ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌: ದೃಷ್ಟಿ ದೋಷ ಪರಿಹಾರಕ್ಕಾಗಿ ಜಿಲ್ಲೆಯ ಶಾಸಕರಿಂದ ಹೋಮ, ಹವನ

Last Updated 27 ಜುಲೈ 2021, 2:33 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಅಂಬರೀಶ್‌ ಅವರ ಹೇಳಿಕೆಯಿಂದ ಅಣೆಕಟ್ಟೆಗೆ ಕೆಟ್ಟ ದೃಷ್ಟಿ ಬಿದ್ದಿದೆ’ ಎಂದು ಹೇಳಿರುವ ಜಿಲ್ಲೆಯ ಜೆಡಿಎಸ್‌ ಶಾಸಕರು ಸೋಮವಾರ ದೋಷ ಪರಿಹಾರಕ್ಕಾಗಿ ಹೋಮ, ಹವನ ನಡೆಸಿದರು.

ಅಣೆಕಟ್ಟೆಯ ಕಾವೇರಿ ಪ್ರತಿಮೆ ಬಳಿ ನಿರ್ಮಿಸಿದ್ದ ಹೋಮ ಕುಂಡ ಮತ್ತು ಕಾವೇರಿ ಪ್ರತಿಮೆಗೆ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿ.ಎಸ್‌.ಪುಟ್ಟ ರಾಜು, ಎಂ.ಶ್ರೀನಿವಾಸ್‌, ಅನ್ನದಾನಿ, ಸುರೇಶಗೌಡ, ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ,ಎನ್‌.ಅಪ್ಪಾಜಿಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಪೂಜೆ ನೆರವೇರಿಸಿದರು.

ಜ್ಯೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ, ಕೃಷ್ಣಭಟ್‌ ಮೊದಲಾದ ವೈದಿಕರ ತಂಡ ನವಗ್ರಹ ಹೋಮ, ಮಹಾ ಗಣಪತಿ ಹೋಮ, ಪರ್ಜನ್ಯ ಜಪ, ಕಾವೇರಿ ಮಾತೆ ಹೋಮ ಮೊದ ಲಾದ ಕೈಂಕರ್ಯಗಳನ್ನು ನಡೆಸಿತು. ಕಾವೇರಿ ಪ್ರತಿಮೆಗೆ ಪಂಚಾಮೃತ ಅಭಿ ಷೇಕ ನಡೆಯಿತು. ಪೂರ್ಣಾಹುತಿ ಸಲ್ಲಿಸ ಲಾಯಿತು. ವೈದಿಕರು ಪರ್ಜನ್ಯ ಜಪ ಪಠಿಸಿದರು.

‘ಜಲಾಶಯದ ಸುರಕ್ಷತೆ ಮತ್ತು ನಾಡಿನ ಸಮೃದ್ಧಿಗಾಗಿ ದುರ್ಗಾಹೋಮ, ಮೃತ್ಯುಂಜಯ ಹೋಮ ಇತರ ಪೂಜೆಗಳನ್ನು ನಡೆಸಲಾಗಿದೆ. ಆಷಾಢ ಮಾಸದಲ್ಲಿ ನಡೆಯುವ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳೂ ನಡೆದಿವೆ’ ಎಂದು ಡಾ.ಭಾನುಪ್ರಕಾಶ್‌ ಶರ್ಮಾ ತಿಳಿಸಿದರು.

ಪೂಜೆಯಿಂದ ಸಮಾಧಾನ: ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂಬ ಕೆಲವರ ಹೇಳಿಕೆಯಿಂದ ನಾಡಿನ ಮುಖಂಡರು ಮತ್ತು ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು. ದೃಷ್ಟಿ ದೋಷ ನಿವಾರಣೆಗಾಗಿ ಹೋಮ, ಹವನಗಳನ್ನು ನಡೆಸಿದ್ದೇವೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪರೋಕ್ಷವಾಗಿ ಸಂಸದೆ ಸುಮಲತಾ ಅವರನ್ನು ಗುರಿಯಾಗಿಸಿ ಮಾತನಾಡಿದ ಅವರು, ‘ಅಣೆಕಟ್ಟೆಯಲ್ಲಿ ಬಿರುಕು ಮೂಡಿದೆ ಎಂದು ಪದೇ ಪದೆ ಹೇಳುವ ಮೂಲಕ ಅಣೆಕಟ್ಟೆಯತ್ತ ದೃಷ್ಟಿ ಬೀರಿದ್ದರು. ಅವರ ಪ್ರಖರ ದೃಷ್ಟಿ ತಾಗದಿರಲಿ ಎಂದು ದೋಷ ನಿವಾರಣೆಗಾಗಿ ವೈದಿಕರಿಂದ ಸೂರ್ಯ ಹೋಮ, ದುರ್ಗಾದೇವಿ ಹೋಮ, ಮೃತ್ಯುಂಜಯ ಹೋಮ ಇತರ ಪೂಜೆ ಪುನಸ್ಕಾರಗಳನ್ನು ಮಾಡಿಸಿದ್ದೇವೆ. ಈಗ ನಮ್ಮ ಮನಸ್ಸಿಗೆ ಸಮಾಧಾನವಾಗಿದೆ. ನಿರಾಳರಾಗಿದ್ದೇವೆ’ ಎಂದರು.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಪುರಸಭೆ ಉಪಾಧ್ಯಕ್ಷ ಎಸ್‌.ಪ್ರಕಾಶ್‌, ಕೆಆರ್‌ಎಸ್‌ ಗ್ರಾ.ಪಂ.ಅಧ್ಯಕ್ಷ ನಾಗೇಂದ್ರಕುಮಾರ್‌, ಮಾಜಿ ಅಧ್ಯಕ್ಷ ಎಂ.ಬಿ. ಕುಮಾರ್‌, ಸದಸ್ಯರಾದ ಸಿ.ಮಂಜುನಾಥ್‌, ರವಿಕುಮಾರ್‌, ರಾಜಣ್ಣ, ಪಾಪಣ್ಣ, ನರಸಿಂಹ,ಸ್ನೇಕ್‌ ದೀಪು, ಮೂರ್ತಿ, ಪಂಕಜ, ಸರಸ್ವತಿ, ಜಯಂತಿ, ಮುಖಂಡರಾದ ಎಚ್‌.ಎ. ವಿಜಯಕುಮಾರ್‌, ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT