ಶುಕ್ರವಾರ, ಡಿಸೆಂಬರ್ 2, 2022
20 °C

ಮೈಸೂರು ದಸರಾ: ಕಲಾಮಂದಿರದಲ್ಲಿ ಶಿಲ್ಪ, ಚಿತ್ರಕಲಾ ಕೃತಿಗಳ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ದಸರಾ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿಯಿಂದ ನಗರದ ಕಲಾಮಂದಿರದ ಆವರಣದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಶಿಲ್ಪ ಹಾಗೂ ಚಿತ್ರ ಕಲಾ ಶಿಬಿರದಲ್ಲಿ ಕಲಾಕೃತಿಗಳು ಅಂತಿಮ ಸ್ಪರ್ಶ ಪಡೆಯುತ್ತಿವೆ.

ನಾಡಿನ ವಿವಿಧೆಡೆಯ ಕಲಾವಿದರು ತಮ್ಮ ಕಲ್ಪನೆಗಳಿಗೆ ಮೂರ್ತ ರೂಪ ನೀಡುತ್ತಿದ್ದಾರೆ. ಅವುಗಳನ್ನು ಕಲಾಮಂದಿರದಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರಾಂಗಣದ ಅಂದವನ್ನು ಇಮ್ಮಡಿಗೊಳಿಸುವುದಕ್ಕಾಗಿ ಸಿದ್ಧತೆ ನಡೆದಿದ್ದು, ಸೆ.26ರಂದು ಸಂಜೆ 5.30ಕ್ಕೆ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಉಪ ಸಮಿತಿಯ ಅಧ್ಯಕ್ಷೆ ಟಿ.ಎನ್.ಶಾಂತಾ ಈ ವಿವರ ನೀಡಿದರು.

‘ಶಿಬಿರದಲ್ಲಿ ಯುವ ಕಲಾವಿದರಿಗೆ, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಕಲಾಕೃತಿಗಳ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್‌ ಉದ್ಘಾಟಿಸಲಿದ್ದಾರೆ. ಮೇಯರ್‌ ಶಿವಕುಮಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಲಾಗುತ್ತದೆ’ ಎಂದು ತಿಳಿಸಿದರು.

ಉಚಿತ ಪ್ರವೇಶ: ‘ನೂರಕ್ಕೂ ಹೆಚ್ಚಿನ ಶಿಲ್ಪ ಕಲಾಕೃತಿಗಳು ಅ.3ರವರೆಗೆ ಪ್ರತಿ ದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನಗೊಳ್ಳಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ’ ಎಂದು ತಿಳಿಸಿದರು.

‘ಅ.1ರಂದು ಬೆಳಿಗ್ಗೆ 10.30ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಸಂಸದ ಪ್ರತಾಪ ಸಿಂಹ ಚಾಲನೆ ನೀಡಲಿದ್ದಾರೆ. ವಿಜೇತ ಮಕ್ಕಳಿಗೆ ಕ್ರಮವಾಗಿ ಮೊದಲ ಮೂರು ಬಹುಮಾನವಾಗಿ ₹ 4ಸಾವಿರ, ₹ 3 ಸಾವಿರ ಹಾಗೂ ₹ 2 ಸಾವಿರ ನೀಡಲಾಗುವುದು’ ಎಂದರು.

‘ಅ.1ರಿಂದ 3ರವರೆಗೆ ಕರಕುಶಲ ಮಳಿಗೆಗಳ ‍ಪ್ರಾತ್ಯಕ್ಷಿಕೆ ಪ್ರದರ್ಶನ ಇರಲಿದೆ. ಕಿನ್ನಾಳ, ಕೌದಿ, ಕಸೂತಿ, ಕುಂಬಾರಿಕೆ, ಇನ್‌ಲೇ, ಚರಕದಿಂದ ನೂಲುವಿಕೆ, ಕೈಮಗ್ಗ, ವರ್ಲಿ ಕಲೆ, ಚನ್ನಪಟ್ಟಣ ಬೊಂಬೆ ತಯಾರಿಕೆ, ಬಿದಿರಿನಿಂದ ಬುಟ್ಟಿ ಎಣೆಯುವುದು, ಮದರಂಗಿ ಕಲೆ, ವ್ಯಂಗ್ಯ ಚಿತ್ರಕಲೆ ಹಾಗೂ ಸೂಕ್ಷ್ಮಕಲೆಗಳ ಪ್ರಾತ್ಯಕ್ಷಿಕೆ ಆರಂಭಗೊಳ್ಳಲಿದೆ. ಪ್ರದರ್ಶಿತ ಕರಕುಶಲ ವಸ್ತುಗಳ ಮಾರಾಟ ವ್ಯವಸ್ಥೆ ಇರಲಿದೆ’ ಎಂದು ಹೇಳಿದರು.

ನಗದು ಬಹುಮಾನ: ‘ಅ.3ರಂದು ಸಂಜೆ 4ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಭಾಗವಹಿಸಲಿದ್ದಾರೆ. ಚಿತ್ರಕಲೆ ಹಾಗೂ ಶಿಲ್ಪಕಲೆ ಶಿಬಿರದಲ್ಲಿ ಆಯ್ಕೆಯಾಗುವ ತಲಾ 3 ಅತ್ಯುತ್ತಮ ಕಲಾಕೃತಿಗಳಿಗೆ ತಲಾ ₹ 6ಸಾವಿರ ಬಹುಮಾನ ನೀಡಲಾಗುವುದು. ಕಲಾಕೃತಿಗಳಲ್ಲಿ ಶೇ 50ರಷ್ಟನ್ನು ಆಯಾ ಅಕಾಡೆಮಿಗಳಿಗೆ ಕೊಡಲಾಗುತ್ತದೆ. ಉಳಿದವುಗಳನ್ನು ಕಲಾಮಂದಿರದ ಆವರಣದಲ್ಲಿ ಪ್ರದರ್ಶಿಸಲಾಗುತ್ತದೆ’ ಎಂದು ವಿವರಿಸಿದರು.

‘₹ 37 ಲಕ್ಷ ಅನುದಾನ ಕೇಳಿದ್ದೆವು. ಅದಕ್ಕೆ ಜಿಲ್ಲಾಡಳಿತ ಒಪ್ಪಲಿಲ್ಲ. ₹ 28 ಲಕ್ಷ ಪರಿಷ್ಕೃತ ಅಂದಾಜು ಪಟ್ಟಿ ನೀಡಿದ್ದೆವು. ಅದರಲ್ಲಿ ₹ 18 ಲಕ್ಷ ಕೊಡಲು ಸಮ್ಮತಿ ಸಿಕ್ಕಿದ್ದು, ₹ 10 ಲಕ್ಷ ಬಿಡುಗಡೆಯಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಪ್ರತಿಕ್ರಿಯಿಸಿದರು.

ಸಮಿತಿಯ ಉಪಾಧ್ಯಕ್ಷರಾದ ಎಂ.ಎನ್.ಚಿಂದಬರ್, ಜಿ.ನಾಗೇಂದ್ರಕುಮಾರ್, ಲೋಕೇಶ್ ನಾಯಕ್, ಉಪ ವಿಶೇಷಾಧಿಕಾರಿ ವಿಜಯ್‌ಕುಮಾರ್‌ ಮತ್ತು ಕಾರ್ಯದರ್ಶಿ ರಶ್ಮಿ ಬಿ. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು