ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ | ಮೆಕ್ಯಾನಿಕ್‌ಗಳ ಲೋಕದೊಳಗೆ

Last Updated 6 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ದೊಡ್ಡ ಬ್ರೇಕ್‌ ಡ್ರಮ್‌ಅನ್ನು ಟ್ರಾಲಿ ಸಹಾಯದಿಂದ ಬಸ್ಸಿಗೆ ಜೋಡಿಸುತ್ತಿದ್ದ ಮಹಿಳೆ ಒಂದು ಕಡೆ, ಬೇರಿಂಗ್‌ಗೆ ಗ್ರೀಸ್‌ ಹಾಕುತ್ತಿದ್ದ ಮಹಿಳೆ ಮತ್ತೊಂದು ಕಡೆ. ಬೋಲ್ಟ್‌ಗಳನ್ನು ಬಿಗಿ ಮಾಡುತ್ತಿದ್ದ ಮಹಿಳೆ ಮಗದೊಂದು ಕಡೆ... ಸ್ಪ್ರಿಂಗ್‌ ಚೆಕ್‌ ಮಾಡುತ್ತಿದ್ದ ಆ ಮಹಿಳೆಯ ಮುಖದಲ್ಲಿ ಖುಷಿಯಿತ್ತು, ಜಾಕ್‌ ಹಾಕಿ ಭಾರಿ ಗಾತ್ರದ ಟಯರ್‌ ಬಿಚ್ಚಲು ಪುರಷರಿಗೆ ಸಹಾಯ ಮಾಡುತ್ತಿದ್ದ ಮಹಿಳೆಯ ಉತ್ಸಾಹ ಕುಂದಿರಲಿಲ್ಲ.

ಬನ್ನಿಮಂಟಪ ಸಮೀಪದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ವಿಭಾಗೀಯ ಕಾರ್ಯಾಗಾರದಲ್ಲಿ ಪುರಷರಿಗೆ ಸಮಾನವಾಗಿ ದುಡಿಯುತ್ತಿರುವ ಮೆಕ್ಯಾನಿಕ್‌ ಮಹಿಳೆಯರಿವರು.

ಮೈಸೂರಿನ ನಾಲ್ಕು ಘಟಕಗಳಿಂದ(ಬನ್ನಿಮಂಟಪ, ವಿಜಯನಗರ, ಕುವೆಂಪುನಗರ ಹಾಗೂ ಸಾತಗಳ್ಳಿ) 30 ಮಹಿಳಾ ಸಿಬ್ಬಂದಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಪುರುಷ ಪ್ರಧಾನ ವೃತ್ತಿಗಳಿಗೆ ಮಹಿಳೆಯರು ಲಗ್ಗೆ ಇಟ್ಟು ಬಹಳ ಕಾಲವೇ ಆಯಿತು. ಕಾಲಿಟ್ಟ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ತೋರಿಸಿದ್ದಾರೆ. ಕಠಿಣ ದೈಹಿಕ ಪರಿಶ್ರಮ ಬೇಡುವ ಮೆಕ್ಯಾನಿಕ್‌ ವೃತ್ತಿಯಲ್ಲಿ ಮಹಿಳೆಯರೂ ಮುಂದಿದ್ದಾರೆ. ಹೆಚ್ಚು ಶ್ರಮವಿಲ್ಲದ ಕೆಲಸ ಬಯಸುವ ಮಹಿಳೆಯರಿಗೆ ಇವರು ಮಾದರಿ ಆಗಿದ್ದಾರೆ.

ಕುರ್ಚಿಗಳಿಗೆ ಕವರ್‌ ಹಾಕುವುದು, ಎಲೆಕ್ಟ್ರಿಕಲ್‌ ವರ್ಕ್‌, ಜಾಕ್‌ ಹಾಕಿ ಟಯರ್‌ ಬಿಚ್ಚುವುದು ಹಾಗೂ ಹಾಕುವುದು, ಬೇರಿಂಗ್‌ಗೆ ಗ್ರೀಸ್‌ ಹಾಕುವುದು, ಗೇರ್‌ಬಾಕ್ಸ್‌ ಕೆಲಸ... ಹೀಗೆ ಹಲವು ವಿಭಾಗಗಳಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡಿ ಸೈ
ಎನಿಸಿಕೊಂಡಿದ್ದಾರೆ.

ಹೊಸದಾಗಿ ಬಂದವರೂ ಸೇರಿದಂತೆ ಹತ್ತು ವರ್ಷಕ್ಕೂ ಹೆಚ್ಚು ಕಾಲ ಇದೇ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡ ಮಹಿಳೆಯರು ತಮ್ಮ ಅಭಿ‍ಪ್ರಾಯ ಹಂಚಿಕೊಂಡಿದ್ದಾರೆ.

‌‘ಹನ್ನೊಂದು ವರ್ಷದಿಂದ ಮೆಕ್ಯಾನಿಕ್‌ ವೃತ್ತಿಯಲ್ಲಿ ಇದ್ದೇನೆ. ಆರಂಭದಲ್ಲಿ ಕಷ್ಟ ಆಗುತ್ತಿತ್ತು. ಮನೆಗೆ ಹೋಗಿ ಅತ್ತಿದ್ದೂ ಇದೆ. ಹಿರಿಯ ಸಹೋದ್ಯೋಗಿಗಳು ಸಲಹೆ ಹಾಗೂ ನೆರವು ನೀಡಿದ್ದರಿಂದ ಕೆಲಸ ಬಿಡಲಿಲ್ಲ. ನನ್ನ ಪತಿಯೂ ಮೆಕ್ಯಾನಿಕ್‌ ಆದ್ದರಿಂದ ಕೆಲಸದ ಬಗ್ಗೆ ಪ್ರೀತಿ ಹೆಚ್ಚಾಯಿತು. ಇಲ್ಲಿ ನಾನು ಬೇರಿಂಗ್‌ಗೆ ಗ್ರೀಸ್‌ ಹಾಕುವುದು, ಗೇರ್‌ಬಾಕ್ಸ್‌ ಬದಲಾಯಿಸುವುದು, ಸ್ಪ್ರಿಂಗ್‌ ಚೇಂಜ್‌ ಮಾಡುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು ಹೆಬ್ಬಾಳದ ಮಹೇಶ್ವರಿ.

‘ಸ್ಟಾರ್‌ ಕಿಟ್‌ ಚೆಕ್‌, ಬ್ರೇಕ್‌ ಅಡ್ಜೆಸ್ಟ್‌ ಸೇರಿದಂತೆ ನಿರ್ವಹಣೆ ಕೆಲಸವನ್ನು ನಾನು ಮಾಡುತ್ತೇನೆ. ಬೆಳಿಗ್ಗೆ 8ರಿಂದ 5ರವರೆಗೆ ದುಡಿಯುತ್ತೇನೆ. ಕಷ್ಟದ ಕೆಲಸಗಳಿದ್ದಾಗ ಪುರುಷ ಸಿಬ್ಬಂದಿಯೂ ನೆರವು ನೀಡುತ್ತಾರೆ’ ಎಂದರು ಕುವೆಂಪು ನಗರದ ಸೌಮ್ಯ.

ಬ್ರೇಕ್‌ ಸೆಕ್ಷನ್‌ನಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುವ ಚೈತ್ರಾ ಮಾತನಾಡುತ್ತಾ, ‘ಬಸ್‌ಗಳಲ್ಲಿ ಬ್ರೇಕ್‌ ಹಾಳಾಗಿದ್ದರೆ ಇಲ್ಲಿಗೆ ಕಳುಹಿಸುತ್ತಾರೆ. ಬಿಚ್ಚಿ ಸ್ವಚ್ಛಗೊಳಿಸಿ ಸರಿ ಮಾಡುತ್ತೇವೆ. ಪೂರ್ತಿ ಹಾಳಾಗಿದ್ದರೆ ಹೊಸ ಬ್ರೇಕ್‌ ಸೆಟ್‌ ಕಳುಹಿಸಿಕೊಡುತ್ತೇವೆ’ ಎಂದು
ಹೇಳಿದರು.

‘ಬಹಳಷ್ಟು ಯುವತಿಯರು ಹೊಸದಾಗಿ ಮೆಕ್ಯಾನಿಕ್ ವೃತ್ತಿಗೆ ಬರುತ್ತಿದ್ದಾರೆ. ಆರಂಭದಲ್ಲಿ ಹಿಂಜರಿಯುತ್ತಾರೆ, ಆದರೆ ಇತರೆ ಮಹಿಳೆಯರನ್ನು ನೋಡಿ ಧೈರ್ಯ ತಂದುಕೊಳ್ಳುತ್ತಾರೆ. ಹೆಚ್ಚಾಗಿ ನಿರ್ವಹಣೆ ವಿಭಾಗದಲ್ಲಿ ಕೆಲಸ ನಿಭಾಯಿಸುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ ಮೆಕ್ಯಾನಿಕಲ್ ಸೂಪರ್‌ವೈಸರ್‌ ಆಶಾ.

‘ಇಲ್ಲಿಗೆ ಹೊಸದಾಗಿ ಬರುವವರು ಎರಡು ವರ್ಷ ತರಬೇತಿ ಪಡೆಯುತ್ತಾರೆ. ಸದ್ಯ ಮೈಸೂರು ವಿಭಾಗದಲ್ಲಿ 167 ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕ ವಿಭಾಗದಲ್ಲಿ 30 ಮಹಿಳೆಯರಿದ್ದಾರೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಪಿ. ನಾಗರಾಜ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT