳೆಯಲಾಗುತ್ತಿದೆ. 10 ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಅತೀ ಹೆಚ್ಚು ರೈತರು ಅಲಂಕಾರಿಕ ಪುಷ್ಪ ಕೃಷಿ ಮಾಡುತ್ತಾರೆ. ಉತ್ತರ ಕರ್ನಾಟಕ ಬಾಗದಲ್ಲಿ ತರಕಾರಿ ಜೊತೆಗೆ ಅಲ್ಪಪ್ರಮಾಣದಲ್ಲಿ ಬೆಳೆಯುತ್ತಾರೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಬೃಹತ್‌ ಹೂವಿನ ಮಾರುಕಟ್ಟೆ, ಹೆಬ್ಬಾಳದಲ್ಲಿ ಹೂವು ಹರಾಜು ಕೇಂದ್ರವಿದ್ದು ಪ್ರತಿದಿನ ಬಹುಕೋಟಿ ವಹಿವಾಟು ನಡೆಯುತ್ತದೆ.

ಜರ್ಬೇರಾ, ರೋಸ್‌, ಕಾರ್ನೇಷನ್‌, ಆರ್ಕಿಡ್ಸ್‌, ವಿಲಿಯಂ ಬಲ್ಬ್ಸ್, ಪಿಲ್ಲರ್‌ ಗ್ರ್ಯಾಸ್‌ ಜಾತಿಯ ಅಲಂಕಾರಿಕ ಹೂವು ಬೆಳೆಯಲಾಗುತ್ತಿದೆ. ಬೆಂಗಳೂರು ಮಾರುಕಟ್ಟೆಯಿಂದ ದೆಹಲಿ, ಹರಿಯಾಣ, ಮಧ್ಯಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಮುಂತಾದ ರಾಜ್ಯಗಳಿಗೆ ಹೂವು ರವಾನೆಯಾಗುತ್ತಿದೆ.

ಆದರೆ, ಈಚೆಗೆ ನಗರ ಪ್ರದೇಶಗಳಲ್ಲಿ ಕೃತಕ ಹೂವಿನ ಅಂಗಡಿಗಳು ತಲೆ ಎತ್ತಿವೆ; ಮಾಲ್‌ಗಳಲ್ಲೂ ಪ್ಲಾಸ್ಟಿಕ್‌ ಹೂವಿನ ಪ್ರತ್ಯೇಕ ವಿಭಾಗವೇ
ಬಂದಿದೆ. ಕೇರಳಕ್ಕೆ ಅತೀ ಹೆಚ್ಚು ಕೃತಕ ಹೂವು ರಫ್ತಾಗುತ್ತಿದ್ದು ಅಲ್ಲಿಂದ ಬೆಂಗಳೂರಿಗೂ ಹರಿದು ಬಂದಿದೆ. ಹೀಗಾಗಿ ಬೆಂಗಳೂರು ಮಾರು
ಕಟ್ಟೆಯಲ್ಲಿ ಅಪಾರ ಪ್ರಮಾಣದ
ಹೂವು ಮಾರಾಟವಾಗದೇ ಉಳಿಯುತ್ತಿದೆ. ಈಗಾಗಲೇ ಅರ್ಧ ವಹಿವಾಟು ಸ್ಥಗಿತಗೊಂಡಿದ್ದು ಮಾರಾಟ ಸ್ಥಳದಲ್ಲೇ ಹೂವು ಬಾಡಿ ಹೋಗುತ್ತಿದೆ ಎಂದು ರೈತರು ನೋವು ವ್ಯಕ್ತಪಡಿಸುತ್ತಾರೆ.

‘ಪ್ಲಾಸ್ಟಿಕ್‌ ಹಾವಳಿ ಕುರಿತಂತೆ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಅವರ ಗಮನಕ್ಕೂ ತಂದಿದ್ದೇವೆ. ಜೂನ್‌ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆಸಿದ ಸಂವಾದದಲ್ಲಿ ಹೂಬೆಳೆಗಾರರ ಸಂಕಷ್ಟ ಹೇಳಿಕೊಂಡೆ. ಆದರೆ ನನ್ನ ಮಾತನ್ನು ಅನುವಾದಕರು ಪ್ರಧಾನಿಗೆ ತಿಳಿಸಲಿಲ್ಲ. ಹೀಗಾಗಿ ಪ್ರಧಾನಿಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ’ ಎಂದು ಮಳವಳ್ಳಿ ತಾಲ್ಲೂಕು ಅಂತರವಳ್ಳಿ ಬೆಟ್ಟದ
ಬಳಿಯ ಹೂಕೃಷಿಕ ಆರ್‌.ಸಂದೀಪ್‌ ಹೇಳಿದರು.

‘ಪ್ಲಾಸ್ಟಿಕ್‌ ಹೂವಿನ ಹಾವಳಿಯಿಂದ ರೈತರನ್ನು ರಕ್ಷಿಸದಿದ್ದರೆ ಮುಂದೆ ಬಹಳಷ್ಟು ಬೆಳೆಗಾರರು ಆತ್ಮಹತ್ಯೆಗೆ ಶರಣಾಗುವ ಅಪಾಯವಿದೆ’ ಎಂದು ರೈತ ನಾಯಕಿ ಸುನಂದಾ ಜಯರಾಂ ಎಚ್ಚರಿಸಿದರು.

ಪರಿಸರಕ್ಕೆ ಮಾರಕ ಪರಿಣಾಮ: ‘ಕೃತಕ ಹೂಗಳಲ್ಲಿ ಪ್ಲಾಸ್ಟಿಕ್‌ ಜೊತೆಗೆ ರಾಸಾಯನಿಕ ಬಣ್ಣವೂ ಇರುವ ಕಾರಣ ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಇದು ಮಣ್ಣು, ನೀರು, ಗಾಳಿಯನ್ನು ವಿಷಯುಕ್ತಗೊಳಿಸುತ್ತದೆ. ಪ್ಲಾಸ್ಟಿಕ್‌ ಸುಟ್ಟಾಗ ಉತ್ಪತ್ತಿಯಾಗುವ ಡಯಾಕ್ಸಿನ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ’ ಎಂದು ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT