ಮೈಸೂರು: ‘23 ವರ್ಷಗಳಿಂದ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಈ ಸರ್ತಿ ದಸರೆಯನ್ನು ಮರೆಯಲಾರೆ. ಇಷ್ಟು ಜನ, ಜೈಕಾರವನ್ನು ನೋಡಿಯೂ ಇರಲಿಲ್ಲ, ಕೇಳಿಯೂ ಇರಲಿಲ್ಲ. ಅಭಿಮನ್ಯು ಬನ್ನಿಮಂಟಪ ತಲುಪಿಯೇ ಬಿಟ್ಟ. ಅವನು ನನ್ನ ದೇವರು’
–ಜಂಬೂಸವಾರಿಯ ಅಂಬಾರಿ ಆನೆ ‘ಅಭಿಮನ್ಯು’ ಮಾವುತ ವಸಂತ ಆನೆಯ ಸೊಂಡಿಲನ್ನು ನೇವರಿಸುತ್ತಾ ಹೇಳಿದ ಹೆಮ್ಮೆಯ ಮಾತುಗಳು..
‘ಅರಮನೆ ಒಳಗೇ ಎರಡು ವರ್ಷ ಜಂಬೂಸವಾರಿ ಹೊತ್ತಿದ್ದ. ಚಾಮುಂಡೇಶ್ವರಿಯ ದಯೆ ಎಲ್ಲವೂ ಚೆನ್ನಾಗಿ ನಡೆದಿದೆ. ತಾಯಿ ಬೆಂಬಲ ಕೊಟ್ಟಿದ್ದರಿಂದ, ಗಾಬರಿಯಾಗದೇ ಹೆಜ್ಜೆ ಹಾಕಿದ. ಅವನ ಸಾರಥಿಯಾಗಿದ್ದು ನನ್ನ ಪುಣ್ಯ. ಇದು ದೇವರು ನೀಡಿದ ಕೆಲಸ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಲಕ್ಷಾಂತರ ಜನರ ನಡುವೆ ಅಂಬಾರಿ ಹೊತ್ತು ನಡೆಯುವುದು ಸುಲಭವಲ್ಲ. 23 ವರ್ಷಗಳಿಂದ ಹಾಡುವವರ ರಥದ ಆನೆಯಾಗಿ, ಛತ್ರಿ ಹಿಡಿವ ನೌಫತ್ ಆನೆಯಾಗಿ ಭಾಗವಹಿಸಿದ್ದ. ಮೂರು ವರ್ಷದಿಂದ ಅರ್ಜುನನ ನಂತರ ಅಂಬಾರಿ ಹೊರುವ ಕಾರ್ಯವನ್ನು ತಾಯಿ ಚಾಮುಂಡಿ ನೀಡಿದ್ದಾಳೆ. ಸಲೀಸಾಗಿ ಎಲ್ಲ ಮಾಡುತ್ತಿದ್ದಾನೆ’ ಎಂದರು.
‘ಮೊದಲ ಸರ್ತಿ ಅಂಬಾರಿ ಹೊತ್ತಾಗ ನಾನು ಭಯಗೊಂಡಿದ್ದೆ. ಅರಣ್ಯ ಇಲಾಖೆ ಅಧಿಕಾರಿಗಳು ಧೈರ್ಯ ತುಂಬಿದರು. ಈ ಸರ್ತಿ ಲಕ್ಷಾಂತರ ಜನರ ಮಧ್ಯೆ ತೆರಳುವಾಗ ಚಾಮುಂಡಿ ತಾಯಿಗೆ ಕೈ ಮುಗಿಯುವಾಗ ಎಂಥ ಆನೆಯೊಂದಿಗೆ ನಾನಿದ್ದೇನೆ ಅನ್ನಿಸಿಬಿಟ್ಟಿತು’ ಎಂದು ಕಣ್ಣೀರಾದರು.
‘ಇನ್ನೂ ಮೂರು ವರ್ಷ ಅಂಬಾರಿ ಹೊರುತ್ತಾನೆ. ಅಭಿಮನ್ಯು ಹುಲಿ– ಕಾಡಾನೆಗಳನ್ನು ಅಟ್ಟುವ ಕೆಲಸದಲ್ಲೂ ಫಸ್ಟೂ. ಸಕ್ರೆಬೈಲು, ಮಹಾರಾಷ್ಟ್ರದಲ್ಲಿ ಕಾಡಾನೆ ಅಟ್ಟುವಾಗ ಅದರೊಂದಿಗೆ ಸೆಣಸಾಡಿ ಜನರ ಜೀವ ಉಳಿಸಿದ ನನ್ನ ದೇವರು. ಅದಕ್ಕೇ ಡಾಕುಟ್ರು ಚಿಟ್ಟಪ್ಪ ಅಭಿಮನ್ಯುಗೆ ಎಕೆ47 ಅಂತ ಹೆಸರಿಟ್ಟರು’ ಎಂದು ಸ್ಮರಿಸಿದರು.