ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಂದ್ರತೆ ಹೆಚ್ಚಳ: ಜನವಸತಿಯತ್ತ ಹುಲಿಗಳು..

ಬಂಡೀಪುರ, ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಏರಿಕೆ * ಅಭಿವೃದ್ಧಿ ಚಟುವಟಿಕೆಗಿಲ್ಲ ಮಿತಿ: ತಜ್ಞರ ಕಳವಳ
Published : 29 ಜನವರಿ 2024, 23:30 IST
Last Updated : 29 ಜನವರಿ 2024, 23:30 IST
ಫಾಲೋ ಮಾಡಿ
Comments

ಮೈಸೂರು: ಕಾಡಂಚಿನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು ನಗರದ ಏಳೆಂಟು ಕಿ.ಮೀ ಸುತ್ತಮುತ್ತ ಕಾಣಿಸಿಕೊಳ್ಳುತ್ತಿವೆ. ರಾಷ್ಟ್ರೀಯ ಉದ್ಯಾನಗಳಲ್ಲಿ ಹುಲಿ ಸಾಂದ್ರತೆಯ ಹೆಚ್ಚಳ ಹಾಗೂ ಅಭಿವೃದ್ಧಿ ಒತ್ತಡ, ಹೊಸ ಆವಾಸಸ್ಥಳಗಳ ಹುಡುಕಾಟದ ಒತ್ತಡಕ್ಕೆ ಅವುಗಳನ್ನು ಸಿಲುಕಿಸಿವೆ ಎನ್ನುವುದು ಪರಿಸರ ತಜ್ಞರ ಪ್ರತಿಪಾದನೆ.

‘ಪರಿಸರ ಸೂಕ್ಷ್ಮವಲಯದಲ್ಲಿ ಮಾನವ ಕೇಂದ್ರಿತ ಅಭಿವೃದ್ಧಿಗೆ ಕಡಿವಾಣ ಹಾಕಬೇಕು. ಬೆಂಗಳೂರಿನ ಅಭಿವೃದ್ಧಿಗೆ ಮೀಸಲಿಡುವಂತೆ ಬಜೆಟ್‌ನಲ್ಲಿ ಶೇ 10ರಷ್ಟು ಅನುದಾನ  ವನ್ಯಜೀವಿಗಳ ರಕ್ಷಣೆಗೆ ನೀಡಬೇಕು. ಸರ್ಕಾರ ಶಾಶ್ವತ ನೀತಿಗಳನ್ನು ರೂಪಿಸಬೇಕು’ ಎಂದು ಕೃಪಾಕರ ಹಾಗೂ ಸಂಜಯ್ ಗುಬ್ಬಿ ಹೇಳುತ್ತಾರೆ. 

ಹುಲಿ ಹೆಚ್ಚಳಕ್ಕೇ ಕೆಲಸ: ‘ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿಯೇ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ. ಜಿಂಕೆಯಂಥ ಪ್ರಾಣಿಗಳ ಸಂತತಿ ಹೆಚ್ಚಾಗಲು ಕೆರೆಗಳನ್ನು ನಿರ್ಮಿಸಿ, ವರ್ಷವಿಡೀ ನೀರು ತುಂಬಿಸಲಾಗುತ್ತಿದೆ. ಮನೆಗಳಲ್ಲಿ ಜಾನುವಾರು ಸಾಕಿದಂತೆ ಈ ಕ್ರಮ. ಅದರಿಂದ ಸಾಂದ್ರತೆ ಹೆಚ್ಚಾಗಿ ಹೊಸ ನೆಲೆಗಳ ಹುಡುಕಾಟದ ಒತ್ತಡದಲ್ಲಿ ಹುಲಿಗಳು ಸಿಲುಕಿವೆ’ ಎಂದು ವನ್ಯಜೀವಿ ತಜ್ಞ ಸಂಜಯ ಗುಬ್ಬಿ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಆವಾಸಸ್ಥಾನಕ್ಕೆ ಸೂಕ್ತವಲ್ಲದ ಪ್ರದೇಶಗಳತ್ತಲೂ ಹುಲಿಗಳು ಬರುತ್ತಿವೆ. ಹೀಗಾಗಿಯೇ ಮಂಡಕಳ್ಳಿಯಲ್ಲಿ ಹುಲಿಯೊಂದು ರಸ್ತೆ ಅಪಘಾತದಿಂದ ಮೃತಪಟ್ಟಿದೆ. ಚಿಕ್ಕನಹಳ್ಳಿ, ಅರಬ್ಬಿತಿಟ್ಟು ಸೇರಿದಂತೆ ಚಿಕ್ಕಪುಟ್ಟ ಕಾಡು, ಬೆಟ್ಟಗಳತ್ತ ಹುಲಿಗಳು ಮುಖಮಾಡಿವೆ’ ಎಂದರು.

‘ಹುಲಿಗಳಿಗೆ ವಾರಕ್ಕೆ ಕನಿ‌ಷ್ಠ 100 ಕೆ.ಜಿ ಆಹಾರ ಬೇಕು. ಕಾಡುಹಂದಿ, ಜಿಂಕೆ, ಕಡವೆ ಸೇರಿದಂತೆ ಬಲಿ ಪ್ರಾಣಿಗಳೂ ಹೆಚ್ಚಿರಬೇಕು. ಆದರೆ, ಜನವಸತಿ ಪ್ರದೇಶ ಸಮೀಪದ ಕುರುಚಲು ಕಾಡುಗಳಲ್ಲಿ ನೆಲೆಗೊಳ್ಳುವ ಹುಲಿ ಅನಿವಾರ್ಯವಾಗಿ ದನ, ಕರು, ಜಾನುವಾರು ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ’ ಎಂದರು. 

‘ಕಾವೇರಿ, ಮಲೆಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಹುಲಿ ನೆಲೆಗೊಳ್ಳಲು ಅವಕಾಶವಿದೆ. ವನ್ಯಜೀವಿ ಕಾರಿಡಾರ್‌ಗಳನ್ನು ರಕ್ಷಿಸಬೇಕು. ಜೀವ ಪರಿಸರ ವ್ಯವಸ್ಥೆ ಆಧರಿಸಿದ ನಿರ್ವಹಣೆ ಕಡೆಗೆ ವೈಜ್ಞಾನಿಕ ಕ್ರಮಗಳನ್ನು ಇಲಾಖೆ ಅನುಸರಿಸಬೇಕು’ ಎಂದು ಹೇಳಿದರು.

‘ಕಳೆದುಕೊಂಡ ನಂತರವಷ್ಟೇ ಅರಣ್ಯಗಳ ಬೆಲೆ ಗೊತ್ತಾಗುತ್ತದೆ. ದೇಶದ ಭೂಭಾಗದ ಶೇ 5ರಷ್ಟು ಸಂರಕ್ಷಿತ ಕಾಡುಗಳಿವೆ. ರಾಜ್ಯದ ಬಂಡೀಪುರ, ನಾಗರಹೊಳೆ, ಅಣಶಿ–ದಾಂಡೇಲಿ ಸೇರಿದಂತೆ ಅರಣ್ಯಗಳನ್ನು ಮಾನವ ಕೇಂದ್ರಿತ ಅಭಿವೃದ್ಧಿ ಚಟುವಟಿಕೆಗಳಿಂದ ದೂರವಿಡಬೇಕು’ ಎಂದರು.

‘ಹೊಸ ನೆಲೆ ಹುಡುಕಾಟ’

‘ಹುಲಿ ಮರಿಗಳು 18 ತಿಂಗಳವರೆಗೆ ತಾಯಿಯೊಂದಿಗೆ ಇದ್ದು ನಂತರ ಹೊಸ ನೆಲೆಗಳ ಅನ್ವೇಷಣೆ ನಡೆಸುತ್ತವೆ. ಮಂಡಕಳ್ಳಿಯಲ್ಲಿ ಅಪಘಾತಕ್ಕೆ ಬಲಿಯಾದ ಹುಲಿ ನೆಲೆಯ ಹುಡುಕಾಟದಲ್ಲಿತ್ತು ಎನಿಸುತ್ತದೆ’ ಎಂದು ವನ್ಯಜೀವಿ ತಜ್ಞ ಕೃಪಾಕರ ‘‍ಪ್ರಜಾವಾಣಿ’ಗೆ ಹೇಳಿದರು.  ‘ಬಂಡೀಪುರ ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಶೇ 50ರಷ್ಟು ಲಂಟಾನ ಬೆಳೆದಿರುವುದರಿಂದ ಬಲಿ ಪ್ರಾಣಿಗಳ ಸಂಖ್ಯೆ ಏರುಪೇರಾಗಿದೆ. ಅ‌ದನ್ನು ತೆರವುಗೊಳಿಸಿ ಆಹಾರ ಲಭ್ಯತೆ ಹೆಚ್ಚಿಸಬೇಕು. ಕಾಡಂಚಿನ ಕುರುಚಲು ಕಾಡು ಬಫರ್‌ ವಲಯಗಳ ರಕ್ಷಣೆ ಆದ್ಯತೆಯಾಗಬೇಕು’ ಎಂದರು.

ಎಲ್ಲೆಲ್ಲಿ ಕಾಣಿಸಿಕೊಂಡಿವೆ?

ನಾಗರಹೊಳೆ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳು ಮೈಸೂರಿನಿಂದ 60–90 ಕಿಮೀ ದೂರದಲ್ಲಿವೆ. ಕಾಡಂಚಿನ ಬಫರ್ ವಲಯಗಳಲ್ಲಿ ಹುಲಿಗಳು ಬರುವುದು ಸಾಮಾನ್ಯ. ಆದರೆ ಮೈಸೂರು ಹೊರವಲಯದಲ್ಲಿ ಕಳೆದೊಂದು ವರ್ಷದಿಂದ ಮೂರು ಬಾರಿ ಹುಲಿ ಕಾಣಿಸಿಕೊಂಡಿವೆ.  ಜ.14ರಂದು ಶ್ರೀರಂಗಪಟ್ಟಣದ ತಾಲ್ಲೂಕಿನ ಮಹದೇವಪುರ ಚನ್ನಹಳ್ಳಿ ಮತ್ತು ಬಿದರಹಳ್ಳಿಹುಂಡಿ ಆಸುಪಾಸಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಮೈಸೂರು ತಾಲ್ಲೂಕಿನ ಚಿಕ್ಕಕಾನ್ಯ ದೊಡ್ಡಕಾನ್ಯ ಬ್ಯಾತಹಳ್ಳಿ ಸಿಂಧುವಳ್ಳಿಯಲ್ಲಿ ಹುಲಿ ಕಾಣಿಸಿಕೊಂಡಿತ್ತು. ಆಗಸ್ಟ್‌ನಲ್ಲಿ ಜಯಪುರ ಹೋಬಳಿಯ ಚಿಕ್ಕನಹಳ್ಳಿ ಅರಣ್ಯ ಪ್ರದೇಶದ ಅರಸಿನಕೆರೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ತಾಯಿ ಹುಲಿ ಜೊತೆ ಎರಡು ಮರಿಗಳು ಕಾಣಿಸಿಕೊಂಡಿದ್ದವು.

ಕಾಡಂಚಿನ ಕಂದಾಯ ಭೂಮಿಯಲ್ಲಿ ಬೆಳೆದಿದ್ದ ಕುರುಚಲು ಕಾಡುಗಳು ಸರ್ಕಾರ ತೆಗೆದುಕೊಳ್ಳುವ ಅಕ್ರಮ–ಸಕ್ರಮ ನಿರ್ಧಾರದಿಂದ ನಾಶವಾಗುತ್ತಿವೆ. ಆವಾಸಸ್ಥಳಗಳಲ್ಲಿ ಒತ್ತಡ ಹೆಚ್ಚಾಗುತ್ತಿದೆ.
-ಕೃಪಾಕರ, ವನ್ಯಜೀವಿ ತಜ್ಞ
ಅಭಿವೃದ್ಧಿ ಎಲ್ಲಿ ಮಾಡಬೇಕು? ಮಾಡಬಾರದು? ಎಂಬುದನ್ನು ಸರ್ಕಾರ ದಾಖಲಿಸಿ ನಿಯಮ ರೂಪಿಸಬೇಕು. ಅರಣ್ಯ ಹಾಗೂ ಕಾಡಂಚು ಮಾನವ ಕೇಂದ್ರಿತ ಅಭಿವೃದ್ಧಿ ಮುಕ್ತವಾಗಬೇಕು.
-ಸಂಜಯ ಗುಬ್ಬಿ, ವನ್ಯಜೀವಿ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT