ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ರೈಲು ನಿಲ್ದಾಣ ಕಟ್ಟಡ ಉದ್ಘಾಟಿಸಿ 140 ವರ್ಷ: ಸಂಭ್ರಮಾಚರಣೆ

Published 1 ಡಿಸೆಂಬರ್ 2023, 13:30 IST
Last Updated 1 ಡಿಸೆಂಬರ್ 2023, 13:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕೇಂದ್ರ ರೈಲು ನಿಲ್ದಾಣದ ಕಟ್ಟಡವನ್ನು ಉದ್ಘಾಟಿಸಿ 140 ವರ್ಷಗಳು ಕಳೆದ ನೆನಪಿಗಾಗಿ ‘ನಿಲ್ದಾಣ ಮಹೋತ್ಸವ’ವನ್ನು ಶುಕ್ರವಾರ ಆಚರಿಸಲಾಯಿತು.

1881ರಲ್ಲಿ ಆಗಿನ ಮೈಸೂರು ಸಂಸ್ಥಾನವು ನಿಲ್ದಾಣದ ಕಟ್ಟಡದ ಉದ್ಘಾಟನೆ ನೆರವೇರಿಸಿತ್ತು. ರೈಲ್ವೆ ನೌಕರರು ಮತ್ತು ಸ್ಥಳೀಯರಿಗೆ ರೈಲ್ವೆ ವ್ಯವಸ್ಥೆಯ ಸ್ಥಾಪನೆಯ ಇತಿಹಾಸ ಮತ್ತು ಅದರ ಪಾರಂಪರಿಕ ಆಸ್ತಿಗಳಾದ ನಿಲ್ದಾಣಗಳು, ಬಳಸುವ ಉಪಕರಣಗಳು ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಿಲ್ದಾಣ ಮಹೋತ್ಸವದಲ್ಲಿ ಮಾಡಲಾಯಿತು.

ಮೈಸೂರು ರೈಲು ನಿಲ್ದಾಣವನ್ನು 1881ರ ಡಿ.1ರಂದು ಅಂದಿನ ಮೈಸೂರು ರಾಜ್ಯ ರೈಲ್ವೆಯಿಂದ ಔಪಚಾರಿಕವಾಗಿ ಆರಂಭಿಸಲಾಯಿತು. ಈ ರೈಲು ಯೋಜನೆಯು 86 ಮೈಲಿಗಳ ಮೀಟರ್ ಗೇಜ್ ರೈಲು ಮಾರ್ಗವನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರ ಮತ್ತು ಮೈಸೂರನ್ನು ಸಂಪರ್ಕಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು. ಈ ರೈಲು ಮಾರ್ಗವು ಆರಂಭದಲ್ಲಿ ಕ್ಷಾಮ ಪರಿಹಾರ ಉಪಕ್ರಮವಾಗಿ ಕಾರ್ಯನಿರ್ವಹಿಸಿತು. ದೂರದ ಪ್ರದೇಶಗಳಿಗೆ ಆಹಾರವನ್ನು ಸಾಗಿಸುವುದು ಮತ್ತು ಸಂಬಳ, ಕೂಲಿಗೆ ಬದಲಾಗಿ ಧಾನ್ಯಗಳನ್ನು ನೀಡಿ ರೈಲು ಮಾರ್ಗದ ನಿರ್ಮಾಣದಲ್ಲಿ ಜನರನ್ನು ತೊಡಗಿಸಿಕೊಳ್ಳುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು ಎಂದು ತಿಳಿಸಲಾಯಿತು.

ಯಾದವಗಿರಿಯ ಲಲಿತಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್‌ ಮಾತನಾಡಿ, ‘ಕ್ಷಾಮಗಳಿಗೆ ಸಾಕ್ಷಿಯಾದ ಈ ಪ್ರದೇಶದ ಜನರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತರುವುದಕ್ಕಾಗಿ ರೈಲ್ವೆ ವ್ಯವಸ್ಥೆಯನ್ನು ಸ್ಥಾಪಿಸಲು ಆಗಿನ ಮೈಸೂರು ಸಾಮ್ರಾಜ್ಯದ ಆಡಳಿತಗಾರರ ದೂರಾಲೋಚನೆ ಮತ್ತು ದೂರದೃಷ್ಟಿ ಕಾರಣವಾಗಿದೆ’ ಎಂದು ಸ್ಮರಿಸಿದರು.

‘ಮೈಸೂರು ರೈಲು ನಿಲ್ದಾಣವು ಶೀಘ್ರದಲ್ಲೇ ವಿಶ್ವದರ್ಜೆಯ ನಿಲ್ದಾಣವಾಗುವ ಹೊಸ್ತಿಲಲ್ಲಿದೆ. ಭವಿಷ್ಯದಲ್ಲಿನ ಜನದಟ್ಟಣೆಗೆ ತಕ್ಕಂತೆ ಹಾಗೂ ಜನರ ಪ್ರಯಾಣದ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲು ಆಧುನಿಕ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT