ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ನಗರದಲ್ಲಿ ಸ್ನಾತಕೋತ್ತರ ಕೇಂದ್ರ

ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ
Last Updated 31 ಮೇ 2019, 10:11 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ಕೆ.ಆರ್‌.ನಗರದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಲು ನಿರ್ಧರಿಸಿದೆ. ಈ ಕುರಿತ ಪ್ರಸ್ತಾವಕ್ಕೆ ಗುರುವಾರ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಶೀಘ್ರದಲ್ಲೇ ಕೆ.ಆರ್‌.ನಗರದಲ್ಲಿ ಸ್ನಾತಕೋತ್ತರ ಕೇಂದ್ರ ತಲೆಎತ್ತಲಿದ್ದು ಕನ್ನಡ, ಇಂಗ್ಲಿಷ್‌ ಮತ್ತು ಸಮಾಜಶಾಸ್ತ್ರ ಅಧ್ಯಯನ ವಿಭಾಗಗಳು ಕಾರ್ಯಾರಂಭ ಮಾಡಲಿವೆ ಎಂದು ಮೂಲಗಳು ತಿಳಿಸಿವೆ. ವಿ.ವಿ ತನ್ನ ಉಪಕೇಂದ್ರಗಳನ್ನು ಮೈಸೂರು ನಗರದಿಂದ ಹೊರಗೆ ವಿಸ್ತರಿಸುವ ಸಲುವಾಗಿ ಈ ಹೆಜ್ಜೆಯಿಟ್ಟಿದೆ.

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮೇಲ್ಮನವಿ: ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವಂತೆ ಸೂಚಿಸಿ ಹೈಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿ.ವಿ. ನಿರ್ಧರಿಸಿದೆ.

‘ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಆ ಸೂಚನೆಯನ್ನು ಪಾಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಮೂಲಗಳು ಹೇಳಿವೆ.

ಮೈಸೂರು ವಿವಿ. ವ್ಯಾಪ್ತಿಯಲ್ಲಿ 10 ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಲು ತಕ್ಷಣವೇ ಮುಂದಾಗಬೇಕು ಎಂದು ಹೈಕೋರ್ಟ್, ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮೈಸೂರು ವಿ.ವಿ ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಿತ್ತು.

ಏಳನೇ ವೇತನ ಆಯೋಗದ ವರದಿ ಜಾರಿ ಮತ್ತು ಯುವರಾಜ ಕಾಲೇಜಿನಲ್ಲಿ ಬಿಎಸ್ಸಿಇಡಿ ಕೋರ್ಸ್‌ ಆರಂಭಿಸಲು ಒಪ್ಪಿಗೆ ಲಭಿಸಿದೆ.

ಕೇಂದ್ರೀಕೃತ ಅಡುಗೆ ಕೇಂದ್ರ: ಮೈಸೂರು ವಿ.ವಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಸುವ ಸಲುವಾಗಿ ಕೇಂದ್ರೀಕೃತ ಅಡುಗೆ ಕೇಂದ್ರವನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು.

ಮೈಸೂರು ವಿ.ವಿ. ಯ 15 ಹಾಸ್ಟೆಲ್‌ಗಳು ನಗರದಲ್ಲಿವೆ. ಈಗ ಇರುವ ವ್ಯವಸ್ಥೆಯಂತೆ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಆಹಾರ ಪೂರೈಸಲು ಪ್ರತ್ಯೇಕ ಟೆಂಡರ್‌ಗಳನ್ನು ಕರೆಯಲಾಗುತ್ತಿತ್ತು. ಇದರಿಂದ ಒಂದೊಂದು ಹಾಸ್ಟೆಲ್‌ಗೆ ಭಿನ್ನ ರುಚಿ ಹಾಗೂ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿತ್ತು. ಆದ್ದರಿಂದ ಕೇಂದ್ರೀಕೃತ ಅಡುಗೆ ಕೇಂದ್ರ ಸ್ಥಾಪಿಸಿ ಎಲ್ಲ ಹಾಸ್ಟೆಲ್‌ಗಳಿಗೆ ಅಲ್ಲಿಂದಲೇ ಆಹಾರ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮುಂದಿನ ಮೂರು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಕೇಂದ್ರೀಕೃತ ಅಡುಗೆ ಕೇಂದ್ರದ ಸ್ಥಾಪನೆಗೆ ಶೀಘ್ರದಲ್ಲೇ ಸ್ಥಳವನ್ನು ಗುರುತಿಸಲಾಗುವುದು ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT