ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಇಡಿ ಫಲಕಗಳಲ್ಲಿ ಸ್ವಚ್ಛತಾ ಅರಿವು

ಸ್ವಚ್ಛತೆಯ ಜಾಗೃತಿಗೆ ಫಲಕಗಳ ಮೊರೆ
Last Updated 28 ಜನವರಿ 2019, 20:00 IST
ಅಕ್ಷರ ಗಾತ್ರ

ಪ್ಲಾಸ್ಟಿಕ್‌ ತ್ಯಜಿಸಿ, ಬಟ್ಟೆ ಚೀಲಗಳನ್ನು ಬಳಸಿ. ಹಸಿ ಮತ್ತು ಒಣ ತ್ಯಾಜ್ಯಕ್ಕಾಗಿ ಪ್ರತ್ಯೇಕ ಬುಟ್ಟಿಗಳನ್ನು ಇರಿಸಿ ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ನಗರಕ್ಕೆ ಸಹಕರಿಸುತ್ತೇನೆ. ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸಲು ಪ್ರತಿಯೊಬ್ಬರೂ ಕೈ ಜೋಡಿಸೋಣ. ಮಳೆ ನೀರು ಕೊಯ್ಲು ಅಳವಡಿಸಿ, ನೀರನ್ನು ಮಿತವಾಗಿ ಬಳಸಿ... ನಿಗದಿತ ಅವಧಿಯಲ್ಲಿ ಕಂದಾಯ ಪಾವತಿಸಿ...

ಇದು ಯಾವುದೋ ಜಾಥಾದಲ್ಲಿ ಕೇಳಿ ಬಂದ ಘೋಷಣೆಗಳಲ್ಲ. ಕರಪತ್ರಗಳಲ್ಲಿ ಮುದ್ರಿತವಾದ ಜಾಗೃತಿ ಸಂದೇಶಗಳೂ ಅಲ್ಲ. ಮೈಸೂರು ನಗರ ದೇಶದ ಸ್ವಚ್ಛ ನಗರ ಎಂಬ ಬಿರುದನ್ನು ಮರಳಿ ಪಡೆಯುವ ಉದ್ದೇಶದಿಂದ ನಗರದ ವಿವಿಧ ಕಡೆಗಳಲ್ಲಿ ಮೈಸೂರು ಮಹಾನಗರ ಪಾಲಿಕೆ ಅಳವಡಿಸಿರುವ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಮೂಡಿ ಬರುತ್ತಿರುವ ಅರಿವಿನ ಬರಹ.

ಸ್ವಚ್ಛ ಸರ್ವೇಕ್ಷಣೆ 2019 ಜಾರಿಯಲ್ಲಿರುವ ಈ ಅವಧಿಯಲ್ಲಿ ನಗರದ ನೈರ್ಮಲ್ಯದ ಕುರಿತು ಹಾಗೂ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವ ಜಾಗೃತಿ ಮೂಡಿಸಲು ಈ ಫಲಕಗಳನ್ನು ಅಳವಡಿಲಾಗಿದೆ. ಪಾಲಿಕೆಯು ಸ್ವಚ್ಛತೆಯ ದೃಷ್ಟಿಯಲ್ಲಿ ಕೈಗೊಂಡಿರುವ ಕ್ರಮಗಳು, ಕಸ ವಿಲೇವಾರಿ ಘಟಕದ ದೃಶ್ಯಾವಳಿಗಳು, ನಗರದ ಸೌಂದರ್ಯ, ಜಲಜಾಗೃತಿಯ ಪಾಠ, ಮೂಲದಲ್ಲೇ ಕಸ ವಿಂಗಡಣೆ ಮಾಡುವ ಕುರಿತು ಪೌರಕಾರ್ಮಿಕರಿಂದಲೇ ಜಾಗೃತಿ ಸಂದೇಶ ಇರುವ ವಿಡಿಯೊ, ಅರಮನೆ ನಗರಿಗೆ ಸಮೀಪ ಇರುವ ಜಿಲ್ಲೆಗಳ ಪ್ರವಾಸಿ ತಾಣಗಳು, ಸ್ವಚ್ಛ ಸರ್ವೇಕ್ಷಣಾ ಆ್ಯಪ್ ಬಳಕೆ, ಅದಕ್ಕೆ ಪಾಲಿಕೆಯ ಸ್ಪಂದನೆ ಮೊದಲಾದ ಅಂಶಗಳ ದೃಶ್ಯಾವಳಿಗಳು ಈ ಫಲಕಗಳಲ್ಲಿ ಮೂಡಿಬರುತ್ತಿವೆ. ಈ ರೀತಿಯ ಸಂದೇಶಗಳು ಪ್ರತಿ ಹತ್ತು ನಿಮಿಷಕ್ಕೆ ಒಂದು ಬಾರಿ ಬದಲಾಗುತ್ತಿರುತ್ತವೆ.

ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 5 ಫಲಕಗಳನ್ನು ಅಳವಡಿಸಲಾಗಿದೆ. ನಗರದ ರೈಲು ನಿಲ್ದಾಣ, ಹಾರ್ಡಿಂಜ್‌ ವೃತ್ತದಲ್ಲಿ ದಸರಾ ಸಂದರ್ಭದಲ್ಲೇ ಇವುಗಳನ್ನು ಅಳವಡಿಸಲಾಗಿತ್ತು. ಈಗ ಹೆಚ್ಚುವರಿಯಾಗಿ ಮೃಗಾಲಯ, ರಾಮಸ್ವಾಮಿ ವೃತ್ತ ಹಾಗೂ ಕೆಆರ್‌ಎಸ್‌ ರಸ್ತೆಯ ಒಂಟಿಕೊಪ್ಪಲು ವೃತ್ತದಲ್ಲಿ ಅಳವಡಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಸರ್ಕಾರದ ಜಾಹೀರಾತುಗಳನ್ನು ಮಾತ್ರ ಪ್ರದರ್ಶಿಲಾಗುತ್ತಿದೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇವುಗಳನ್ನು ಪಾಲಿಕೆ ಕಚೇರಿಯಿಂದಲೇ ನಿಯಂತ್ರಿಸಲಾಗುತ್ತಿದ್ದು, ನಿರ್ವಾಹಕರು ಮೊಬೈಲ್‌ನಿಂದಲೇ ಅಪ್‌ಲೋಡ್‌ ಮಾಡಬಹುದಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎರಡು ವರ್ಷ ದೇಶದ ‘ಸ್ವಚ್ಛ ನಗರಿ’ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ ಮೈಸೂರು, ಬಳಿಕ ಈ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಕೈ ತಪ್ಪಿದ ಸ್ಥಾನವನ್ನು ಮತ್ತೆ ಪಡೆಯಲೇ ಬೇಕು ಎಂದು ಪಣ ತೊಟ್ಟಿರುವ ಪಾಲಿಕೆಯು ನಿರಂತರವಾಗಿ ಈ ದಿಸೆಯಲ್ಲಿ ಶ್ರಮಿಸುತ್ತಿದೆ. ಅದಕ್ಕಾಗಿ ದಿನವಿಡೀ ಸ್ವಚ್ಛತಾ ಕಾರ್ಯ, ಸ್ವಚ್ಛತೆಗೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳನ್ನೂ ಅಳವಡಿಸಿಕೊಂಡಿದೆ. ಜತಗೆ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲೂ ವಿವಿಧ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿಯೇ ಡಿಜಿಟಲ್‌ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.

5 ಕಿಲೋ ವಾಟ್‌ ವಿದ್ಯುತ್ ಸಾಮರ್ಥ್ಯದ ಈ ಫಲಕಗಳು 2.5 ಮೀಟರ್ ಎತ್ತರ, 5 ಮೀಟರ್ ಅಗಲ ಇವೆ. ಪ್ರತಿ ದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ 10ರ ವರೆಗೆ ದೃಶ್ಯಾವಳಿಗಳನ್ನು ಬಿತ್ತರಿಸಲಾಗುತ್ತಿದೆ. ಸ್ವಚ್ಛ ಸರ್ವೇಕ್ಷಣಾ ಅಭಿಯಾನದಡಿ 14ನೇ ಹಣಕಾಸು ಯೋಜನೆ ಅನುದಾನದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಪ್ರತಿ ಫಲಕಗಳಿಗೆ ₹ 18.8 ಲಕ್ಷ ವೆಚ್ಚವಾಗಿದೆ.

ಮನೆಗಳಲ್ಲಿ ನೀರಿನ ಮಿತವಾದ ಬಳಕೆ, ವಿದ್ಯುತ್‌ಶಕ್ತಿಗೆ ಪರ್ಯಾಯವಾಗಿ ಸೌರಶಕ್ತಿ ಬಳಕೆ, ಒಬ್ಬ ವ್ಯಕ್ತಿಗೆ ದಿನಕ್ಕೆ ಬೇಕಾದ ನೀರು ಮತ್ತು ಬಳಕೆಯಾಗುತ್ತಿರುವ ಜೀವಜಲ, ದುಂದುವೆಚ್ಚವಾಗುವ ರೀತಿ, ಅದನ್ನು ನಿಯಂತ್ರಿಸುವ ಬಗೆ, ಮಳೆ ನೀರು ಸಂಗ್ರಹದ ಮಾದರಿ, ಕಂದಾಯ ಪಾವತಿ, ಚಾಮುಂಡಿ ಬೆಟ್ಟದ ಮನೋಹರ ದೃಶ್ಯ, ಬಂಡೀಪುರ ವನ್ಯಧಾಮದಲ್ಲಿ ಪ್ರಾಣಿಗಳ ವಿಹಾರ, ಅರಮನೆ ನಗರಿಯ ಪ್ರಮುಖ ತಾಣಗಳು, ಸಾಂಸ್ಕೃತಿಕ ಸೊಗಡು, ನಗರದ ಜನಸಂಖ್ಯೆ, ತ್ಯಾಜ್ಯ ನಿರ್ವಹಣಾ ಘಟಕದ ಕಾರ್ಯಚಟುವಟಿಕೆ, ಮೂಲದಲ್ಲೇ ಕಸ ವಿಂಗಡಣೆ, ಪಕ್ಕದ ಜಿಲ್ಲೆಗಳ ಪ್ರಾಕೃತಿಕ ಸೊಬಗಿನ ದರ್ಶನವೂ ಈ ಡಿಜಿಟಲ್‌ ಫಲಕಗಳಲ್ಲಿ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT