ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45 ದಿನಗಳ ‘ಬೇಸಿಗೆ ಮೇಳ’ ನಡೆಸಲು ಸಿದ್ಧತೆ

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ 145ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ
Last Updated 20 ಜನವರಿ 2021, 4:01 IST
ಅಕ್ಷರ ಗಾತ್ರ

ಮೈಸೂರು: ಈ ವರ್ಷ ‘ಬೇಸಿಗೆ ಮೇಳ’ ನಡೆಸಲು ಇಲ್ಲಿ ಮಂಗಳವಾರ ನಡೆದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ 145ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಕಳೆದ 8 ವರ್ಷಗಳಿಂದ ವಸ್ತುಪ್ರದರ್ಶನದ ಆವರಣದಲ್ಲಿ ‘ಬೇಸಿಗೆ ಮೇಳ’ ನಡೆದಿಲ್ಲ. ಈ ಬಾರಿ ಕೋವಿಡ್ ಕಾರಣದಿಂದ ದಸರಾ ವಸ್ತು ಪ್ರದರ್ಶನವೂ ನಡೆದಿಲ್ಲ. ಕೋವಿಡ್ ಕಡಿಮೆಯಾಗುತ್ತಾ ಬರುತ್ತಿದ್ದು, ಏ‍‍ಪ್ರಿಲ್ 15ರಿಂದ 45 ದಿನಗಳ ಕಾಲ ‘ಬೇಸಿಗೆ ಮೇಳ’ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‌ಗೌಡ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಹುಬಲಿ ಸಿನಿಮಾ ಸೆಟ್ ಹಾಗೂ ಹಡಗಿನ ಮಾದರಿಯ ಸೆಟ್ ನಿರ್ಮಿಸಲು ಸೈಮನ್ ಎಕ್ಸಿಬಿಟರ್ಸ್ ಮುಂದೆ ಬಂದಿದ್ದು, ಅಂದಾಜು ₹ 2 ಕೋಟಿ ಖರ್ಚಾಗಲಿದೆ ಎಂದು ಹೇಳಿದ್ದಾರೆ. ‘ಫನ್ ವರ್ಲ್ಡ್‌’ ಸಹ ಬೇಸಿಗೆ ಮೇಳಕ್ಕೆ ಆಸಕ್ತಿ ತೋರಿದೆ. ಅತಿ ಶೀಘ್ರದಲ್ಲಿ ಯಾವ ಬಗೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಬೇಕು ಎಂದು ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.‌

‘ಮೈಸೂರು ಹಾತ್‌’ ಯೋಜನೆ: ಒಟ್ಟು ₹ 145 ಕೋಟಿ ಮೊತ್ತದ ‘ಮೈಸೂರು ಹಾತ್’ ಯೋಜನೆಯನ್ನು ರೂಪಿಸಲಾಗಿದ್ದು, ಮುಖ್ಯಮಂತ್ರಿ ಅವರಿಗೆ ಈ ಕುರಿತು ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಮಂತಕುಮಾರ್‌ಗೌಡ ತಿಳಿಸಿದರು.

ವಸ್ತು ಪ್ರದರ್ಶನದ ಆವರಣದಿಂದ ಮೃಗಾಲಯಕ್ಕೆ ಸುರಂಗಮಾರ್ಗ, ಬಯಲು ರಂಗಮಂದಿರಗಳ ನಿರ್ಮಾಣ, ಬಹುಹಂತದ ವಾಹನ ನಿಲ್ದಾಣ, ಅಮ್ಯೂಸ್‌ಮೆಂಟ್ ಪಾರ್ಕ್, ಆಹಾರ ಮಳಿಗೆಗಳು ಸೇರಿದಂತೆ ಹಲವು ಆಕರ್ಷಣೆಗಳು ಇರಲಿವೆ ಎಂದರು.

ಪ್ರಾಧಿಕಾರದ ಆವರಣದಲ್ಲಿ ವಿವಿಧ ಸಮಾರಂಭ ಹಾಗೂ ಇತರೆ ಕಾರ್ಯಕ್ರಮ ಆಯೋಜಿಸಲು ನಿಗದಿಪಡಿಸಿರುವ ಬಾಡಿಗೆಯನ್ನು ಶೇ 10ರಷ್ಟು ಹೆಚ್ಚಿಸಲಾಗಿದೆ. ಸರ್ವೆ ನಂಬರ್ 1, ದೊಡ್ಡಕೆರೆ ಮೈದಾನದ ಬೆಲೆ ಬಾಳುವ ಸರ್ಕಾರಿ ಜಮೀನಿನನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲೂ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮಾಹಿತಿ ನೀಡಿದರು.‌

ಸರ್ಕಾರದಿಂದ ಬರಬೇಕಿರುವ ₹ 5 ಕೋಟಿಯನ್ನು ಈ ಬಾರಿ ಕೋವಿಡ್ ಕಾರಣದಿಂದ ಕೊಟ್ಟಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT