ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಬಾಯಿಗೆ ಬಟ್ಟೆ ಕಟ್ಟಿಕೊಂಡು ಪಾಠ ಮಾಡುವ ಶಿಕ್ಷಕರು!

ಆಲೆಮನೆಗಳಲ್ಲಿ ನಿಲ್ಲದ ಪ್ಲಾಸ್ಟಿಕ್‌, ರಬ್ಬರ್‌, ಬಣ್ಣ, ತೈಲ ತ್ಯಾಜ್ಯ ದಹನ, ಜೀಗುಂಡಿಪಟ್ಟಣದಲ್ಲಿ ವಿಪರೀತ
Last Updated 1 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಂಡ್ಯ: ಆಲೆಮನೆಗಳಲ್ಲಿ ಪ್ಲಾಸ್ಟಿಕ್‌, ರಬ್ಬರ್‌, ತೈಲ,ಬಣ್ಣಗಳ ತ್ಯಾಜ್ಯ ದಹಿಸುವ ಪರಿಪಾಠ ಮುಂದುವರಿದಿದೆ. ಸಮೀಪದ ಜೀಗುಂಡಿಪಟ್ಟಣ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲೇ ಇರುವ ಆಲೆಮನೆಗಳಲ್ಲಿ ನಿತ್ಯ ತ್ಯಾಜ್ಯ ದಹಿಸುತ್ತಿದ್ದು ಶಿಕ್ಷಕರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಪಾಠ ಮಾಡುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಜೀಗುಂಡಿಪಟ್ಟಣದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 50 ಮಕ್ಕಳಿದ್ದರು. ಆದರೆ ಆಲೆಮನೆಯ ವಿಷಯುಕ್ತ ಹೊಗೆ, ತ್ಯಾಜ್ಯದ ದುರ್ವಾಸನೆಯಿಂದಾಗಿ ಮಕ್ಕಳ ದಾಖಲಾತಿ 12ಕ್ಕೆ ಕುಸಿದಿದೆ. ಎಡಕ್ಕೊಂದು ಆಲೆಮನೆ, ಬಲಕ್ಕೊಂದು ಆಲೆಮನೆ ಇದ್ದು ನಡುವೆ ಶಾಲೆ ಸಿಕ್ಕಿಹಾಕಿಕೊಂಡಿದೆ. ದುರ್ವಾಸನೆ ಸಹಿಸಲು ಸಾಧ್ಯವಾಗದ ಶಿಕ್ಷಕರು ಸದಾ ಕಾಲ ಬಟ್ಟೆಕಟ್ಟಿಕೊಂಡು ಪಾಠ ಮಾಡುತ್ತಾರೆ. ಬಿಸಿಯೂಟಕ್ಕೂ ದೂಳು ಬೀಳುತ್ತಿದ್ದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

‘ಈ ಶಾಲೆಗೆ ಬರುವ ಶಿಕ್ಷಕರೆಲ್ಲರೂ ವರ್ಗಾವಣೆಗಾಗಿ ಒತ್ತಾಯ ಮಾಡುವುದು ಸಾಮಾನ್ಯವಾಗಿದೆ. ಶಾಲೆಗೆ ಬಂದ ಮಕ್ಕಳು ತಲೆನೋವು, ನೆಗಡಿ, ಕೆಮ್ಮು ಕಾಣಿಸಿಕೊಂಡು ಮನೆಗೆ ತೆರಳುತ್ತಾರೆ. ಮಕ್ಕಳಿಗೆ ಪಾಠ ಕಲಿಯಲು ಆಸಕ್ತಿಯೇ ಇರುವುದಿಲ್ಲ. ಒಂದು ರೀತಿಯ ಮಂಕು ಕವಿದ ವಾತಾವರಣವಿರುತ್ತದೆ. ಶಾಲೆಯ ಮುಂದೆಯೇ ಆಲೆಮನೆ ತ್ಯಾಜ್ಯ ಚೆಲ್ಲಾಡಿದ್ದು ಮಕ್ಕಳಿಗೆ ಆಟವಾಡುವುದಕ್ಕೂ ಆಸಕ್ತಿ ಇರುವುದಿಲ್ಲ’ ಎಂದು ಶಿಕ್ಷಕರು ಹೇಳುತ್ತಾರೆ.

‘ನಾನು ಇತ್ತೀಚೆಗಷ್ಟೇ ಶಾಲೆಗೆ ಬಂದಿದ್ದೇನೆ. ಕೆಟ್ಟ ವಾಸನೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಗಂಟಲು ಬೇನೆಯಿಂದ ನರಳುತ್ತಿದ್ದೇನೆ. ವಿಪರೀತ ದುರ್ವಾಸನೆಯಿಂದ ತಲೆನೋವು ಕಾಣಿಸಿಕೊಂಡಿದೆ. ಹೀಗಾಗಿ ಮೂಗು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪಾಠ ಮಾಡುತ್ತೇನೆ’ ಎಂದು ಶಿಕ್ಷಕಿ ಎನ್‌.ಲಕ್ಷ್ಮಿ ಹೇಳಿದರು.

‘ಆಲೆಮನೆಯಲ್ಲಿ ಪ್ಲಾಸ್ಟಿಕ್‌ ಉರಿಸುತ್ತಿದ್ದು ಮಕ್ಕಳ ಆರೋಗ್ಯ ಕೆಡುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆದರೂ ಆಲೆಮನೆಗಳಲ್ಲಿ ಪ್ಲಾಸ್ಟಿಕ್‌ ದಹನ ನಿಂತಿಲ್ಲ’ ಎಂದು ಮುಖ್ಯಶಿಕ್ಷಕಿ ಅನಸೂಯಾ ಹೇಳಿದರು.

ಗ್ರಾಮಸ್ಥರ ಆಕ್ರೋಶ: ಆಲೆಮನೆಗಳ ಹಾವಳಿಗೆ ಜೀಗುಂಡಿಪಟ್ಟಣದ ಗ್ರಾಮಸ್ಥರು ಹೈರಾಣಾಗಿದ್ದಾರೆ. ವಿಪರೀತ ಹೊಗೆ ಮನೆಗಳಿಗೆ ನುಸುಳುತ್ತಿದ್ದು ಮನೆಯ ಹೆಂಚು, ತೊಲೆ, ತೀರುಗಳ ಬಣ್ಣ ಬದಲಾಗಿದೆ. ನೆಲದ ಮೇಲೆ ಕಪ್ಪು ದೂಳು ಬಿದ್ದಿರುತ್ತದೆ.

‘ದಿನಕ್ಕೆ 10 ಬಾರಿ ಕಸ ಗುಡಿಸಿದರೂ ಮನೆಯೊಳಗೆ ಕಪ್ಪು ದೂಳು ಹೋಗುವುದಿಲ್ಲ. ಮಕ್ಕಳು ವಾರಕ್ಕೆ ಎರಡು ಬಾರಿ ಜ್ವರದಿಂದ ನರಳುತ್ತಿವೆ. ಹಿಂದಿನಿಂದಲೂ ಆಲೆಮನೆ ಇದ್ದವು, ಆಗೆಲ್ಲಾ ತೆಂಗಿನ ಗರಿ, ಕಬ್ಬಿನ ರಚ್ಚು ಉರಿಸುತ್ತಿದ್ದರು. ಯಾವ ತೊಂದರೆಯೂ ಆಗುತ್ತಿರಲಿಲ್ಲ. ಆದರೆ ಈಗ ಪ್ಲಾಸ್ಟಿಕ್‌, ರಬ್ಬರ್‌ ಉರಿಸುತ್ತಿರುವ ಕಾರಣ ಎಲ್ಲರಿಗೂ ಆರೋಗ್ಯ ಸಮಸ್ಯೆಗಳಾಗಿವೆ’ ಎಂದು ಗ್ರಾಮದ ಮಹಿಳೆ ರಾಜೇಶ್ವರಿ ನೋವು ವ್ಯಕ್ತಪಡಿಸಿದರು.

‘ಆಲೆಮನೆಗಳ ಹಾವಳಿ ಕುರಿತು ಬಿ.ಹೊಸೂರು ಗ್ರಾಮ ಪಂಚಾಯಿತಿ ಕಚೇರಿಗೆ ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಆದರೂ ಪ್ಲಾಸ್ಟಿಕ್‌ ದಹನ ನಿಂತಿಲ್ಲ. ಹೀಗಾಗಿ ಗ್ರಾಮದ ಮಹಿಳೆಯರು, ವೃದ್ಧರೊಂದಿಗೆ ಮಂಡ್ಯಕ್ಕೆ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ’ ಎಂದು ಜೀಗುಂಡಿಪಟ್ಟಣ ಗ್ರಾಮಸ್ಥರು ಎಚ್ಚರಿಸಿದರು.

ಮಂಡ್ಯ ತಾಲ್ಲೂಕಿನ ಜೀಗುಂಡಿಪಟ್ಟಣ ಗ್ರಾಮದ ಆಲೆಮನೆಯಲ್ಲಿ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ಸಂಗ್ರಹಿಸಿರುವುದು
ಮಂಡ್ಯ ತಾಲ್ಲೂಕಿನ ಜೀಗುಂಡಿಪಟ್ಟಣ ಗ್ರಾಮದ ಆಲೆಮನೆಯಲ್ಲಿ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ಸಂಗ್ರಹಿಸಿರುವುದು

ನೋಟಿಸ್‌ಗೂ ಕಿಮ್ಮತ್ತಿಲ್ಲ
ಆಲೆಮನೆಗಳಲ್ಲಿ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯದ ದಹನದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ‘ಪ್ರಜಾವಾಣಿ’ ಈಚೆಗೆ ವಿಸ್ತ್ರತ ವರದಿ ಪ್ರಕಟಿಸಿತ್ತು. ನಂತರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು, ಬಿ.ಹೊಸೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ಆಲೆಮನೆ ಮಾಲೀಕರಿಗೆ ನೋಟಿಸ್‌ ನೀಡಿದ್ದರು. ದಾಳಿಯನ್ನೂ ನಡೆಸಿ ಎಚ್ಚರಿಕೆ ಕೊಟ್ಟಿದ್ದರು. ಕೆಲವು ದಿನಗಳ ನಂತರ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯದ ಹಾವಳಿ ತಪ್ಪಿತ್ತು. ಆದರೆ ಈಗ ಮತ್ತೆ ಆರಂಭಗೊಂಡಿದ್ದು ಜನರು ಪ್ರಾಣ ಸಂಕಟ ಅನುಭವಿಸುತ್ತಿದ್ದಾರೆ.

‘ರಾಜಕೀಯ ಮುಖಂಡರ ಪ್ರಭಾವ ಬಳಸಿ ಆಲೆಮನೆ ಮುಖಂಡರು ತ್ಯಾಜ್ಯ ದಹಿಸುವ ಕೆಲಸ ಮುಂದುವರಿಸಿದ್ದಾರೆ. ಪ್ರಶ್ನೆ ಮಾಡಿದವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ’ ಎಂದು ಜೀಗುಂಡಿಪಟ್ಟಣ ಗ್ರಾಮಸ್ಥರು ಆರೋಪಿಸಿದರು.

ಕ್ರಿಮಿನಲ್‌ ಪ್ರಕರಣ ದಾಖಲು:ಡಿ.ಸಿ
‘ತಕ್ಷಣ ಎಲ್ಲಾ ಆಲೆಮನೆಗಳಿಗೆ ದಾಳಿ ನಡೆಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ಕಂಡು ಬಂದರೆ ಅಂತಹ ಆಲೆಮನೆ ಮಾಲೀಕರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ ಅವರನ್ನು ಬಂಧಿಸಲಾಗುವುದು. ಜೀಗುಂಡಿಪಟ್ಟಣ ಶಾಲೆಯ ಸಮೀಪ ಇರುವ ಆಲೆಮನೆಗಳನ್ನು ತೆರವುಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT