ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಡೆಸಲು ನಿರ್ಧಾರ
Last Updated 16 ಆಗಸ್ಟ್ 2021, 15:07 IST
ಅಕ್ಷರ ಗಾತ್ರ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸುಮಾರು 500ಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು ನೇತೃತ್ವದಲ್ಲಿ ನಂಜನಗೂಡು ಮತ್ತು ಬಿಳಿಕೆರೆ ಭಾಗಗಳಿಂದ ಬಂದಿದ್ದ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ವೇತನ ತಾರತಮ್ಯ ನಿವಾರಣೆಗೆ ₹139.49 ಕೋಟಿ ಪ್ರಸ್ತಾವ ಸಲ್ಲಿಸಿದ್ದರೂ ಈವರೆಗೂ ಬಿಡುಗಡೆಯಾಗಿಲ್ಲ. ಕೂಡಲೇ ಸರ್ಕಾರ ನೀಡಿದ ಭರವಸೆಯಂತೆ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಲ್ಲಿಸಿರುವ ₹339.48 ಕೋಟಿ ಅನುದಾನವನ್ನು ಆರ್ಥಿಕ ಇಲಾಖೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

2016ರಿಂದ ಈಚೆಗೆ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಇದುವರೆಗೂ ಇಡಿಗಂಟು, ಎನ್‌ಪಿಎಸ್ ಹಣ ನೀಡಿಲ್ಲ. ಹೊಸದಾಗಿ ನೇಮಕವಾಗುವ ಕಾರ್ಯಕರ್ತೆಯರಿಗೂ, 10-15 ವರ್ಷ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತೆಯರಿಗೆ ₹10 ಸಾವಿರ ವೇತನ ನೀಡಲಾಗುತ್ತಿದೆ. ಇದನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದರು.

ಕೋಳಿ ಮೊಟ್ಟೆ ಖರೀದಿಗೆ ಸರ್ಕಾರ ಈಗ ಕೇವಲ ₹ 5 ಅಷ್ಟೇ ನೀಡುತ್ತಿದೆ. ಆದರೆ, ಇದಕ್ಕೂ ಹೆಚ್ಚಿನ ದರ ಮಾರುಕಟ್ಟೆಯಲ್ಲಿದೆ. ಕಾರ್ಯಕರ್ತೆಯರು ತಮ್ಮ ಹಣದಲ್ಲಿ ಖರೀದಿಸಬೇಕಿದೆ. ಮೂರು ತಿಂಗಳಿಗೊಮ್ಮೆ ಸರ್ಕಾರ ಹಣ ನೀಡುತ್ತಿದೆ. ಮುಂಗಡ ಹಣ ನೀಡದೇ ಇರುವುದು ಸಮಸ್ಯೆಯಾಗಿದೆ. ಹಾಗಾಗಿ, ಮಕ್ಕಳಿಗೆ ನೀಡುತ್ತಿರುವ ಕೋಳಿಮೊಟ್ಟೆಯನ್ನು ಸರ್ಕಾರವೇ ಪೂರೈಕೆ ಮಾಡಬೇಕು ಎಂದು ಹೇಳಿದರು.

20 ವರ್ಷ ಸೇವೆ ಸಲ್ಲಿಸಿದವರಿಗೆ ₹2,000, 15ವರ್ಷದವರೆಗೆ ₹1,500, 10ವರ್ಷದವರೆಗೆ ₹1,000, 5ವರ್ಷದವರೆಗೆ ₹500 ಹೆಚ್ಚುವರಿ ಗೌರವ ಧನ ನೀಡಬೇಕು ಎಂದರು.

ರಾಜ್ಯದಲ್ಲಿ ಕೋವಿಡ್‌ ಮೊದಲನೇ ಅಲೆಯಲ್ಲಿ 28, ಎರಡನೇ ಅಲೆಯಲ್ಲಿ 19 ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. 173 ಜನರು ಸೋಂಕಿಗೆ ಒಳಗಾಗಿದ್ದಾರೆ. ಸರ್ಕಾರವೇ ಭರವಸೆ ನೀಡಿದಂತೆ ಕೂಡಲೇ ತಲಾ ₹1 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಷ್ಪಲತಾ, ಜಿಲ್ಲಾ ಖಜಾಂಚಿ ಲೀಲಾವತಿ, ಉಪಾಧ್ಯಕ್ಷರು ಮಂಜುಳಾ, ಅಜಿತಾ, ಜಂಟಿ ಕಾರ್ಯದರ್ಶಿ ಪುಷ್ಪಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT