ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಚ್ಚುನಾಯಿ ಕಡಿದು ಐವರು ಮಕ್ಕಳಿಗೆ ಗಾಯ

ವಿದ್ಯಾನಗರ ಬಡಾವಣೆಯಲ್ಲಿ ನಾಯಿ ಹಾವಳಿ, ಗಂಭೀರವಾಗಿ ಗಾಯಗೊಂಡ ವಿಧಿಶಾ
Last Updated 12 ಫೆಬ್ರುವರಿ 2020, 9:29 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯಲ್ಲಿ ಶನಿವಾರ ಹುಚ್ಚು ನಾಯಿ ಕಡಿದು ಐವರು ಮಕ್ಕಳು ಗಾಯಗೊಂಡಿದ್ದಾರೆ.

ವಿಧಿಶಾ (6), ನಿವೇದಿತಾ (8), ಶ್ರಾವಣಿ (5) ಆರೋಹಿ (5) ಹಾಗೂ ಯೋಗಿತಾ ಗಾಯಗೊಂಡವರು. ಈ ಮಕ್ಕಳು ಬಡಾವಣೆಯಲ್ಲಿ ಆಟವಾಡುತ್ತಿದ್ದಾಗ ಹುಚ್ಚು ನಾಯಿ ದಾಳಿ ನಡೆಸಿದೆ. ರೊಚ್ಚಿಗೆದ್ದ ಸ್ಥಳೀಯರು ನಾಯಿಯನ್ನು ಕೊಂದು ಹಾಕಿದ್ದಾರೆ.

ಪ್ರದೀಪ್ ಕುಮಾರ್ ಅವರ ಪುತ್ರಿ ವಿಧಿಶಾಳ ಕೆನ್ನೆ ಹಾಗೂ ತುಟಿಯ ಭಾಗದ ಮಾಂಸಖಂಡಗಳು ಕಿತ್ತು ಬಂದಿವೆ. ಗಂಭೀರವಾಗಿ ಗಾಯಗೊಂಡಿರುವ ಆಕೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನುಳಿದ ಮಕ್ಕಳ ಬೆನ್ನು, ಭುಜ, ಕೈ, ಕಾಲುಗಳಿಗೆ ನಾಯಿ ಕಚ್ಚಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

‘ವಿಧಿಶಾಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಿದೆ. ಆಕೆ ಪೋಷಕರು ಬಡವರಾಗಿದ್ದು, ತಂದೆ ಪ್ರದೀಪ್‌ಕುಮಾರ್‌ ಅವರು ರಸ್ತೆಬದಿಯಲ್ಲಿ ಫಾಸ್ಟ್‌ಫುಡ್ ವ್ಯಾಪಾರ ನಡೆಸುತ್ತಾರೆ. ಹೀಗಾಗಿ, ಮಗುವಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ಸಂಬಂಧಿ ಮಹದೇವಯ್ಯ ಆಗ್ರಹಿಸಿದ್ದಾರೆ.

ಚುಚ್ಚುಮದ್ದು ಇಲ್ಲ: ‘ಗಾಯಗೊಂಡ ಮಕ್ಕಳನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಸ್ಪತ್ರೆಯಲ್ಲಿ ನಾಯಿ ಕಡಿತದ ಚುಚ್ಚುಮದ್ದು ಲಭ್ಯವಿರಲಿಲ್ಲ. ಪ್ರಥಮ ಚಿಕಿತ್ಸೆ ನೀಡಬೇಕಾಗಿದ್ದ ನರ್ಸ್‌ಗಳು ಬೇಜವಾಬ್ದಾರಿಯಿಂದ ವರ್ತಿಸಿದರು. ಪೋಷಕರನ್ನು ಗದರಿ ಸಾಗಹಾಕಿದರು. ವಿಧಿಯಿಲ್ಲದೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಯಿತು’ ಎಂದು ಗಾಯಾಳು ಯೋಗಿತಾಳ ತಂದೆ ಚಂದನ್‌ ಕುಮಾರ್ ಆರೋಪಿಸಿದರು.

ಚಿಕಿತ್ಸೆಗೆ ನೆರವು: ‘ವಿಧಿಶಾಳ ಚಿಕಿತ್ಸೆಗೆ ಗ್ರಾಮ ಪಂಚಾಯಿತಿ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು. ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಕ್ರಮವಹಿಸಲಾಗುವುದು’ ಎಂದು ಪಿಡಿಒ ಶ್ರೀಧರ್‌ ತಿಳಿಸಿದರು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್‌ ಮಾತನಾಡಿ, ‘ಮಕ್ಕಳನ್ನು ಕಡಿದ ನಾಯಿಗೆ ಹುಚ್ಚು ಹಿಡಿದಿತ್ತು. ಗಾಯಾಳುಗಳಿಗೆ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಾಗಿದೆ. ವಿಧಿಶಾಳಿಗೆ ತೀವ್ರತರಹದ ಗಾಯಗಳಾಗಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT