ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧವನ್ನೂ ಖಾಸಗಿಯವರಿಗೆ ವಹಿಸಲಿ: ಕಿಡಿಕಾರಿದ ಶಾಸಕ ಸುರೇಶ್‌ ಗೌಡ

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ವಿರುದ್ಧ ಆಕ್ರೋಶ
Last Updated 19 ಜೂನ್ 2020, 19:45 IST
ಅಕ್ಷರ ಗಾತ್ರ

ನಾಗಮಂಗಲ: ‘ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರು ಉತ್ತಮವಾಗಿ ನಿರ್ವಹಿಸುತ್ತಾರೆ ಎನ್ನುವುದಾದರೆ, ವಿಧಾನ ಸೌಧವನ್ನೂ ಖಾಸಗಿಯವರಿಗೆ ವಹಿಸಲಿ’ ಎಂದು ಶಾಸಕ ಸುರೇಶ್‌ ಗೌಡ ಆಗ್ರಹಿಸಿದರು.

ತಾಲ್ಲೂಕಿನ ಎಪಿಎಂಸಿಯಲ್ಲಿ ₹60 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮೈಷುಗರ್‌ ಕಾರ್ಖಾನೆಯು ಮಂಡ್ಯ ಜಿಲ್ಲೆಯ ಮುಕುಟವಾಗಿದ್ದು, ಅದನ್ನು ಖಾಸಗಿಯವರಿಗೆ ವಹಿಸಬಾರದು. ಇದನ್ನು ನಡೆಸದೇ ಇರುವಷ್ಟು ದಾರಿದ್ರ್ಯವೇನೂ ಸರ್ಕಾರಕ್ಕೆ ಬಂದಿಲ್ಲ. ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿದರೆ ಜೆಡಿಎಸ್‌ನ ಎಲ್ಲಾ ಶಾಸಕರು ರಸ್ತೆಗೆ ಇಳಿದು ಉಗ್ರ ಹೋರಾಟ ಮಾಡುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

‘ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಶಾಸಕರನ್ನು ಕಡೆಗಣಿಸುತ್ತಿದ್ದು, ನಮ್ಮ ರಾಜಕೀಯ ವಿರೋಧಿಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳು ನಿಂತಿವೆ. ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಿದ್ದ ಟ್ಯಾಂಕರ್‌ ಮಾಲೀಕರಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಕೆ.ಆರ್.ಪೇಟೆ ತಾಲ್ಲೂಕಿನವರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಸುರೇಶ್‌ಗೌಡ ಆರೋಪಿಸಿದರು.

‘ಜಿಲ್ಲಾಧಿಕಾರಿ ತಾಲ್ಲೂಕಿಗೆ ಬಂದು ಹೋಗುವುದು ಸ್ಥಳೀಯ ಶಾಸಕರ ಗಮನಕ್ಕೂ ಬರುತ್ತಿಲ್ಲ. ತಾಲ್ಲೂಕಿನ ಕೋವಿಡ್-19 ನಿಧಿಯಲ್ಲಿ ₹60 ಲಕ್ಷ ಹಣವಿದೆ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ₹2.25 ಲಕ್ಷವನ್ನು ಮಾತ್ರ ಖರ್ಚು ಮಾಡಿದ್ದಾರೆ’ ಎಂದು ಅವರು ದೂರಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ರಮೇಶ್, ನಿರ್ದೇಶಕರಾದ ಚನ್ನಪ್ಪ, ರಘು, ಮಂಜೇಶ್, ಜೆಡಿಎಸ್ ಮುಖಂಡರಾದ ರಾಮ, ಸತೀಶ್ ಹಾಗೂ ಪುರಸಭೆ ಸದಸ್ಯ ಪ್ರಭಾಕರ್ ಇದ್ದರು.

**

ಕಾಚೇನಹಳ್ಳಿ ಗ್ರಾಮದಲ್ಲಿರುವ ಡಾಂಬರು ಘಟಕ ಸೇರಿದಂತೆ ಎಲ್ಲ ಅಕ್ರಮ ಡಾಂಬರು ಘಟಕ, ಕ್ರಷರ್‌ಗಳನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್‌ಗೆ ಪತ್ರ ಬರೆಯುತ್ತೇನೆ.
-ಸುರೇಶ್ ಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT